ಮುಂಡಗೋಡ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಉತ್ತಮ ಗುಣಮಟ್ಟದ ಕಾಮಗಾರಿಗಳು ನಡೆಯುತ್ತಿವೆ. ನಮ್ಮಲ್ಲಿನ ಕೂಲಿಕಾರರು ವೈಯಕ್ತಿಕ ಹಿತಾಸಕ್ತಿ ವಹಿಸಿಕೊಂಡು ದುಡಿಮೆಯಲ್ಲಿ ತೊಡಗುತ್ತಿದ್ದಾರೆ ಎಂದು ಮಳಗಿ ಗ್ರಾಮ ಪಂಚಾಯತಿ ಅಧ್ಯಕ್ಷ ರಾಘವೇಂದ್ರ ಪಾಟೀಲ ಅಭಿಪ್ರಾಯಪಟ್ಟರು.
ಮಳಗಿ ಗ್ರಾಮ ಪಂಚಾಯತ್‌ನ ಗೋಟಗೋಡಿಕೊಪ್ಪ ಅರಣ್ಯ ಪ್ರದೇಶದಲ್ಲಿ ನರೇಗಾ ಯೋಜನೆಯಡಿ ಕೈಗೊಂಡ ಅರಣ್ಯ ಟ್ರೆಂಚ್ ಕಾಮಗಾರಿ ಸ್ಥಳದಲ್ಲಿ ಬುಧವಾರ ಕೂಲಿಕಾರರನ್ನುದ್ದೇಶಿಸಿ ಮಾತನಾಡಿದ ಅವರು, ಪ್ರತಿ ದಿನವೂ 60 ರಿಂದ 70 ಕೂಲಿಕಾರರು ಕೆಲಸ ನಿರ್ವಹಿಸುತ್ತಿದ್ದು, ಅಂತರ್ಜಲ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಕಾಮಗಾರಿಗಳನ್ನು ನೀಡಲಾಗುತ್ತಿದೆ ಎಂದರು.
ಕೂಲಿಕಾರ ವಿನಾಯಕ ಡಿ.ಮಲಗುಂದ ಮಾತನಾಡಿ, ನರೇಗಾ ಯೋಜನೆಯಡಿ ನಮ್ಮಂತ ದುಡಿಮೆಗಾರರಿಗೆ ಕೆಲಸ ನೀಡುತ್ತಿದ್ದಾರೆ. ಆದರೆ ನೂರು ದಿನ ಕೆಲಸ ನೀಡುವ ಬದಲು 150 ದಿನಗಳಿಗೆ ಕೆಲಸ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಐಇಸಿ ಸಂಯೋಜಕಿ ಪೂರ್ಣಿಮಾ ಗೌಡ, ಬಿ.ಎಫ್.ಟಿ ಹನುಮಂತ ಇಡಗೋಡ, ಸಿಬ್ಬಂದಿ ಮತ್ತಿತರರು ಇದ್ದರು.
ಪದವೀಧರ ಕೂಲಿಕಾರರು ಭಾಗಿ; ಈ ಕಾಮಗಾರಿಯಲ್ಲಿ ಸುನೀಲ್ ಕುಮಾರ್, ವಿಶ್ವೇಶ್ವರಯ್ಯ ಎಮ್.ಕೆ., ಹರೀಶ್ ಎಸ್., ಕುಸುಮಾ ಎಮ್.ಎಡಗುಪ್ಪಿ ಪದವೀಧರ ಕೂಲಿಕಾರು ಭಾಗಿಯಾಗಿದ್ದು, 60 ವರ್ಷ ಮೇಲ್ಪಟ್ಟ ಮೂರು ಕೂಲಿಕಾರರು ಭಾಗಿಯಾಗಿದ್ದರು.