ಕುಮಟಾ: ಪರೇಶ್ ಮೇಸ್ತನ ಸಾವಿನ ರಾಜಕೀಯ ಲಾಭ ಪಡೆದು ಅಧಿಕಾರಕ್ಕೆ ಬಂದ ಬಿಜೆಪಿ ನಾಲ್ಕೂವರೆ ವರ್ಷ ತೆಪ್ಪಗಿದ್ದು, ಪರೇಶ್ ಮೇಸ್ತ ಕುಟುಂಬಕ್ಕೆ ಯಾವುದೇ ಸಹಾಯ ಮಾಡದೆ, ಸಿಬಿಐ ರಿಪೋರ್ಟ್ ಬಂದ ತಕ್ಷಣ ಬಿಲ ಸೇರಿದ ಬಿಜೆಪಿ ಮುಖಂಡರು ಹೊಸ ನಾಟಕ ಮಾಡಲು ಹೊರಟಿರುವುದು ಹಾಸ್ಯಾಸ್ಪದ ಎಂದು ಮಾಜಿ ಶಾಸಕಿ ಶಾರದಾ ಶೆಟ್ಟಿ ಟೀಕಿಸಿದ್ದಾರೆ.
ತಮ್ಮದೇ ಸರಕಾರ ಕೇಂದ್ರ ಹಾಗೂ ರಾಜ್ಯದಲ್ಲಿದ್ದರೂ ಪರೇಶ್ ಮೇಸ್ತನ ಸಾವಿಗೆ ಹೊಸ ಸ್ವರೂಪ ಕೊಟ್ಟು ಸಿಬಿಐ ರಿಪೋರ್ಟ್ ಬಗ್ಗೆ ಅನುಮಾನ ವ್ಯಕ್ತಪಡಿಸಿ ಮುಖ್ಯಮಂತ್ರಿಗಳಿಗೆ ಪುನರ್ ತನಿಖೆಗೆ ಒತ್ತಾಯಿಸಿರುವುದು ರಾಜಕೀಯ ಬಂಡತನಕ್ಕೆ ಸಾಕ್ಷಿಯಾಗಿದೆ. ಸಾಕ್ಷಿ ನಾಶಮಾಡಿದ್ದಾರೆ ಎನ್ನುವ ಬಿಜೆಪಿ ಮುಖಂಡರು ಒಮ್ಮೆ ಹಿಂದೆ ನಡೆದ ಘಟನೆಯನ್ನು ಮೆಲಕು ಹಾಕಿಕೊಳ್ಳುವುದು ಉತ್ತಮ. ಯಾಕೆಂದರೆ ಬಿಜೆಪಿ ಮುಖಂಡರ ಅಪೇಕ್ಷೆಯಂತೆಯೇ ಮಣಿಪಾಲ ಆಸ್ಪತ್ರೆಯಲ್ಲಿ, ಬಿಜೆಪಿ ಮುಖಂಡರ ಸಮ್ಮುಖದಲ್ಲಿ ಫೋಟೋ ಮತ್ತು ವಿಡಿಯೋ ಚಿತ್ರೀಕರಣದಲ್ಲಿ ಪೋಸ್ಟ್ ಮಾರ್ಟಮ್ ನಡೆಸಿರುತ್ತಾರೆ. ಒಂದುವೇಳೆ ಸಾಕ್ಷಿ ನಾಶವಾಗಿದೆ ಎಂದರೆ ಅದನ್ನು ಬಿಜೆಪಿ ಮುಖಂಡರೇ ಮಾಡಿಸಿರುತ್ತಾರೆ, ಆದ್ದರಿಂದ ಅವರ ವಿರುದ್ಧವೇ ತನಿಖೆ ನಡೆಸಬೇಕಾಗುತ್ತದೆ. ಸಾಕ್ಷಿ ನಾಶ ಮಾಡಿದ್ದಾರೆ ಎನ್ನುವ ತಾವು ಮೊದಲ ಸಾಕ್ಷಿ ನಾಶ ಮಾಡಿದವರನ್ನು ಸಿಬಿಐ ಯಾಕೆ ಬಂಧಿಸಲಿಲ್ಲ? ಜನರಿಗೆ ಇನ್ನೊಮ್ಮೆ ತಪ್ಪು ಸಂದೇಶ ನೀಡಿ ಮುಂದಿನ ಎಲೆಕ್ಷನ್ ಲಾಭ ಪಡೆಯುವ ಹೊನ್ನಾರವೇ..? ಜನರು ಬುದ್ಧಿವಂತರಿದ್ದಾರೆ, ಎಲ್ಲವನ್ನೂ ತಿಳಿಯುವ ಶಕ್ತಿ ಜನತೆಗೆ ಇದೆ ಎನ್ನುವುದು ತಿಳಿದಿರಲಿ. ಪರೇಶ್ ಮೇಸ್ತ ಪ್ರಕರಣದಿಂದ ಲಾಭ ಪಡೆದು ಅಧಿಕಾರಕ್ಕೆ ಬಂದು ಬಿಜೆಪಿಯು ಪರೇಶ್ ಮೇಸ್ತನ ಕುಟುಂಬಕ್ಕೆ ಏನು ಸಹಾಯ ಮಾಡಿದ್ದಾರೆ ಎನ್ನುವುದನ್ನು ಜನತೆಗೆ ತಿಳಿಸಲಿ ಎಂದಿದ್ದಾರೆ.
ಪರೇಶ ಮೇಸ್ತನ ಫೋಟೋ ಹಾಗೂ ತಂದೆಯನ್ನು ಕ್ಷೇತ್ರದಾದ್ಯಂತ ಕರೆದು ಕಾಂಗ್ರೆಸ್ ವಿರುದ್ಧ ಅಪಪ್ರಚಾರ ಮಾಡಿ ಎಲೆಕ್ಷನ್ ಗೆದ್ದ ನಂತರ ಅವರ ಕುಟುಂಬ ಅನಾಥ ಮಾಡಿದ ನಿಮಗೆ ಮಾನ ಮರ್ಯಾದೆ ಇದೆಯೇ..? ನ್ಯಾಯ ಕೊಡುವ ಬದಲು ಇನ್ನೊಮ್ಮೆ ಆ ಪ್ರಕರಣಕ್ಕೆ ಮರುಜೀವ ಪಡೆಯಲು ಹೊರಟಿರುವುವ ಬಿಜೆಪಿಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ. ಶಾಂತಿ ಸುವ್ಯವಸ್ಥೆಗೆ ಹೆಸರುವಾಸಿಯಾಗಿದ್ದ ನಮ್ಮ ಜಿಲ್ಲೆಯನ್ನು ಈ ಘಟನೆ ಮೂಲಕ ಉದ್ರಿಕ್ತಗೊಳ್ಳುವಂತೆ ಮಾಡಿ, ದೇಶದಲ್ಲೇ ಕಪ್ಪು ಚುಕ್ಕೆಗೆ ಗುರಿಯಾಗುವಂತೆ ಮಾಡಲು ಪ್ರೆರೇಪಿಸಿದ ಬಿಜೆಪಿಯಲ್ಲಿದ್ದ ಮುಖಂಡರನ್ನು ಕೂಡಲೇ ಬಂಧಿಸಲಿ. ಅಲ್ಲದೆ ವಿನಾಕಾರಣ ಕೇಸ್ ನಿಂದ ಅಲೆಯುತ್ತಿರುವ ಅಮಾಯಕ ಯುವಕರನ್ನು ಮುಖ್ಯಮಂತ್ರಿಗಳೊಂದಿಗೆದಿಗೆ ಚರ್ಚಿಸಿ ಕೂಡಲೇ ಮುಕ್ತಗೊಳಿಸಲಿ ಎಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.