• Slide
    Slide
    Slide
    previous arrow
    next arrow
  • ಹೊಸ ಪ್ರಯತ್ನದೊಂದಿಗೆ ಯಶಸ್ವಿಗೊಂಡ ಯಕ್ಷ ಪಂಚಾಮೃತ

    300x250 AD

    ಶಿರಸಿ: ನಗರದ ಟಿ.ಎಂ.ಎಸ್. ಸಭಾಭವನದಲ್ಲಿ 5 ದಿನಗಳ ಕಾಲ ನಿರಂತರವಾಗಿ ಆಯೋಜಿಸಿದ್ದ ಯಕ್ಷ ಪಂಚಾಮೃತ ಕಾರ್ಯಕ್ರಮವು ಅಭಿಮಾನಿಗಳ ಸಹಕಾರದೊಂದಿಗೆ ಅತ್ಯಂತ ಯಶಸ್ವಿಯಾಗಿ ನಡೆದು, ಕಲಾಸಕ್ತರ ಮನಸೂರೆಗೊಂಡಿದೆ.
    ಇಲ್ಲಿಯ ಹಿಲ್ಲೂರು ಯಕ್ಷಮಿತ್ರ ಬಳಗ ಹಾಗೂ ಶ್ರೀಪ್ರಭಾ ಸ್ಟುಡಿಯೋ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಯಕ್ಷ ಪಂಚಾಮೃತದಲ್ಲಿ ಅತ್ಯಂತ ನುರಿತ ಹಾಗು ಪ್ರಸಿದ್ಧ ಹಾಗೂ ಕೆಲವೊಂದು ಹಂತದಲ್ಲಿ ಕಿರಿಯ ಕಲಾವಿದರ ಕೂಡುವಿಕೆಯಿಂದ ಒಟ್ಟಾರೆ ಪಂಚಾಮೃತ ಕಾರ್ಯಕ್ರಮ ಯಶಸ್ವಿಗೊಂಡಿದ್ದು. ದಿನಗಳ ಕಾಲವೂ ಆಯ್ದ ಪೌರಾಣಿಕ ಪ್ರಸಂಗಗಳು ಪ್ರಸ್ತುತಗೊಂಡಿದ್ದು,ಸಭಾಂಗಣದಲ್ಲಿ ಕಿಕ್ಕಿರದು ನೆರೆದ ಯಕ್ಷಾಭಿಮಾನಿಗಳಿಗೆ ನಿರಾಸೆ ಮಾಡದೇ ರಸದೌತಣ ಬಡಿಸಿದಂತಿತ್ತು. ಇದು ಯಕ್ಷ ಪಂಚಾಮೃತಕ್ಕೆ ಸಿಕ್ಕ ಯಶಸ್ಸು ಎಂದರೆ ತಪ್ಪಾಗಲಿಕ್ಕಿಲ್ಲ. ಪ್ರತಿ ದಿನವು ಭಾಗವಹಿಸಿದ ಹಿಮ್ಮೇಳ ಮತ್ತು ಮುಮ್ಮೇಳ ಕಲಾವಿದರು ಪ್ರಸಂಗಕ್ಕೆತಕ್ಕ ಪಾತ್ರ ನಿರ್ವಹಣೆ ಮಾಡಿ ಪ್ರತಿಯೊಂದು ಆಖ್ಯಾನವನ್ನೂ ವಿನೂತನವಾಗಿ ನಡೆಸಿಕೊಟ್ಟಿದ್ದರೆಂಬುದಕ್ಕೆ ಎರಡು ಮಾತಿಲ್ಲ.

