ಕಾರವಾರ: ಸಕ್ಕರೆ ಆಯುಕ್ತರ ಸಭೆಯ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದೆವು. ಆದರೆ ನಮ್ಮ ನಿರೀಕ್ಷೆಗಳೆಲ್ಲವೂ ಹುಸಿಯಾಗಿದೆ ಎಂದು ಕಬ್ಬು ಬೆಳೆಗಾರರ ಸಂಘದ ಹಿರಿಯ ಮುಖಂಡ ನಾಗೇಂದ್ರ ಜೀವೋಜಿ ತಿಳಿಸಿದ್ದಾರೆ.
ಇಲ್ಲಿ ಮಾತನಾಡಿರುವ ಅವರು, ಜಿಲ್ಲೆಯಲ್ಲಿರುವ ಏಕೈಕ ಸಕ್ಕರೆ ಕಾರ್ಖಾನೆಯಾಗಿರುವ ಇಐಡಿ ಪ್ಯಾರಿ ಹಳಿಯಾಳದಲ್ಲಿದೆ. ಈ ಕಾರ್ಖಾನೆಯಿಂದ ಎಲ್ಲಾ ಹಂತದಲ್ಲಿ ರೈತರಿಗೆ ಮೋಸವಾಗುತ್ತಿದೆ. ಎಚ್ ಆ್ಯಂಡ್ ಟಿ ಹೆಸರಿನಲ್ಲಿ ಪ್ರತಿ ರೈತನಿಂದ 350- 400 ರೂ. ಹೆಚ್ಚುವರಿಯಾಗಿ ಆಕರಣೆ ಮಾಡಿಕೊಳ್ಳುತ್ತಿದ್ದಾರೆ. ಕಡಿಮೆ ರಿಕವರಿ ತೋರಿಸಿ ಎಫ್‌ಆರ್‌ಪಿ ಕಡಿಮೆ ಕೊಡುತ್ತಿದ್ದಾರೆ ಎಂದರು.
ಎಚ್ ಆ್ಯಂಡ್ ಟಿ ಪರಿಶೀಲನೆ ನಡೆಸಿ, ಅದರಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ಮರಳಿ ಕೊಡಿಸುವುದಾಗಿ ಹೇಳಿದ್ದಾರೆ. ಇದೊಂದು ಒಳ್ಳೆಯ ನಿರ್ಧಾರವನ್ನು ಸಭೆಯಲ್ಲಿ ಕೈಗೊಂಡಿದ್ದಾರೆ. ಅದನ್ನ ಬಿಟ್ಟು ಬೇರೇನೂ ಆಗಿಲ್ಲ. ಅ.15ಕ್ಕೆ ಬೆಂಗಳೂರಿನಲ್ಲಿ ಸಭೆ ಇದ್ದು, ಯೋಗ್ಯ ಬೆಲೆ ಹಾಗೂ ಎಚ್ ಆ್ಯಂಡ್ ಟಿ ಬಗ್ಗೆ ಪರಿಶೀಲನೆ ನಡೆಸುವ ಭರವಸೆ ನೀಡಿದ್ದಾರೆ. ಆ ಸಭೆಯಲ್ಲಾದರೂ ನಮ್ಮ ಬೇಡಿಕೆ ಈಡೇರಲಿ. ಇಲ್ಲದಿದ್ದರೆ ಇನ್ನಷ್ಟು ಉಗ್ರ ಪ್ರತಿಭಟನೆ ಕೈಗೊಳ್ಳಬೇಕಾಗುವುದು ಎಂದು ತಿಳಿಸಿದ್ದಾರೆ.