ಕುಮಟಾ: ಓರ್ವ ಪ್ರೌಢಶಾಲಾ ಶಿಕ್ಷಕರಾಗಿ, ಮುಖ್ಯಾಧ್ಯಾಪಕರಾಗಿ ಮೂರು ದಶಕಗಳಿಗೂ ಹೆಚ್ಚು ಕಾಲ ಒಂದು ಸಂಸ್ಥೆಯನ್ನು ಮುನ್ನಡೆಸುವುದು ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದೆ ಎಂದು ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್.ವಾಸರೆ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಹೊನ್ನಾವರ ಮತ್ತು ಕುಮಟಾ ತಾಲೂಕಾ ಸಾಹಿತ್ಯ ಪರಿಷತ್ತಿನ ಘಟಕದ ಆಶ್ರಯದಲ್ಲಿ ಶಿಕ್ಷಣ ಇಲಾಖೆಯಿಂದ ವಿಶೇಷ ಪುರಸ್ಕಾರಕ್ಕೆ ಒಳಗಾದ ಮಲ್ಲಾಪುರ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಎಂ.ಟಿ.ಗೌಡರ ಮನೆಯಂಗಳದಲ್ಲಿ ನಡೆದ ಸಾಧಕರ ಮನೆಗೆ ಸಾಹಿತ್ಯ ಪರಿಷತ್ತು ಕಾರ್ಯಕ್ರಮದಡಿಯಲ್ಲಿ ಎಂ.ಟಿ.ಗೌಡ ದಂಪತಿಯನ್ನು ಸನ್ಮಾನಿಸಿ ಮಾತನಾಡಿದರು.
ಯಾವುದೇ ಭೇದ ಭಾವ ಇಲ್ಲದೇ ಸರಕಾರದಿಂದ ಪುರಸ್ಕೃತರಾದ ಸಾಧಕರನ್ನು ಅವರ ಮನೆಗೆ ಹೋಗಿ ಗೌರವಿಸಿ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತನ್ನಾಗಿ ಪರಿವರ್ತಿಸುವ ಉದ್ದೇಶ ನಮ್ಮದಾಗಿದೆ ಎಂದರು.
ಸಾಹಿತಿ ಬೀರಣ್ಣ ನಾಯಕ ಮಾತನಾಡಿ, ಎಂ.ಟಿ.ಗೌಡರೊಬ್ಬ ಅತ್ಯುತ್ತಮ ಕಲಾವಿದರಾಗಿ, ಅಧ್ಯಾಪಕರಾಗಿ ವಿವಿಧ ಸಂಘಟನೆಯಲ್ಲಿ ತೊಡಗಿಸಿಕೊಂಡ ಕ್ರಿಯಾಶೀಲ ವ್ಯಕ್ತಿತ್ವದವರು. ಮಾಡುವ ಕೆಲಸದಲ್ಲಿ ಇಚ್ಛೆಯೊಂದಿದ್ದರೆ ಅದರಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದರು. ಶಿಕ್ಷಕ ಸಂಘದ ಅಧ್ಯಕ್ಷ ಎಂ.ಜಿ. ನಾಯ್ಕ ಮಾತನಾಡಿ, ರಾಜ್ಯ ಪ್ರಶಸ್ತಿಗಿಂತ ಮಿಗಿಲಾದ ವಿಶೇಷ ಪ್ರಶಸ್ತಿ ಇದಾಗಿದೆ. ಅವರು ಮಾಡಿದ ಶೈಕ್ಷಣಿಕ ಸಾಧನೆ ಅವರನ್ನು ಉನ್ನತ ಸ್ಥಾನಕ್ಕೆ ಏರಿಸಿದೆ. ಬಹುಮುಖ ಪ್ರತಿಭಾವಂತರಾದ ಎಂ.ಟಿ.ಗೌಡ ಮಾದರಿ ಮುಖ್ಯಾಧ್ಯಾಪಕರು ಎಂದರು.
ಪ್ರಶಸ್ತಿ ಪುರಸ್ಕೃತ ಎಂ.ಟಿ.ಗೌಡ ಮಾತನಾಡಿ, ಸಾಧಕರ ಮೇಲೆ ತಾವು ಇಟ್ಟ ಪ್ರೀತಿ ವಿಶ್ವಾಸವೇ ಇನ್ನಷ್ಟು ಕೆಲಸ ಮಾಡಲು ಪ್ರೇರಣೆ. ನಿಮ್ಮ ಪ್ರೀತಿಗೆ ಬೆಲೆ ಕಟ್ಟಲಾಗದು. ಸಾಹಿತ್ಯ ಪರಿಷತ್ತಿನ ಕಾರ್ಯ ಚಟುವಟಿಕೆ ಶ್ಲಾಘನೀಯವಾದದ್ದು ಎಂದರು. ಹೊನ್ನಾವರ ಸಾಹಿತ್ಯ ಪರಿಷತ್ತಿನ ಘಟಕ ಅಧ್ಯಕ್ಷ ಎಸ್.ಎಚ್.ಗೌಡ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷೆ ಸಾಧನಾ ಬರ್ಗಿ ಮಾತನಾಡಿದರು. ಪ್ರಾರಂಭದಲ್ಲಿ ಜಿಲ್ಲಾ ಕಾರ್ಯದರ್ಶಿ ಪಿ.ಆರ್. ನಾಯ್ಕ ಸ್ವಾಗತಿಸಿದರು. ಕುಮಟಾ ಘಟಕದ ಕಾರ್ಯದರ್ಶಿ ಪ್ರೊ. ಪ್ರಮೋದ ನಾಯ್ಕ ವಂದಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪುರಸ್ಕೃತ ಎಂ.ಎಂ .ನಾಯ್ಕರಿಗೆ ಜಿಲ್ಲಾಧ್ಯಕ್ಷರು ಪುಸ್ತಕ ಕಾಣಿಕೆ ನೀಡಿ ಅಭಿನಂದಿಸಿದರು.
ಸಭೆಯಲ್ಲಿ ನಿವೃತ್ತ ಅಧ್ಯಾಪಕ ಎಂ.ಜಿ.ನಾಯ್ಕ, ತಾಲೂಕು ಕಸಾಪ ಅಧ್ಯಕ್ಷ ಸುಬ್ಬಯ್ಯ ನಾಯ್ಕ, ಪ್ರೊ.ವನ್ನಳ್ಳಿ ಗಿರಿ, ಪ್ರದೀಪ ನಾಯಕ, ನಿಕಟಪೂರ್ವ ಅಧ್ಯಕ್ಷ ಡಾ.ಶ್ರೀಧರ ಗೌಡ ಉಪ್ಪಿನಗಣಪತಿ, ಅರವಿಂದ ನಾಯ್ಕ, ದಾಂಡೇಲಿ ನಗರಸಭೆಯ ಸದಸ್ಯ ಕೀರ್ತಿ ಗಾಂವ್ಕರ್, ಮೋಹನ್ ಹಲವಾಯಿ, ಅನಿಲ್ ದಂಡಗಲ್, ಜಿಲ್ಲಾ ಕೋಶಾಧ್ಯಕ್ಷ ಮುರ್ತುಜಾ ಹುಸೇನ್ ಇತರರು ಉಪಸ್ಥಿತರಿದ್ದರು.