    ತಮ್ಮ ಕಂಠಸಿರಿಯಿಂದ ಭಾಗವತಿಕೆಯಲ್ಲಿ ರಾಮಕೃಷ್ಣ ಹೆಗಡೆ ಹಿಲ್ಲೂರು, ಚಂದ್ರಕಾಂತ್ ಮೂಡುಬಿಳ್ಳೆ,ಪ್ರಸನ್ನ ಭಟ್ ಬಾಳ್ಕಲ್ ಪ್ರಸಂಗದ ಹಾಡುಗಳನ್ನು ಸೊಗಸಾಗಿ ಹಾಡಿದರೆ, ಮದ್ದಲೆಯಲ್ಲಿ ಅನುಭವಿ ಸರ್ವ ಕಲಾವಿದರಾದ ಏ.ಪಿ.ಪಾಠಕ್, ಶಂಕರ್ ಭಾಗ್ವತ್ ಯಲ್ಲಾಪುರ ಹಾಗು ಅನಿರುದ್ಧ್ ಹೆಗಡೆ ವರ್ಗಾಸರ ಸಾಥ್ ನೀಡಿದರೆ, ಚಂಡೆ ವಾದನದಲ್ಲಿ ಶಿವಾನಂದ ಕೋಟ ಮತ್ತು ಪ್ರಸನ್ನ ಹೆಗ್ಗಾರ್ ಇವರು ಸಹಕರಿಸಿದರು.

    ಕಾಲಮಿತಿ ಪ್ರಯೋಗವಾಗಿದ್ದರಿಂದ ಸಂಜೆ 6.30ಕ್ಕೆ ಯಕ್ಷಗಾನವು ಯಾವುದೇ ಸಭಾ ಕಾರ್ಯಕ್ರಮವಿಲ್ಲದೆ ಆರಂಭಗೊಂಡು ಮುಕ್ತಾಯವನ್ನು ಕೂಡ ನಿಗದಿತ ವೇಳೆಗೆ ಮಾಡಿದ್ದು ವಿಶೇಷವಾಗಿತ್ತು.

    ಆರಂಭ ದಿನದ ಭೀಷ್ಮ ಪರ್ವದಲ್ಲಿ ಹಿರಿಯ ಅನುಭವಿ ಕಲಾವಿದ ಕೃಷ್ಣ ಯಾಜಿ ಬಳ್ಕೂರ್ ಭೀಷ್ಮ ಪಾತ್ರದಲ್ಲಿ,ಎರಡನೇ ದಿನದ ತರಣಿಸೇನ ಕಾಳಗದಲ್ಲಿ ಶ್ರೀರಾಮನಾಗಿ ಗಣಪತಿ ಹೆಗಡೆ ತೋಟಿಮನೆ, ಮೂರನೇ ದಿನದ ವರುಣಾಧ್ವರದಲ್ಲಿ ಹರಿಶ್ಚಂದ್ರ ಹಾಗೂ ನಾಲ್ಕನೇ ದಿನದ ರಾಜಾ ಉಗ್ರಸೇನದಲ್ಲಿ ರಾಮಚಂದ್ರ ಹೆಗಡೆ ಕೊಂಡದಕುಳಿ, ಶಶಿಕಾಂತ್ ಶೆಟ್ಟಿ ಕಾರ್ಕಳ ಹಾಗೂ ಕೊನೆಯ ದಿನದ ಮೀನಾಕ್ಷಿ ಕಲ್ಯಾಣದಲ್ಲಿ ಶಂಕರ ಹೆಗಡೆ ನೀಲ್ಕೋಡು,ಕಾರ್ತಿಕ್ ಚಿಟ್ಟಾಣಿ, ಶ್ರೀಮತಿ ಅಶ್ವಿನಿ ಕೊಂಡದಕುಳಿಯವರ ಮನೋಜ್ಞ ಅಭಿನಯವು ಪ್ರಸಂಗಗಳಿಗೆ ಮೆರಗು ನೀಡಿತು.

    ಇನ್ನುಳಿದಂತೆ ಅಶೋಕ್ ಭಟ್ ಸಿದ್ದಾಪುರ,ವಿನಯ್ ಭಟ್,ಮಹಾಬಲೇಶ್ವರ್ ಗೌಡ, ಮಂಜುನಾಥ್ ಹೆಗಡೆ ಹಿಲ್ಲೂರು, ರಾಜೇಶ್ ಭಂಡಾರಿ ಗುಣವಂತೆ,ಚಂದ್ರಹಾಸ ಗೌಡ ಹೊಸಪಟ್ಟಣ,ನಾಗರಾಜ್ ಭಟ್ ಕುಂಕಿಪಾಲ್,ಶ್ರೀಧರ್ ಹೆಗಡೆ ಚಪ್ಪರಮನೆ,ದೀಪಕ್ ಭಟ್ ಕುಂಕಿ ಆಯಾ ಪ್ರಸಂಗಗಳ ಪಾತ್ರಕ್ಕೆ ತಕ್ಕಂತೆ ಜೀವ ತುಂಬಿ ಪಂಚಾಮೃತಕ್ಕೆ ಹೊಸ ಭಾಷ್ಯ ಬರೆದಿದ್ದಾರೆ.

