ಶಿರಸಿ: ಕಳೆದ ಹನ್ನೆರಡು ವರ್ಷಗಳಿಂದಲೂ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡದ ಒಂದು ಕೋಣೆಯಲ್ಲಿ ನಡೆಯುತ್ತಿದ್ದ ಅಂಗನವಾಡಿಯ ಮಕ್ಕಳ ವಿದ್ಯಾಭ್ಯಾಸಕ್ಕೆ ಕೊನೆಗೂ ಶಾಶ್ವತ ಕಟ್ಟಡವೊಂದು ನಿರ್ಮಾಣವಾಗಿದೆ. ಇದು ಸಾಧ್ಯವಾಗಿದ್ದು ನರೇಗಾ ಯೋಜನೆಯಿಂದ ಎಂಬುದು ಹೆಮ್ಮೆಯ ವಿಚಾರ.
ತಾಲೂಕಿನ ಬಿಸಲಕೊಪ್ಪ ಗ್ರಾಮ ಪಂಚಾಯತ್ದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 2020-21ನೇ ಸಾಲಿನಲ್ಲಿ ಏಕಕಾಲದಲ್ಲಿ ನಾಲ್ಕು ಅಂಗನವಾಡಿಗಳು ತಲೆಯೆತ್ತಿವೆ. ಮಾವಿನ ಸರ, ಕಾಟೇಮನೆ, ಕುಪ್ಪಳ್ಳಿ, ಹಳ್ಳಿಕೊಪ್ಪ ಗ್ರಾಮಗಳಲ್ಲಿ ಮಕ್ಕಳಿಗೆ ಅಂಗನವಾಡಿ ಕಟ್ಟಡದ ಕೊರತೆಯಿತ್ತು. ಅನೇಕ ವರ್ಷಗಳಿಂದಲೂ ಈ ಗ್ರಾಮದ ಮಕ್ಕಳು ಅಂಗನವಾಡಿ ಕೇಂದ್ರವಿಲ್ಲದೆ, ಬಾಡಿಗೆ ಕಟ್ಟಡಗಳಲ್ಲಿ ಇಲ್ಲವೇ ಪಕ್ಕದ ಗ್ರಾಮಕ್ಕೆ ಹೋಗಬೇಕಾದ ಅನಿವಾರ್ಯತೆ ಇತ್ತು. ಆದ್ರೀಗ ನರೇಗಾದಾಡಿ ತಲಾ 5 ಲಕ್ಷ ವೆಚ್ಚದಲ್ಲಿ ಹೊಸ ಕಟ್ಟಡಗಳು ನಿರ್ಮಾಣವಾಗುತ್ತಿದ್ದು, ಕುಪ್ಪಳ್ಳಿ ಅಂಗನವಾಡಿ ಕಾಮಗಾರಿಯಲ್ಲಿ 427, ಹಳ್ಳಿ ಕೊಪ್ಪ 399, ಕಾಟೆಮನೆ 433, ಮಾವಿನಸರ 437 ಮಾನವ ದಿನಗಳ ಸೃಜಿಸಲಾಗಿದೆ.
ಈ ವೇಳೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಪರಶುರಾಮ ಮಲವಳ್ಳಿ ಮಾತನಾಡಿ, 2020-21ನೇ ಸಾಲಿನಲ್ಲಿ 5 ಅಂಗನವಾಡಿಗಳ ಬೇಡಿಕೆಯಿತ್ತು. ಈಗಾಗಲೇ 4 ಕಟ್ಟಡಗಳ ಕಾಮಗಾರಿ ಪೂರ್ಣಗೊಂಡಿದ್ದು, ಇನ್ನು ಒಂದು ಕಟ್ಟಡ ಕಾಮಗಾರಿ ಬಾಕಿ ಇದೆ. ಪ್ರಸ್ತುತ ದಿನಗಳಲ್ಲಿ ಶಾಲಾ ಕಾಮಗಾರಿಗಳಿಗೆ ಪ್ರಾಧಾನ್ಯತೆ ನೀಡಲಾಗುತ್ತಿದೆ ಎಂದರು. ಮಾವಿನಸರ ಅಂಗನವಾಡಿ ಕಾರ್ಯಕರ್ತೆ ಜಯಾ ಎನ್ ಪೂಜಾರಿ ಹೇಳುವಂತೆ ನಾನು ಕಳೆದ 8 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. ನರೇಗಾದಡಿ ಕಟ್ಟಡ ನಿರ್ಮಾಣದಿಂದಾಗಿ ಮಕ್ಕಳಿಗೆ ನೀಡುವ ಆಹಾರ ಪದಾರ್ಥಗಳನ್ನು ಸಂಗ್ರಹಿಸಿಡಲು, ಮಕ್ಕಳಿಗೆ ಶಿಕ್ಷಣಕ್ಕೆ ಅನುಕೂಲವಾಗಿದೆ ಎಂದರು. ಚಿಣ್ಣರ ಆಟ ಪಾಠಗಳಿಗೆ ದಾರಿದೀಪವಾಗಿದೆ. ಇನ್ನೂ ಈ ಅಂಗನವಾಡಿ ಕೇಂದ್ರಗಳಲ್ಲಿ ಶೌಚಾಲಯ, ಅಡುಗೆಕೋಣೆ, ವ್ಯವಸ್ಥಿತವಾಗಿ ನಿರ್ಮಾಣಗೊಂಡಿವೆ. 106 ಮನೆಗಳಿರುವ ಈ ಗ್ರಾಮದಲ್ಲಿ ಪ್ರತಿ ವರ್ಷವೂ 19ರಿಂದ 20 ಮಕ್ಕಳು ಇಲ್ಲಿ ಬಾಲ್ಯದ ಶಿಕ್ಷಣ ಪಡೆಯುತ್ತಿದ್ದಾರೆ.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಐಇಸಿ ಸಂಯೋಜಕರಾದ ಪೂರ್ಣಿಮಾ ಗೌಡ, ಪಂಚಾಯತ್ ಕಾರ್ಯದರ್ಶಿ ಮಂಜು ಉಪ್ಪಾರ ಹಾಗೂ ಮಾರುತಿ ವಡ್ಡರ್, ಗ್ರಾಮ ಪಂಚಾಯತಿ ಅಧ್ಯಕ್ಷ ರಾಘು ನಾಯ್ಕ, ಉಪಾಧ್ಯಕ್ಷ ನರೇಂದ್ರ ಶಾಸ್ತ್ರೀ, ಸದಸ್ಯರಾದ ಗೋಪಾಲ್ ಪಟಗಾರ್, ಶ್ರೀಧರ್ ಗೌಡ ಹಾಜರಿದ್ದರು.