ಹೊನ್ನಾವರ: ಹೊಸ ಶಿಕ್ಷಣ ನೀತಿಯ ಬಗ್ಗೆ ಮಾಹಿತಿ ಹಾಗೂ ಸೃಜನಶೀಲ ಕಲಿಕಾ ಬೋಧನೆಯ ಕುರಿತು ಕಾರವಾರ ಶೈಕ್ಷಣಿಕ ಜಿಲ್ಲೆಯ ಐದು ತಾಲೂಕುಗಳ ಶಿಕ್ಷಕರಿಗೆ ಒಂದು ದಿನದ ಕಾರ್ಯಾಗಾರ ಪಟ್ಟಣದ ಮೂಡಗಣಪತಿ ಸಭಾಭವನದಲ್ಲಿ ಅ.31ರಂದು ಆಯೋಜಿಸಲಾಗಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ಮಹೇಶ ಕಲ್ಯಾಣಪುರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೋಟರಿ ಕ್ಲಬ್, ಯುವ ಬ್ರಿಗೇಡ್ ಉತ್ತರ ಕನ್ನಡ ಹಾಗೂ ಪದವಿಪೂರ್ವ ಮುಖ್ಯಾಧ್ಯಾಪಕರ ಸಂಘದ ಸಹಯೋಗದಲ್ಲಿ ಕಾರ್ಯಾಗಾರ ನಡೆಯಲಿದೆ. ಕಾರವಾರದಿಂದ ಭಟ್ಕಳದವರೆಗಿನ ಐದು ತಾಲೂಕುಗಳಿಂದ 500 ಶಿಕ್ಷಕರು ಭಾಗವಹಿಸಲಿದ್ದು, ಬೆಳಿಗ್ಗೆ 10.30ರಿಂದ ಸಂಜೆ 4.30ರವರೆಗೆ ಕಾರ್ಯಾಗಾರ ನಡೆಯಲಿದೆ. ಸಂಪನ್ಮೂಲ ವ್ಯಕ್ತಿಗಳಾಗಿ ಹೊಸ ಶಿಕ್ಷಣನೀತಿ- 2020 ಕುರಿತು ಪಠ್ಯಪುಸ್ತಕ ಸಮಿತಿ ಸದಸ್ಯ ರೋಹಿತ ಚಕ್ರತೀರ್ಥ, ಹೊಸ ಶಿಕ್ಷಣ ನೀತಿಯಲ್ಲಿ ಮಕ್ಕಳಲ್ಲಿ ಪ್ರಖರ ರಾಷ್ಟ್ರಭಕ್ತಿಯನ್ನು ಹೆಚ್ಚಿಸುವ ಬಗ್ಗೆ ಮಿಥುನ್ ಚಕ್ರವರ್ತಿ ಸೂಲಿಬೆಲೆ, ಸೃಜನಶೀಲ ಕಲಿಕಾ ಬೋಧನೆ ಕುರಿತು ಸುರೇಶ ಕುಲಕರ್ಣಿ ತರಬೇತಿಯನ್ನು ಇದೆ ವೇಳೆ ನೀಡಲಿದ್ದಾರೆ ಎಂದು ತಿಳಿಸಿದರು.
ವಿಶ್ವ ಪ್ರವಾಸೋದ್ಯಮ ದಿನ ಹಾಗೂ ಪ್ರವಾಸೋದ್ಯಮ ಮರುಚಿಂತನೆ ಪ್ರಯುಕ್ತ ರೋಟರಿ ಕ್ಲಬ್ ಹಾಗೂ ಇಂಡೋನೇಷ್ಯಾ ಬಾಲಿ ಸೆಮಿನ್ಯಾಕ್ ರೋಟರಿ ಕ್ಲಬ್ ಆಯೋಜನೆಯಲ್ಲಿ ಅ.15ರಿಂದ 19ರವರೆಗೆ ರೋಟರಿ ಅಂತರರಾಷ್ಟ್ರೀಯ ಸ್ನೇಹ ವಿನಿಮಯ ಕಾರ್ಯಕ್ರಮ ನಡೆಯಲಿದೆ. ರೋಟರಿ ಕ್ಲಬ್‌ನವರು ಇಂಡೋನೇಷ್ಯಾ ಪ್ರವಾಸ ಕೈಗೊಂಡು ಅಲ್ಲಿಯ ಸಂಸ್ಕೃತಿಯನ್ನು ತಿಳಿಸಲಾಗುವುದು ಹಾಗೂ ಇಲ್ಲಿಯ ಸಂಸ್ಕೃತಿಯನ್ನು ಅವರಿಗೆ ತಿಳಿಸಲಿದ್ದೇವೆ ಎಂದು ತಿಳಿಸಿದರು.
