ಹೊನ್ನಾವರ: ತಾಲೂಕಿನ ಸಾಲ್ಕೋಡ್ ಗ್ರಾಮದಲ್ಲಿ ಚಿರತೆ ಕಾಟದ ಹಿನ್ನೆಲೆ ಕಾಂಗ್ರೆಸ್ ಮುಖಂಡ ಮಂಜುನಾಥ ನಾಯ್ಕ ನೇತ್ರತ್ವದಲ್ಲಿ ವಲಯ ಅರಣ್ಯಾಧಿಕಾರಿಗಳ ಕಛೇರಿಯಲ್ಲಿ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚನಾ ಸಭೆ ಜರುಗಿತು.
ಗ್ರಾಮದಲ್ಲಿ ಕಾಡು ಪ್ರಾಣಿಯ ಹಾವಳಿ ವಿಪರೀತವಾಗಿದ್ದು, ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ. ತಾವು ಬೆಳೆದ ಬೆಳೆ ಹಾನಿಯಿಂದ ಕಂಗೆಟ್ಟಿದ್ದು, ರೈತರಿಗೆ ಇತ್ತಿಚಿನ ವರ್ಷದಲ್ಲಿ ಸಾಕು ಪ್ರಾಣಿಯಾದ ನಾಯಿ, ಆಕಳುಗಳು ತಮ್ಮ ಮುಂದೆಯೇ ಪ್ರಾಣ ಕಳೆದುಕೊಳ್ಳುತ್ತಿದೆ. ಇದೀಗ ಮನುಷ್ಯರ ಮೇಲೂ ಹಾನಿ ಮಾಡುತ್ತಿದ್ದು, ಇಲಾಖೆಯ ಸಿಬ್ಬಂದಿಗಳು ಕಾಡುಪ್ರಾಣಿಗಳ ನಿಯಂತ್ರಣ ಮಾಡಿ ಸಾರ್ವಜನಿಕರು ನೆಮ್ಮದಿಯಿಂದ ಜೀವನ ನಡೆಸಬೇಕು. ಅರಣ್ಯ ಇಲಾಖೆಯವರು ಚಿರತೆ ಸೆರೆ ಹಿಡಿಯುವ ಜೊತೆ ಸಾರ್ವಜನಿಕರಿಗೆ ಭಯ ಹೊಗಲಾಡಿಸಲು ಮುಂದಾಗುವಂತೆ ಮನವಿ ಮಾಡಿದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ಕೆ.ಸುದರ್ಶನ, ಸಾರ್ವಜನಿಕರಿಗೆ ಸಮಸ್ಯೆ ಸಂಭವಿಸದಂತೆ ಕೈಗೊಂಡ ಕ್ರಮದ ಕುರಿತು ಮಾಹಿತಿ ನೀಡುವಾಗ ಗ್ರಾಮದಲ್ಲಿ ಮತ್ತೆ ಆಕಳಿನ ಮೇಲೆ ದಾಳಿಯ ಮಾಹಿತಿ ಲಭ್ಯವಾಗುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಾಲ್ಕೋಡ್ ಕೆಳಗಿನಕೇರಿಯ ಶಂಕರ ನಾಯ್ಕ ಇವರ ಆಕಳ ಕರುವು ಚಿರತೆ ದಾಳಿಗೊಳಗಾದ ಸ್ಥಳ ಪರಿಶೀಲನೆ ನಡೆಸಿ, ಇಲಾಖೆಯ ಅಧಿಕಾರಿಗಳು ಮತ್ತು ಸಾರ್ವಜನಿಕರಿಂದ ಮಾಹಿತಿ ಪಡೆದರು. ಚಿರತೆ ಹಾವಳಿ ನಿಯಂತ್ರಿಸುವಂತೆ ಗ್ರಾಮಸ್ಥರು ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು. ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗುವ ಜೊತೆ ಪರಿಹಾರ ಒದಗಿಸುವಂತೆ ಒತ್ತಾಯಿಸಿದರು.
