ಸಿದ್ದಾಪುರ: ಪಟ್ಟಣದ ಲಿಟಲ್ ಪ್ಲವರ್ ಅನುದಾನಿತ ಶಾಲೆಯಲ್ಲಿ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿಯಂದು, ಇವರಿಬ್ಬರ ಫೋಟೋ ಪಕ್ಕದಲ್ಲಿ ಕ್ರಿಶ್ಚಿಯನ್ ಮತದ ಮಾತೆ ಮೇರಿಯ ಫೋಟೋ ಇಟ್ಟು ಅವಮಾನ ಮಾಡಿದ್ದಾರೆ ಎಂದು ಶಾಲೆಯ ಮಕ್ಕಳ ಪಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅ.2 ರಂದು ನಡೆದ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧೀಜೀ ಹಾಗು ಲಾಲ್ ಬಹದ್ದೂರ್ ಶಾಸ್ತ್ರೀ ಪೋಟೋ ಸಣ್ಣದಾಗಿ ಇರಿಸಿ, ಕ್ರಿಶ್ಚಿಯನ್ ಮತದ ಮಾತೆ ಮೇರಿಯ ದೊಡ್ಡ ಪೊಟೋವನ್ನು ಇರಿಸಿದ್ದಾರೆ. ಜೊತೆಗೆ ಮಹಾತ್ಮ ಗಾಂಧೀಜೀಯವರೂ ಸಹ ಕ್ರಿಶ್ಚಿಯನ್ ಮತದಿಂದ ಪ್ರಭಾವಿತರಾಗಿದ್ದಾರೆ ಎಂದೆಲ್ಲಾ ಮಕ್ಕಳಿಗೆ ಬೋಧಿಸಲಾಗುತ್ತಿದೆ ಎಂದು ಮಕ್ಕಳ ಪಾಲಕರು ಆಕ್ಷೇಪಿಸಿದ್ದಾರೆ ಎನ್ನಲಾಗಿದೆ.
ಇದು ಹೀಗೆ ಮುಂದುವರೆದರೆ ಮಕ್ಕಳಲ್ಲಿ ಕ್ರಿಶ್ಚಿಯನ್ ಸಮುದಾಯ ಹಾಗೂ ಅದರ ಬಗ್ಗೆ ಹೆಚ್ಚಿನ ಆಸಕ್ತಿ ಬಂದು ಹಿಂದೂ ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುವುದರಲ್ಲಿ ಅನುಮಾನ ಇಲ್ಲಾ. ಹಿಂದೂ ಧರ್ಮೀಯರ ಭಾವನೆಗೆ ಧಕ್ಕೆ ಬರುವಂತಹ ಇಂತಹ ಘಟನೆಗಳನ್ನು ಖಂಡಿಸಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಆಗ್ರಹಗಳು ಕೇಳಿಬರುತ್ತಿವೆ.
ಸ್ವಾತಂತ್ರ್ಯ ಹೋರಾಟಗಾರರ ಜೊತೆಗೆ ಕೇವಲ ಕ್ರಿಶ್ಚಿಯನ್ ಮತದ ದೇವರ ಪೋಟೊ ಇಡುವುದರ ಮೂಲಕ ಮಕ್ಕಳಲ್ಲಿ ತಪ್ಪು ಭಾವನೆ ಮೂಡಿಸಲಾಗುತ್ತಿದೆ. ಚಿಕ್ಕಂದಿನಲ್ಲಿಯೇ ಮತಾಂತರದ ದಾರಿಗೆ ಮಕ್ಕಳನ್ನು ಎಳೆಯುವಂತಹ ಇಂತಹ ಪ್ರಯತ್ನಗಳನ್ನು ಶಿಕ್ಷಣ ಇಲಾಖೆ ಹತ್ತಿಕ್ಕಬೇಕು ಎಂಬುದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಈ ವಿಷಯ ಸಂಬಂಧಿಸಿ ಡಿಡಿಪಿಐ ಬಸವರಾಜ್ ‘e – ಉತ್ತರಕನ್ನಡ’ ಜೊತೆ ಮಾತನಾಡಿ, ಘಟನೆಯ ಕುರಿತು ಮಾಹಿತಿಯಿಲ್ಲ. ಹೆಚ್ಚಿನ ವಿಷಯ ತಿಳಿದುಕೊಂಡು ಮಾಹಿತಿ ನೀಡುವುದಾಗಿ ಹೇಳಿದರು.