Slide
Slide
Slide
previous arrow
next arrow

ಕಾಡು ನಮ್ಮದೆಂದು ಹೋರಾಟಕ್ಕೆ ಇಳಿದ ಜೊಯಿಡಾದ ಜನ

300x250 AD

ಜೋಯಿಡಾ: ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಜನರನ್ನ ಪ್ಯಾಕೇಜ್ ನೀಡಿ ಒಕ್ಕಲೆಬ್ಬಿಸಲು ಎನ್‌ಜಿಓ ಗಳ ಮೂಲಕ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿ ತಾಲೂಕಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಕುಣಬಿ ಭವನದಲ್ಲಿ ಸಭೆ ನಡೆಸಿದ ಪ್ರತಿಭಟನಾಕಾರರು, ನಂತರ ತಹಶೀಲ್ದಾರ್ ಕಚೇರಿಯವರೆಗೆ ಮೆರವಣಿಗೆ ನಡೆಸಿ ಅರಣ್ಯ ಇಲಾಖೆಯ ವಿರುದ್ಧ ಘೋಷಣೆ ಕೂಗಿದರು. ಹದಿನೈದು ಲಕ್ಷ ಕೊಡುವುದಾಗಿ ಹೇಳಿ ಜನರನ್ನ ಒಕ್ಕಲೆಬ್ಬಿಸಲಾಗುತ್ತಿದೆ. ನಾವು ಕಾಡಿನ ಮೂಲನಿವಾಸಿಗಳಾಗಿದ್ದು ನಮ್ಮನ್ನ ಒಕ್ಕಲೆಬ್ಬಿಸುವ ಪ್ರಯತ್ನ ಅರಣ್ಯ ಇಲಾಖೆ ಕೈ ಬಿಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಸುನೀಲ್ ಹೆಗಡೆ, ಜೊಯಿಡಾದಲ್ಲಿ ಶೇಕಡಾ 87ರಷ್ಟು ಅರಣ್ಯವಿದೆ. ಕೇವಲ 13ರಷ್ಟು ಪ್ರದೇಶದಲ್ಲಿ ಮಾತ್ರ ಜನವಸತಿಯಿದೆ. ಜೊಯಿಡಾದಲ್ಲಿನ ಅರಣ್ಯವನ್ನ ರಕ್ಷಣೆ ಮಾಡಿದ್ದೇ ಇಲ್ಲಿನ ಮೂಲ ನಿವಾಸಿಗಳು ಹೊರತು ಅರಣ್ಯ ಇಲಾಖೆಯವರಲ್ಲ ಎಂದು ಕಿಡಿಕಾಡಿದರು. ಕಾಡನ್ನ ಹೇಗೆ ಉಳಿಸಬೇಕು ಎಂದು ಅರಣ್ಯ ಇಲಾಖೆಯವರಿಗಿಂತ ಚೆನ್ನಾಗಿ ಜೊಯಿಡಾದ ಜನರಿಗೆ ತಿಳಿದಿದೆ. ಕಾಡೇ ನಮಗೆ ಜನ್ಮ ನೀಡಿದ್ದು ಎಂದು ಹಿಂದಿನಿಂದಲೂ ಕಾಡಿಗೆ, ಪ್ರಾಣಿಗಳಿಗೆ ಪೂಜೆ ಮಾಡಿಕೊಂಡು ಬಂದಿರುವ ಜನರು ಜೊಯಿಡಾದವರು. ಅರಣ್ಯ ಇಲಾಖೆಯವರಿಂದ ಕಾಡು ಉಳಿದಿಲ್ಲ, ಜನರಿಂದಲೇ ಕಾಡು ಉಳಿದಿದೆ ಎಂದರು.
ಸರ್ಕಾರಕ್ಕೆ ತಪ್ಪು ಮಾಹಿತಿಯನ್ನ ನೀಡಿ ಜೊಯಿಡಾಕ್ಕೆ ವಿವಿಧ ಯೋಜನೆಯನ್ನ ತರಲಾಗುತ್ತಿದೆ. ಯೋಜನೆ ಬರುವುದು ಬೇಸರವಿಲ್ಲ. ಆದರೆ ಈ ಯೋಜನೆಗಳಿಂದ ಜನರಿಗೆ ಯಾವುದೇ ಕಾರಣಕ್ಕೂ ಹಾನಿಯಾಗಬಾರದು. ತಾಲೂಕಿನ ಜನರು ಜೊಯಿಡಾವನ್ನ ಬಿಟ್ಟು ಬೇರೆ ಎಲ್ಲೂ ಹೋಗುವುದಿಲ್ಲ. ಈ ಹಿಂದೆ ಅರಣ್ಯ ಸಚಿವ ಸಿ.ಪಿ.ಯೋಗೇಶ್ವರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜೊಯಿಡಾದಲ್ಲಿಯೇ ಮನೆ ನಿರ್ಮಿಸಿಕೊಟ್ಟು, ಊರಿನಲ್ಲಿರುವ ದೇವರುಗಳಿಗೆ ಪೂಜೆ ಮಾಡಲು ಅವಕಾಶ ಕೊಡಬೇಕು. ಸೂಕ್ತ ಪರಿಹಾರ ಕೊಡಬೇಕು ಎಂದು ಒತ್ತಾಯಿಸಲಾಗಿತ್ತು ಎಂದರು.
ಕುಣಬಿ ಸಮಾಜದ ಜಿಲ್ಲಾಧ್ಯಕ್ಷ ಸುಭಾಷ್ ಗಾವುಡ ಮಾತನಾಡಿ, ಅರಣ್ಯ ಇಲಾಖೆಯವರು ತಾವು ಮುಂದೆ ಬರದೇ ಎನ್‌ಜಿಓ ಒಂದನ್ನ ಮುಂದೆ ಬಿಟ್ಟು ಒಕ್ಕಲೆಬ್ಬಿಸುವ ಪ್ರಯತ್ನ ಮಾಡಲಾಗುತ್ತಿದೆ. ಈ ಹಿಂದೆ ಪರಿಹಾರ ಹಣ ತೆಗೆದುಕೊಂಡು ಜಾಗ ಬಿಟ್ಟು ಕೊಟ್ಟಿ ಹೋದವರು ಗೋವಾದಲ್ಲಿ ಬೀದಿಗೆ ಬಿದ್ದಿದ್ದಾರೆ. ಈಗ ಮತ್ತೆ ಜನರನ್ನ ಹಾಗೇ ಮಾಡಲು ಹೊರಟಿದ್ದು ಯಾವುದೇ ಕಾರಣಕ್ಕೂ ಜನರು ತಮ್ಮ ಜಾಗವನ್ನ ಬಿಟ್ಟು ಕೊಡುವುದಿಲ್ಲ. ಅರಣ್ಯ ಇಲಾಖೆಯವರು ತಮ್ಮ ಪ್ರಯತ್ನ ನಿಲ್ಲಿಸಲಿ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ರಮೇಶ್ ನಾಯ್ಕ, ಸದಾನಂದ ದಬಗಾರ್, ಅಜಿತ್ ಮಿರಾಶಿ, ರವಿ ರೇಡ್ಕರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡ ಮಾಜಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ್, ಜೊಯಿಡಾ ಏನು ನಿಮ್ಮಪ್ಪನ ಜಾಗಾನಾ? ಎಂದು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
ಅರಣ್ಯ ಇಲಾಖೆ ಅಧಿಕಾರಿಗಳ ಮಕ್ಕಳಿಗೆ ಎಲ್ಲಾ ಬೇಕು. ಆದರೆ ಜೊಯಿಡಾದ ಜನರಿಗೆ ಮಾತ್ರ ಏನು ಬೇಡ ಎನ್ನುತ್ತಾರೆ. ಏನೇ ಕಾಮಗಾರಿಗಳು ಮಾಡುವುದಕ್ಕೂ ವಿರೋಧ ಮಾಡುತ್ತಾರೆ. ಅಭಿವೃದ್ಧಿ ಮಾಡಲು ಬಿಡುವುದಿಲ್ಲ. ಹುಲಿ ಜನರನ್ನ ಕೊಂದರೆ ಜನರದ್ದೇ ತಪ್ಪು ಎನ್ನುತ್ತಾರೆ. ಏಡಿಯನ್ನ ಹಿಡಿದುಕೊಂಡು ಬಂದರು ತೊಂದರೆ ಕೊಡುತ್ತಾರೆ. ಜೊಯಿಡಾವನ್ನ ನಿಮ್ಮಪ್ಪನ ಜಾಗ ಎಂದು ತಿಳಿದುಕೊಳ್ಳಬೇಡಿ ಎಂದು ಘೋಟ್ನೇಕರ್ ಹೇಳಿದರು.
ನಮ್ಮ ನಮ್ಮ ರಕ್ಷಣೆಯನ್ನ ನಾವೇ ಮಾಡಿಕೊಳ್ಳಬೇಕಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಮನುಷತ್ವದಿಂದ ನಡೆದುಕೊಳ್ಳಿ. ಹುಲಿ ಸಂರಕ್ಷಿತ ಸೇರಿ ವಿವಿಧ ಯೋಜನೆಯಿಂದ ತಾಲೂಕಿನ ಜನರು ಕಷ್ಟ ಪಡುವಂತಾಗಿದೆ. ಜೊಯಿಡಾ ತಾಲೂಕಿನ ಜನರ ಪ್ರತಿಭಟನೆಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದರು.