ಜಿ.ಕೆ.ಸುದರ್ಶನ ಪತ್ರಕರ್ತರೊಂದಿಗೆ ಮಾತನಾಡಿ, ಈಗಾಗಲೇ ಇದೇ ಗ್ರಾಮದಲ್ಲಿ ಒಂದು ಚಿರತೆ ಈ ವಾರದಲ್ಲೆ ಸೆರೆ ಹಿಡಿಯಲಾಗಿದೆ. ಮತ್ತೆ ಆಕಳಿಗೆ ಹಾನಿ, ಮನುಷ್ಯರ ಮೇಲೆ ದಾಳಿ ಮಾಹಿತಿ ಅರಿತು ಅಧಿಕಾರಿಗಳು ಚಿರತೆ ಸೆರೆಹಿಡಿಯಲು ಒಂದು ಬೊನ್ ವ್ಯವಸ್ಥೆ ಕಲ್ಪಿಸಿದ್ದಾರೆ. ಸಂಜೆ ಮತ್ತೆ ಎರಡು ಬೋನ್ ತಂದು ಗ್ರಾಮದಲ್ಲಿ ಇಡುವ ಮೂಲಕ ಸೆರೆ ಹಿಡಿಯಲು ಪ್ರಯತ್ನ ಮುಂದುವರೆಸುತ್ತೇವೆ. ಸಾರ್ವಜನಿಕರು ಸಂಚರಿಸುವಾಗ ಎಚ್ಚರಿಕೆಯಿಂದ ಇರುವ ಜೊತೆ ಇಲಾಖೆಗೆ ಸಹಕರಿಸಬೇಕಿದೆ. ಸಾಯಂಕಾಲದಿಂದ ರಾತ್ರಿ ಇಡೀ ದಿನ ಒಂದು ವಾರಗಳ ಕಾಲ ನಮ್ಮ ಇಲಾಖೆಯ ಅಧಿಕಾರಿಗಳು ಗ್ರಾಮದಲ್ಲಿ ಸಂಚರಿಸುವ ಕಾರ್ಯ ಆರಂಭಿಸಿದ್ದೇವೆ. ಪ್ರಾಣಿ ಹಾನಿ ಸಂಭವಿಸಿದ ಮಾಲಕರು ಅರ್ಜಿ ಸಲ್ಲಿಸಿ ಪರಿಹಾರಕ್ಕೆ ವ್ಯವಸ್ಥೆ ಇದೆ ಎಂದರು.
ಕಾಂಗ್ರೆಸ್ ಮುಖಂಡ ಮಂಜುನಾಥ ನಾಯ್ಕ ಮಾತನಾಡಿ, ಮುಂದಿನ ದಿನದಲ್ಲಿ ಇಂತಹ ಅನಾಹುತ ಸಂಭವಿಸದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು. ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳದಲ್ಲೆ ಇರುವ ಬಗ್ಗೆ ಮಾಹಿತಿ ನೀಡಿ ಸಂಭವಿಸದಂತೆ ಅಧಿಕಾರಿಗಳು ದೂರವಾಣಿ ಸಂಖ್ಯೆ ನೀಡಿದ್ದಾರೆ. ಹೆಚ್ಚಿನ ಬೋನ್ ವ್ಯವಸ್ಥೆ ಕಲ್ಪಿಸಿ ಚಿರತೆ ಸೆರೆ ಹಿಡಿಯುವ ಪ್ರಯತ್ನ ಮುಂದುವರೆಸುವ ಭರವಸೆ ನೀಡಿದ್ದಾರೆ. ಅಲ್ಲದೆ ಹಂದಿ, ಮಂಗ ಮುಂತಾದ ಪ್ರಾಣಿಯಿಂದ ತೆಂಗಿನಕಾಯಿ, ಅಡಿಕೆ, ತೆಂಗು, ಬಾಳೆ ಸಸಿ ಹಾನಿಯ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ. ರೈತರು ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಆರ್‌ಎಫ್‌ಓ ವಿಕ್ರಂ ರೆಡ್ಡಿ, ಗ್ರಾ.ಪಂ. ಉಪಾಧ್ಯಕ್ಷೆ ಪುಷ್ಪಾ ಮಹೇಶ, ಸದಸ್ಯೆ ಆಶಾ ಮಡಿವಾಳ, ದೀಪಕ ನಾಯ್ಕ, ಮುಖಂಡರಾದ ವಿನಾಯಕ ಶೆಟ್ಟಿ, ಸಂದೇಶ ಶೆಟ್ಟಿ, ಕಿರಣ ಭಂಡಾರಿ, ಮಹೇಶ ನಾಯ್ಕ, ಜಯ ಕರ್ನಾಟಕ ಸಂಘದ ಪ್ರದೀಪ ಶೆಟ್ಟಿ, ಆರ್.ಕೆ.ಮೇಸ್ತ, ರಾಘವೇಂದ್ರ ನಾಯ್ಕ, ಶ್ರೀನಾಥ ಶೆಟ್ಟಿ ವಸಂತ ಅರೇಅಂಗಡಿ, ಶ್ರೀರಾಮ ಜಾದುಗಾರ್, ದಿವಾಕರ ನಾಯ್ಕ, ರಾಘವ ಹೆಗಡೆ, ಗ್ರಾಮಸ್ಥರು, ಇಲಾಖೆಯ ಸಿಬ್ಬಂದಿ ಇದ್ದರು.