ಕುಮಟಾ: ಹೊನ್ನಾವರದ ಪರೇಶ್ ಮೇಸ್ತಾನ ಪ್ರಕರಣದಲ್ಲಿ ನನ್ನಂತಹ ಸಾವಿರಾರು ಹಿಂದು ಹೋರಾಟಗಾರರನ್ನು ಬಲಿಪಶು ಮಾಡಿದರು ಎಂದು ಜೆಡಿಎಸ್ ಮುಖಂಡ ಸೂರಜ ನಾಯ್ಕ ಸೋನಿ ತಮ್ಮ ಆಕ್ರೋಶ ಹೊರಹಾಕಿದರು.
ಹೊನ್ನಾವರದ ಪರೇಶ್ ಮೇಸ್ತಾನ ಪ್ರಕರಣದಲ್ಲಿ ಸಿಬಿಐ ಸಲ್ಲಿಸಿದ ವರದಿಯ ಬಗ್ಗೆ ಪ್ರತಿಕ್ರಿಯೆ ನೀಡಿದ ಸೂರಜ ನಾಯ್ಕ ಸೋನಿ, ಪರೇಶ ಮೇಸ್ತನ ಪ್ರಕರಣದಲ್ಲಿ ಸಿಬಿಐ ಆಕಸ್ಮಿಕ ಸಾವು ಎಂದು ವರದಿ ನೀಡಿದೆ. ಈ ವರದಿ ಇಡೀ ಜಿಲ್ಲೆಯ ಜನತೆಗೆ ಆಘಾತ ಉಂಟಾಗಿದೆ. ಆಕಸ್ಮಿಕ ಸಾವಾದರೆ ಸಿಬಿಐ ಅಧಿಕಾರಿಗಳಿಗೆ ವರದಿ ನೀಡಲು 4 ವರ್ಷಗಳು ಬೇಕಾಯಿತೆ. ಬಿಜೆಪಿಯ ಕುತಂತ್ರ ರಾಜಕಿಯ ಅಜೆಂಡಾದಿಂದ ಮೀನುಗಾರ ಸಮುದಾಯ ಪರೇಶ ಮೇಸ್ತಾ ಮತ್ತು ಅವರ ಕುಟುಂಬಕ್ಕೆ ತೀವ್ರ ಅನ್ಯಾಯವಾಗಿದೆ. ನಮ್ಮಂಥ ಹಿಂದು ಯುವಕರ ಭಾವನೆಯನ್ನು ಕೆರಳಿಸಲಾಗಿದೆ. ಕೊಲೆಯ ಬಗ್ಗೆ ವಿಚಿತ್ರವಾಗಿ ಬಿಂಬಿಸಲಾಗಿತ್ತು. ಅದೆಲ್ಲವನ್ನು ಸಿಬಿಐ ಸುಳ್ಳು ಎಂದು ಹೇಳಲಾಗಿದೆ.
ಒಟ್ಟಾರೆ ಈ ಪ್ರಕರಣ ರಾಜಕಾರಣದ ಸುಳಿಗೆ ಸಿಲುಕಿ, ಬೇರೆ ರೂಪ ಪಡೆದ ಪರಿಣಾಮ ಸಾವಿರಾರು ಯುವಕರು, ಪೊಲೀಸ್ ಠಾಣೆ, ಕೋರ್ಟ್ ಅಲೆಯುವಂತಾಯಿತು. ಭಟ್ಕಳದ ಚಿತ್ತರಂಜನ, ತಿಮ್ಮಪ್ಪ ನಾಯ್ಕ ಹತ್ಯೆ ಪ್ರಕರಣದಂತೆ ಈ ಪ್ರಕರಣದಲ್ಲೂ ರಾಜಕಾರಣ ನಡೆದಿದೆ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಸೋನಿ ತಿಳಿಸಿದರು.