ಯಲ್ಲಾಪುರ: ನ.12ರಂದು ನಡೆಯಲಿರುವ ರಾಷ್ಟ್ರೀಯ ಲೋಕ ಅದಾಲತ್ ಯಶಸ್ವಿಗೊಳಿಸುವ ಕುರಿತು ಪೂರ್ವಭಾವಿ ಸಭೆ ನಗರದ ನ್ಯಾಯಾಲಯದ ಆವಾರದಲ್ಲಿ ಗುರುವಾರ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶ ಜಿ.ಬಿ.ಹಳ್ಳಾಕಾಯಿ, ದೀರ್ಘ ಕಾಲದಿಂದ ಇರುವ ಕೆಲವು ಪ್ರಕರಣಗಳನ್ನು ಎರಡು ಪಕ್ಷಗಳ ರಾಜೀ ಸಂಧಾನ ಮೂಲಕ ಇತ್ಯರ್ಥ ಮಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಲೋಕ ಅದಾಲತ್ ನಡೆಸಲಾಗುತ್ತಿದೆ. ಕಂದಾಯ ಇಲಾಖೆ, ತಾಲೂಕಾ ಪಂಚಾಯತಿ, ಗ್ರಾಮ ಪಂಚಾಯತಿಗಳು ಲೋಕ ಅದಾಲತ್ ಯಶಸ್ವಿಗೆ ಹೆಚ್ಚು ಸಹಕಾರ ನೀಡಬೇಕು. ನ.12ರಂದು ನಡೆಯುವ ಲೋಕ ಅದಾಲತ್ ಬಗ್ಗೆ ಎಲ್ಲ ಕಡೆಯೂ ವ್ಯಾಪಕ ಪ್ರಚಾರ ಮಾಡಬೇಕು. ಇದರಿಂದಾಗಿ ಹಣ ಹಾಗೂ ಸಮಯದ ಉಳಿತಾಯವಾಗಲಿದೆ ಎಂದು ಹೇಳಿದರು.
ಸಿವಿಲ್ ನ್ಯಾಯಾಧೀಶರಾದ ಲಕ್ಷ್ಮೀಬಾಯಿ ಪಾಟೀಲ ಮಾತನಾಡಿ, ರಾಷ್ಟ್ರೀಯ ಲೋಕ ಅದಾಲತ್ ಯಶಸ್ವಿಗೊಳಿಸಲು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಅಧಿಕಾರಿಗಳು ಮಾಡಬೇಕು. ಅದರಲ್ಲೂ ಪಿಡಿಒ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಗ್ರಾಮೀಣ ಭಾಗದಲ್ಲಿ ಜನರನ್ನು ಜಾಗೃತಿಗೊಳಿಸಿ, ಲೋಕ ಅದಾಲತ್ ಯಶಸ್ವಿಗೊಳ್ಳುವಂತೆ ಕೆಲಸ ಮಾಡಬೇಕು. ಜೊತೆಗೆ ಉಚಿತ ಕಾನೂನು ನೆರವು ಕಾರ್ಯಕ್ರಮಗಳು ಕೇವಲ ಹೆಸರಿಗೆ ಅಷ್ಟೇ ಕಾರ್ಯಕ್ರಮವಾಗದೇ ಅಧಿಕಾರಿಗಳು ಹಾಗೂ ಇಲಾಖೆಗಳ ಪಾಲ್ಗೊಳ್ಳುವಿಕೆಯ ಮೂಲಕ ಕಾರ್ಯಕ್ರಮದ ಮೂಲ ಉದ್ದೇಶವನ್ನು ಈಡೇರಿಸುವಂತೆ ಆಗಬೇಕೆಂದು ಹೇಳಿದರು.
ಸಹಾಯಕ ಸರಕಾರಿ ವಕೀಲರಾದ ಝೀನತ್ ಬಾನು ಶೇಖ್, ವಕೀಲರ ಸಂಘದ ಅಧ್ಯಕ್ಷ ಆರ್.ಕೆ.ಭಟ್, ಹಿರಿಯ ವಕೀಲರುಗಳಾದ ಎನ್.ಟಿ.ಗಾಂವ್ಕರ, ಎನ್.ಕೆ.ಭಟ್, ಪ್ರಕಾಶ ಭಟ್, ವಿ.ಟಿ.ಭಟ್, ವಲಯ ಅರಣ್ಯಾಧಿಕಾರಿಗಳಾದ ಎಲ್.ಎ.ಮಠ, ಡಿ.ಎಲ್.ಮಿರ್ಜಾನಕರ್, ಶಿಲ್ಪಾ ನಾಯ್ಕ, ಅಮಿತ ಚೌಹಾಣ್, ಸಮಾಜ ಕಲ್ಯಾಣ ಇಲಾಖೆಯ ಎನ್.ಎಫ್.ಮಲಮೇತ್ರಿ, ಪಟ್ಟಣ ಪಂಚಾಯತದ ಸುರೇಶ ತುಳಸಿಕರ್, ಸಹಕಾರಿ ಬ್ಯಾಂಕ್ ಹಾಗೂ ಸೊಸೈಟಿಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಲೋಕ ಅದಾಲತ್ ಯಶಸ್ವಿಗೆ ಅಧಿಕಾರಿಗಳು ಸಹಕಾರ ನೀಡಿ: ನ್ಯಾ.ಹಳ್ಳಾಕಾಯಿ
