ಶಿರಸಿ: ಮಹಿಳೆಯೇ ಸಂಸಾರವನ್ನು ತೂಗಿಸಿಕೊಂಡು ಹೋಗುವವಳಾದ್ದರಿಂದ ಮಹಿಳೆಯರಿಗೇ ಮಧುಮೇಹದ ಬಗ್ಗೆ, ಆಹಾರ ವಿಹಾರದ ಬಗ್ಗೆ ಜಾಗೃತಿ ಮೂಡಿಸಿದರೆ ಇಡೀ ಕುಟುಂಬವೇ ಆರೋಗ್ಯಯುತವಾಗಿ ಬದುಕಲು ಸಾಧ್ಯವೆಂಬ ಯೋಚನೆಯೊಂದಿಗೆ ಶಿರಸಿ ಲಯನ್ಸ್ ಕ್ಲಬ್ ತನ್ನ ಮಹಿಳಾ ಸದಸ್ಯೆಯರುಗಳಿಗಾಗಿ ತಿಳುವಳಿಕೆ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ಕೋಶಾಧ್ಯಕ್ಷರಾದ ಲಯನ್ ರಾಜಲಕ್ಷ್ಮಿ ಹೆಗಡೆಯವರು ತಮ್ಮ ಮನೆಯ ಕೈತೋಟದಿಂದ ಆಯ್ದು ತಂದಿದ್ದ ವಿವಿಧ ಸೊಪ್ಪುಗಳನ್ನು ಮತ್ತು ಸಾಂಬಾರ ಡಬ್ಬಿಯ ಪದಾರ್ಥಗಳನ್ನು ಅಡುಗೆಯಲ್ಲಿ ಹೇಗೆ ಬಳಸಬೇಕು ಎಂಬುದನ್ನು ತಿಳಿಸಿಕೊಟ್ಟರು. ಅವರು ತಮ್ಮ ಮನೆಯ ಕೈತೋಟದಲ್ಲಿರುವ ಐವತ್ತಕ್ಕೂ ಹೆಚ್ಚು ವನಸ್ಪತಿ ಸಸ್ಯಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದರು. ಎಲ್ಲಕ್ಕಿಂತ ಮುಖ್ಯವಾಗಿ ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಬೇಕು ಮತ್ತು ವ್ಯಾಯಾಮ ಸಹಿತ ಜೀವನ ಬೇಕು, ಆಗ ಮಧುಮೇಹವಿಲ್ಲದೆ ಅಥವಾ ಅದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಸಾಧ್ಯ ಎಂದು ತಿಳಿ ಹೇಳಿದರು.
ಉತ್ತಮ ಗೆಳೆತನ, ಪ್ರೀತಿಯ ಬಾಂಧವ್ಯ, ಎಲ್ಲರೊಂದಿಗೆ ನಕ್ಕು ನಲಿಯುವ ಸದವಕಾಶಗಳು ಮನಸ್ಸನ್ನು ಮುದಗೊಳಿಸುತ್ತವೆ ಎಂಬ ಕಾರಣದಿಂದ ಎಲ್ಲರೂ ಸೇರಿ ಹರಟೆಯೊಂದಿಗೆ ಊಟ ಮಾಡಿ ಈ ವಿನೂತನ ಕಾರ್ಯಕ್ರಮವನ್ನು ಸಂಪನ್ನಗೊಳಿಸಿದರು.