ಜನರಿಗೆ ಹದಿನೈದು ಲಕ್ಷ ಕೊಟ್ಟು ಹೋಗುವಂತೆ ಅರಣ್ಯ ಇಲಾಖೆಯವರು ತಿಳಿಸುತ್ತಿದ್ದಾರೆ. ನಾವು ಇಲಾಖೆಯ ಅಧಿಕಾರಿಗಳಿಗೆ 30 ಲಕ್ಷ ಕೊಡುತ್ತೇವೆ. ಅವರ ಮನೆ ಬಿಟ್ಟುಕೊಟ್ಟು ಬೇರೆ ಕಡೆ ಹೋಗಲಿ. ಅರಣ್ಯ ಇಲಾಖೆಯವರು ಜನರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಲಿ. ಇಲ್ಲದಿದ್ದರೆ ರಾಜಕಾರಣಿಗಳು ಜನರೊಟ್ಟಿಗೆ ಪ್ರತಿಭಟನೆಗೆ ಇಳಿಯಬೇಕಾಗುತ್ತದೆ. ಅಧಿಕಾರಿಗಳಿಗೆ ಅರಣ್ಯದೊಳಗೆ ಕಾಲಿಡಲು ಬಿಡುವುದಿಲ್ಲ ಎಂದು ಮಾಜಿ ಶಾಸಕ ಸುನೀಲ್ ಹೆಗಡೆ ಹೇಳಿದರು .

300x250 AD
Share This
300x250 AD
300x250 AD
300x250 AD
Back to top