ಸಿದ್ದಾಪುರ: ಅಡಿಕೆ ಮರಕ್ಕೆ ತೀವ್ರತರವಾದ ಎಲೆ ಚುಕ್ಕಿ ರೋಗದಿಂದ ಬಾದಿತವಾದ ವಾಜಗೋಡ ಪಂಚಾಯತದ ದಾನಮಾಂವ ಗ್ರಾಮದ ಕೆರೆಕಾನದ ಶಂಕರ ನಾರಾಯಣ ಹೆಗಡೆ ಇವರ ಅಡಿಕೆ ತೋಟಕ್ಕೆ ವಿಧಾನಸಭಾದ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿ ನೀಡಿ ಪರಿವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅಡಿಕೆ ಎಲೆಚುಕ್ಕಿ ರೋಗದ ಲಕ್ಷಣ ಹಾಗೂ ಭೀಕರತೆಯನ್ನು ಸರಕಾರ ಗಂಭೀರವಾಗಿ ತೆಗೆದುಕೊಂಡಿದ್ದು, ಈ ರೋಗವನ್ನು ಹೋಗಲಾಡಿಸಲು ಏನೆಲ್ಲಾ ಕ್ರಮಕೈಗೊಳ್ಳಬೇಕು ಆ ಕ್ರಮಗಳನ್ನು ತೆಗೆದುಕೊಳ್ಳಲು ಸರಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುತ್ತದೆ. ರೈತರು ಈ ಕುರಿತು ಆತ್ಮಸ್ಥರ್ಯ ಕಳೆದುಕೊಳ್ಳಬಾರದು ಹಾಗೂ ಉನ್ನತ ವಿಜ್ಞಾನಿಗಳು ಹಾಗೂ ಇಲಾಖೆಯ ಅಧಿಕಾರಿಗಳು ತೀವ್ರತರ ರೋಗ ಭಾದಿಸಿದ ಅಡಿಕೆ ತೋಟಗಳಿಗೆ ಭೇಟಿ ನೀಡಿ, ಸರಿಯಾದ ಸಮೀಕ್ಷೆ ಮಾಡಿ ರೈತರಿಗೆ ಸರಕಾರದಿಂದ ಹೆಚ್ಚಿನ ಸೌಲಭ್ಯ ಒದಗಿಸಲಾಗುವುದು ಎಂದರು.
ಅಲ್ಲದೆ ಹವಾಮಾನ ವೈಪರೀತ್ಯದಿಂದ ತೋಟಗಳ ನಿರ್ವಹಣೆ ಹಾಗೂ ಮಣ್ಣಿನ ಆರೋಗ್ಯ ಸರಿಹೊಂದಲು ಅವಶ್ಯಕ ತಾಂತ್ರಿಕ ಮಾಹಿತಿಯನ್ನು ರೈತರಿಗೆ ನೀಡಲು ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು. ತಜ್ಞರಿಂದ ಶಿಫಾರಸ್ಸು ಮಾಡಿದ ಶಿಲೀಂದ್ರ ನಾಶಕ ಸಿಂಪರಣೆಗೆ ಉಚಿತ ಔಷಧ ಒದಗಿಸಲಾಗುವುದು ಮತ್ತು ತಾಲೂಕಿನ ರೈತರ ಬೇಡಿಕೆಗನುಗುಣವಾಗಿ ಕಾರ್ಬನ್ ಫೈಬರ್ ದೋಟಿಗೆ ಅನುದಾನ ನೀಡಲು ತೋಟಗಾರಿಕಾ ನಿರ್ದೇಶನಾಲಯಕ್ಕೆ ಸೂಚಿಸಲಾಗುವುದು ಎಂದು ತಿಳಿಸಿ, ರೈತರು ಈ ರೋಗದ ಬಗ್ಗೆ ಸರಿಯಾದ ನಿರ್ವಹಣಾ ಕ್ರಮಗಳನ್ನು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಚಂದ್ರಕಲಾ ನಾಯ್ಕ, ಉಪಾಧ್ಯಕ್ಷ ಮಂಗಳ ಗೌಡ, ಸದಸ್ಯ ಕೃಷ್ಣಮೂರ್ತಿ ನಾಯ್ಕ, ಪ್ರಮುಖರಾದ ಎಮ್.ಎನ್.ಹೆಗಡೆ, ಎಮ್.ಐ.ನಾಯ್ಕ, ಶ್ರೀಕಾಂತ ಹೆಗಡೆ, ರಮಾನಂದ ಹೆಗಡೆ ಮಳಗುಳಿ, ನಾರಾಯಣ ನಾಯ್ಕ ಗಾಳ್ಮಾಂವ, ಮಹೇಂದ್ರ ನಾಯ್ಕ ಅರಸಿನಗೋಡ, ಸುಧಾಕರ ನಾಯ್ಕ, ಗೋಪಾಲ ಹೆಗಡೆ, ಎನ್.ಜಿ.ಹೆಗಡೆ, ರಾಜು ನಾಯ್ಕ ಸಣ್ಯಕೊಪ್ಪ, ಅಶೋಕ ನಾಯ್ಕ ಸಣ್ಯಕೊಪ, ರಮೇಶ ನಾಯ್ಕ ಅರಸಿಗೋಡ, ಶ್ರೀಧರ ಹೆಗಡೆ ಬೈಲಳ್ಳಿ, ಗಣಪತಿ ಆಚಾರಿ, ಶ್ರೀಧರ ಹೆಗಡೆ ವಾಜಗೋಡ, ತೋಟಗಾರಿಕೆಯ ಹಿರಿಯ ಸಹಾಯಕ ನಿರ್ದೇಶಕ ಅರುಣ ಎಚ್.ಜಿ., ಸಹಾಯಕ ನಿರ್ದೇಶಕ ಮಾಬ್ಲೇಶ್ವರ ಬಿ.ಎಸ್., ಪಿಡಿಒ ನಾಗೇಶ ಎಚ್.ಪಿ. ಹಾಗೂ ರೈತರು ಇದ್ದರು.