ಬೆಳಿಗ್ಗೆ 10 ಗಂಟೆಗೆ ಸಭಾ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿ.ಪಂ. ಸಿಇಓ ಪ್ರಿಯಾಂಗಾ, ಡಿಡಿಪಿಐ ಈಶ್ವರ ನಾಯ್ಕ, ರೋಟರಿ ಡಿಸ್ಟ್ರಿಕ್ಟ್ ಗವರ್ನರ್ ವೆಂಕಟೇಶ ದೇಶಪಾಂಡೆ, ರವಿ ಹುಂಜೆ ಭಾಗವಹಿಸಲಿದ್ದಾರೆ. ಸಂಜೆ 6ರಿಂದ 7 ಗಂಟೆಯ ತನಕ ಸಾರ್ವಜನಿಕರಿಗೆ ಹಾಗೂ ಪಾಲಕರಿಗೆ ಹೊಸ ಶಿಕ್ಷಣ ನೀತಿಯಲ್ಲಿ ನಮ್ಮ ದೇಶ ವಿಶ್ವಗುರು ಆಗುವಲ್ಲಿ ನಮ್ಮ ಹೊಣೆಗಾರಿಕೆ ಏನು ಎಂಬ ಬಗ್ಗೆ ಚಕ್ರವರ್ತಿ ಸೂಲಿಬೆಲೆ ಮಾತನಾಡುವರು ಎಂದು ತಿಳಿಸಿದರು. ಶಿಕ್ಷಕರು, ಸಾರ್ವಜನಿಕರು, ಮಕ್ಕಳ ಪಾಲಕರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೋರಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಭಾರತ ವಾಲಿಬಾಲ್ ಫೆಡರೇಶನ್ ಸಹಯೋಗದಲ್ಲಿ ಅ.28ರಿಂದ 30ರವರೆಗೆ ಹೊನ್ನಾವರ ಕಾಸರಕೋಡಿನ ಬ್ಲೂ ಫ್ಲಾಗ್ ಇಕೋ ಬೀಚ್‌ನಲ್ಲಿ ರಾಷ್ಟ್ರಮಟ್ಟದ ಬೀಚ್ ವಾಲಿಬಾಲ್ ಟೂರ್ನಾಮೆಂಟ್ ಆಯೋಜಿಸಿದ್ದು, ಈ ಕಾರ್ಯಕ್ರಮಕ್ಕೆ ರೋಟರಿ ಕ್ಲಬ್ ಪೂರ್ಣ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು.
ಪತ್ರಿಕಾಗೊಷ್ಟಿಯಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿ ಡಾ.ಗಾಯತ್ರಿ ಗುನಗಾ, ಖಜಾಂಚಿ ಎಸ್.ಎನ್.ಹೆಗಡೆ, ಡಾ.ರಂಗನಾಥ ಪೂಜಾರಿ, ದಿನೇಶ ಕಾಮತ್, ನಾರಾಯಣ ಯಾಜಿ, ಜಿ.ಆರ್.ಭಟ್ ಯುವ ಬ್ರಿಗೇಡಿನ ರಣಜಿತ್ ಕುಮಾರ, ಮಹೇಶ ಮೇಸ್ತ, ರಾಘವೇಂದ್ರ ಮೇಸ್ತ, ಮೊಹಿತ್ ಶೇಟ್ ಮತ್ತಿತರರು ಇದ್ದರು.