ಜೊಯಿಡಾ: ಜಿಲ್ಲೆಯ ಕುಣಬಿಗಳಿಗೆ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕಾದ ಎಲ್ಲಾ ಗುಣಲಕ್ಷಣ ಇದ್ದರು ಸರಕಾರದಿಂದ ಆಗಿಲ್ಲ. ಉತ್ತರ ಕನ್ನಡ ಜಿಲ್ಲೆಯಲ್ಲಿ ಬುಡಕಟ್ಟು ಕುಣಬಿಗಳ ಸಾಂಸ್ಕೃತಿಕ ಸಂಘಟನೆ ಮಾಡಲಾಗುತ್ತದೆ. ಜೊಯಿಡಾ ಸೇರಿದಂತೆ ಎಲ್ಲಾ ತಾಲೂಕು ಕೇಂದ್ರದಿಂದ ಜಿಲ್ಲಾ ಕೇಂದ್ರ ಕಾರವಾರ ತನಕ ಪಾದಯಾತ್ರೆ ಮಾಡಿ ತಮ್ಮ ಸಂವಿಧಾನಿಕ ಹಕ್ಕಿಗಾಗಿ ಹೋರಾಟ ರೂಪಿಸುತ್ತೇವೆ ಎಂದು ಕುಣಬಿ ಸಮಾಜದ ನೂತನ ಜಿಲ್ಲಾ ಅಧ್ಯಕ್ಷ ಸುಭಾಷ ಗಾವಡಾ ಹೇಳಿದರು.
ಕುಣಬಿ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಕುಣಬಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಎಲ್ಲಾ ಗುಣಲಕ್ಷಣ ಇದೆ. ಕಳೆದ 30 ವರ್ಷಗಳಿಂದ ಹೋರಾಟ ಮಾಡುತಿದ್ದರು ಪ್ರಯೋಜನವಾಗಿಲ್ಲ. ಬಲವಾದ ಸಂಘಟನೆ ಕಟ್ಟಲು ಸ್ವಾಭಿಮಾನಿ ನಾಯಕರು ಜನಾಂಗದಿಂದ ಹುಟ್ಟಿಬರಬೇಕು. ನಾಯಕರ ಮೂಲಕ ಸಂಘಟನೆ, ಹೋರಾಟ ರೂಪಿಸಲಾಗುತ್ತದೆ. ಕುಣಬಿಗಳ ಎಸ್.ಟಿ ಹೋರಾಟ ಬಲಗೊಳಿಸಲು ಜೊಯಿಡಾ ಕೇಂದ್ರದಿಂದ ಕಾರವಾರ ತನಕ ಪಾದಯಾತ್ರೆ ಮಾಡುವ ಮೂಲಕ ಜಾಗ್ರತಿ ಜಾಥಾ ಮಾಡಿ ಹೋರಾಟ ರೂಪಿಸಲಾಗುತ್ತದೆ ಎಂದರು.
ಕಾರವಾರ, ಯಲ್ಲಾಪುರ, ಅಂಕೋಲಾ, ಶಿರಸಿ, ಹಳಿಯಾಳ, ದಾಂಡೇಲಿ ಮತ್ತು ಜೊಯಿಡಾ ತಾಲೂಕಿನಲ್ಲಿ ಕುಣಬಿಗಳು ಅನಾದಿ ಕಾಲದಿಂದಲೂ ವಾಸಮಾಡಿಕೊಂಡು ಬಂದಿದ್ದಾರೆ. ಕುಣಬಿಗಳಲ್ಲಿ ನಾಯಕತ್ವ ಬೆಳೆಯಬೇಕು. ಜನಾಂಗಕ್ಕೆ ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಶಕ್ತಿ ನೀಡಬೇಕು ಎಂದರು.
ಜಿಲ್ಲೆಯಲ್ಲಿ ಮಹಿಳೆ ಹಾಗೂ ಯುವ ಸಂಘಟನೆಯನ್ನು ಕಟ್ಟುವುದು ಮತ್ತು ಎಲ್ಲಾ ತಾಲೂಕು ಸಮಿತಿಗಳನ್ನು ಸಕ್ರಿಯಗೊಳಿಸಿ ಹೋರಾಟಕ್ಕೆ ಅಣಿಮಾಡುವ ಕೆಲಸ ಜಿಲ್ಲಾ ಸಮಿತಿ ಮಾಡಲಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಮಾಜಿ ಅಧ್ಯಕ್ಷ ಗುರುದತ್ತ ಮಿರಾಶಿ, ಮಾಜಿ ಕಾರ್ಯದರ್ಶಿ ಮಹಾಬಳೇಶ್ವರ ಕಾಜುಗಾರ, ರಾಜ್ಯ ಕಾರ್ಯದರ್ಶಿ ಲಕ್ಷ್ಮಣ ಗಾಂವಕರ, ಮುಖಂಡರಾದ ದತ್ತಾ ಗಾವಡಾ, ಮಾಬಳು ಕುಂಡಲಕರ, ತುಕಾರಾಮ ವೆಳಿಪ, ಸುಭಾಷ ವೆಳಿಪ, ಪಾಪು ಗಾವಡಾ, ರವಿ ವೆಳಿಪ, ಚಂದ್ರಕಾಂತ ಯಲ್ಲಾಪುರ, ಉಪಾಧ್ಯಕ್ಷ ಸುನಿಲ್ ದಾಂಡೇಲಿ, ಜೋಯಿಡಾ ತಾಲೂಕಾ ಅಧ್ಯಕ್ಷ ಅಜಿತ ಮಿರಾಶಿ, ಮಹಿಳಾ ಅಧ್ಯಕ್ಷೆ ದಿವ್ಯಾನಿ ಗಾವಡಾ, ಮಾಳು ಸೋಲೆಕರ, ತುಳಸಿದಾಸ ಮಿರಾಶಿ, ಚಂದ್ರಶೇಖರ ಸಾವರಕರ ಮುಂತಾದವರು ಇದ್ದರು.
ಜೊಯಿಡಾ ತಾಲೂಕಿನಲ್ಲಿ ಅರಣ್ಯ ಇಲಾಖೆಯ ಅವೈಜ್ಞಾನಿಕ ಪ್ಯಾಕೇಜಿನ ಆಮಿಷ ನೀಡಿ ಸ್ಥಳಾಂತರ ಮಾಡಲಾಗುತ್ತದೆ. ಇದು ಈ ಕೂಡಲೇ ನಿಲ್ಲಬೇಕು. ಅ.19ರಂದು ತಾಲೂಕು ಸಮಿತಿ ಹೋರಾಟ ಕೈಗೊಂಡಿದೆ. ಜಿಲ್ಲಾ ಸಮಿತಿ ಬೆಂಬಲ ನೀಡುತ್ತಿದ್ದು, ಎಲ್ಲಾ ಸಂಘಟನೆಗಳು ಸಹಕರಿಸಿ ತಾಲೂಕಿನ ಆಸ್ತಿತ್ವ ಉಳಿಸಲು ಕೈ ಜೋಡಿಸಬೇಕೆಂದು ಸುಭಾಷ ಗಾವಡಾ ಹೇಳಿದರು.