ಕಾರವಾರ: ಕೆಳ ಅಂತಸ್ತು ನಿರ್ಮಾಣಗೊಂಡು, ಮೊದಲನೇ ಮಹಡಿಯ ಕಾಮಗಾರಿ ಪ್ರಗತಿಯಲ್ಲಿರುವ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಕ್ರಿಮ್ಸ್) ಆವರಣದಲ್ಲಿ 450 ಹಾಸಿಗೆಗಳ ನೂತನ ಆಸ್ಪತ್ರೆಗೆ ಅ.11ರಂದು ಆರೋಗ್ಯ ಸಚಿವರು ಶಂಕುಸ್ಥಾಪನೆಗೆ ಬರುತ್ತಾರೆನ್ನುವುದು ಹಾಸ್ಯಾಸ್ಪದವಾಗಿದೆ ಎಂದು ತಾಲೂಕು ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಾಧವ ನಾಯಕ ಹೇಳಿದ್ದಾರೆ.
2019ರ ನ.6ಕ್ಕೆ ಆಡಳಿತಾತ್ಮಕ ಅನುಮೋದನೆಗೊಂಡ ನೂತನ ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿಯು ಅಧಿಕೃತವಾಗಿ 2021ರ ಏಪ್ರಿಲ್ 21ರಂದು ಆರಂಭವಾಗಬೇಕಿತ್ತಾದರೂ, ಕೆಲವು ಕಾರಣಗಳಿಂದಾಗಿ ಮೂರ್ನಾಲ್ಕು ತಿಂಗಳು ತಡವಾಗಿ ಕಾಮಗಾರಿ ಆರಂಭಿಸಲಾಗಿದೆ. ಬೆಂಗಳೂರಿನ ಬಿಎಸ್‌ಆರ್ ಇನ್ಫ್ರಾಟೆಕ್ ಪ್ರೈ.ಲಿ. ಕಂಪನಿ ಈ ನಿರ್ಮಾಣ ಕಾಮಗಾರಿಯ ಗುತ್ತಿಗೆ ಪಡೆದು ಕೆಲಸ ಪ್ರಗತಿಯಲ್ಲಿದೆ. ಈಗಾಗಲೇ ಕೆಳ ಅಂತಸ್ತು ನಿರ್ಮಾಣಗೊಂಡಿದೆ. ಮೊದಲನೇ ಮಹಡಿಯ ಕಾಮಗಾರಿ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಹೀಗಿರುವಾಗ ಕಾರವಾರದ ಮೆಡಿಕಲ್ ಕಾಲೇಜಿನಲ್ಲಿ ವಿವಿಧ ಉನ್ನತ ಸೌಲಭ್ಯ ಕಲ್ಪಿಸುವುದು, 450 ಬೆಡ್ ಗಳ ಆಸ್ಪತ್ರೆಗೆ ಶಿಲಾನ್ಯಾಸ ಹಾಗೂ ಜಿಲ್ಲೆಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಳ ಪರಿಶೀಲನೆಗೆ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವ ಡಾ.ಸುಧಾಕರ ಅ.11ರಂದು ಕಾರವಾರಕ್ಕೆ ಆಗಮಿಸಲಿದ್ದಾರೆ ಎನ್ನಲಾಗಿದೆ. ಸಾಮಾನ್ಯವಾಗಿ ಭೂಮಿ ಪೂಜೆಯನ್ನು ಮಾಡುವುದು ನಿರ್ಮಾಣ ಕಾಮಗಾರಿ ನಿರ್ವಿಘ್ನವಾಗಿ ನಡೆಯಲಿ ಎಂದು ಭೂಮಿತಾಯಿಯಲ್ಲಿ ಪ್ರಾರ್ಥಿಸಿಕೊಳ್ಳಲು. ಆದರೆ, ಭೂಮಿಯ ಮೇಲೆ ಈಗಾಗಲೇ ಎದ್ದು ನಿಂತಿರುವ ಕಟ್ಟಡಕ್ಕೆ ಮತ್ತೆ ಭೂಮಿ ಪೂಜೆ ಮಾಡಲು ಸಚಿವರು ರಾಜಧಾನಿಯಿಂದ ಕಾರವಾರಕ್ಕೆ ಬರುತ್ತಾರೆಂದರೆ ಇದರ ಹಿಂದಿನ ಅರ್ಥವೇನು? ಎಂದು ಪ್ರಶ್ನಿಸಿರುವ ಅವರು, ಕಂಪನಿಯವರು ಕಾಮಗಾರಿ ಸ್ಥಳದಲ್ಲಿ ಅಳವಡಿಸಿರುವ ಬೋರ್ಡ್ನಲ್ಲಿ ಉಲ್ಲೇಖಿಸಿರುವಂತೆ ಕಾಮಗಾರಿಯ ಅವಧಿ ಈ ತಿಂಗಳ 20ಕ್ಕೆ ಕೊನೆಗೊಳ್ಳಲಿದೆ. ಹೀಗಿರುವಾಗ ಅವಧಿ ಮುಗಿಯುವ 10 ದಿನಗಳ ಮುಂಚೆ ಬಂದು ಶಂಕುಸ್ಥಾಪನೆ ಮಾಡುವುದು ಯಾವ ಪುರುಷಾರ್ಥಕ್ಕೆ? ಎಂದಿದ್ದಾರೆ.
ಈ ಹಿಂದೆ ಕೂಡ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಕಾರವಾರಕ್ಕೆ ಬಂದು ಕಾಮಗಾರಿಯ ಶಂಕುಸ್ಥಾಪನೆ ಮಾಡಲಿದ್ದಾರೆ ಎಂದು ಎರಡು ಬಾರಿ ಜನರನ್ನು ನಂಬಿಸಲಾಗಿತ್ತು. ಅವರ ಬಳಿಕ ಬಂದ ಹಾಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಕೂಡ ಬರುತ್ತಾರೆಂದು ಹೇಳಲಾಗಿತ್ತು. ಈಗ ಆರೋಗ್ಯ ಸಚಿವರ ಸರದಿಯಾಗಿದೆ ಎಂದಿದ್ದಾರೆ.
ಪರೇಶ್ ಮೇಸ್ತಾನ ಸಾವಿನ ಪ್ರಕರಣದ ಲಾಭ ಪಡೆದು ಗೆದ್ದು ಬಂದ ಶಾಸಕರುಗಳು ಈಗ ಆಸ್ಪತ್ರೆ ವಿಚಾರವನ್ನ ಹಿಡಿದುಕೊಂಡಿದ್ದಾರೆ. ಸೂಪರ್ ಸ್ಪೆಷಾಲಿಟಿ, ಮಲ್ಟಿ ಸ್ಪೆಷಾಲಿಟಿ ಹೆಸರಿನಲ್ಲಿ ಜನರಿಗೆ ಮಂಕು ಬೂದಿ ಎರಚುತ್ತಿದ್ದಾರೆ. ಚುನಾವಣಾ ಅಸ್ತ್ರವನ್ನಾಗಿ ಬಳಸಿಕೊಳ್ಳಲಾರಂಭಿಸಿದ್ದಾರೆ. ಜನ ಎಚ್ಚೆತ್ತುಕೊಂಡು, ಆಸ್ಪತ್ರೆ ರಾಜಕೀಯದ ದಾಳಕ್ಕೆ ಬಲಿಯಾಗಬಾರದು.
· ಮಾಧವ ನಾಯಕ, ತಾಲೂಕು ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