    300x250 AD

    ಭೀಷ್ಮ ಪರ್ವ ಪ್ರಸಂಗದಲ್ಲಿ ಅಭಿಮನ್ಯು ಪಾತ್ರಧಾರಿಯಾಗಿ ಪಾಲ್ಗೊಂಡ ಕುಮಾರಿ ಅಭಿಜ್ಞಾ ತನ್ನ ಅಮೋಘ ಅಭಿನಯ ಹಾಗೂ ಮಾತುಗಳಿಂದ ಯಕ್ಷಾಭಿಮಾನಿಗಳ ಮನಮುಟ್ಟಿದ್ದು ಯಕ್ಷಲೋಕದ ಭರವಸೆಯ ಕುಡಿಯಾಗುತ್ತಾಳೆ ಎಂಬುದನ್ನು ಸಾಕ್ಷೀಕರಿಸಿದ್ದಾಳೆ.

    ಇದುವರೆಗೆ ಎಲ್ಲೂ ಪ್ರದರ್ಶನಗೊಳ್ಳದ ವರುಣಾಧ್ವರ ಪ್ರಸಂಗವು ಯಕ್ಷಾಭಿಮಾನಿಗಳ ಬಹು ನಿರೀಕ್ಷಿತ ಪ್ರಸಂಗವಾಗಿತ್ತು.ನೂತನ ಆಖ್ಯಾನವಾದರೂ ಅಭಿಮಾನಿಗಳ ನಿರೀಕ್ಷೆಯಷ್ಟು ಯಶಸ್ಸಾಗಲಿಲ್ಲ ಎನ್ನುವುದು ಪ್ರೇಕ್ಷಕ ಗ್ಯಾಲರಿಯ ಮಾತಾಗಿದೆ. ಕವಿ ಅಂಬಾತನಯ ಮುದ್ರಾಡಿ ವಿರಚಿತ ‘ವರುಣಾಧ್ವರ’ ಕಥೆ ಎಲ್ಲೋ ಸ್ವಲ್ಪ ವಸ್ತುನಿಷ್ಠದ ಹೊರತಾಗಿ ರಚಿಸಲ್ಪಟ್ಟಿತೋ ಅಥವಾ ಕಾಲಮಿತಿಯಾಗಿರುವುದರಿಂದ ಸ್ವಲ್ಪ ಬದಲಾಗಿಸಲಾಗಿದೆಯೋ ಎಂಬ ಚರ್ಚೆ ಯಕ್ಷಾಭಿಮಾನಿಗಳ ವಲಯದಲ್ಲಿ ಕಂಡುಬಂತು.
    ಮುಖ್ಯವಾಗಿ ಹರಿಶ್ಚಂದ್ರನ ವಿಷಯದಲ್ಲಿ ಪುತ್ರ ವ್ಯಾಮೋಹಕ್ಕಾಗಿ ನರಬಲಿ ಎನ್ನುವುದು ಬರುತ್ತದೆಯೋ ಎಂಬುದು ಚರ್ಚೆಗೆ ಗ್ರಾಸವಾಗಿದೆ. ಹಿರಿಯ ಅನುಭವಿ ಕಲಾವಿದರ ಸಂಗಮದೊಂದಿಗೆ ಅಥವಾ ಕವಿ ಕಲ್ಪನೆಯೋ ಎಂಬ ವಿಷಯಕ್ಕೆ ಉತ್ತರ ಸಿಗಬೇಕಷ್ಟೆ.

    ಏನೇ ಇರಲಿ ಶಿಸ್ತು ಬದ್ಧವಾಗಿ ನಿರಂತರ 5 ದಿನಗಳ ಕಾಲ ನಡೆದ ಯಕ್ಷ ಪಂಚಾಮೃತ ಕಾರ್ಯಕ್ರಮಕ್ಕೆ ಕಲಾಭಿಮಾನಿಗಳ ಅಭೂತಪೂರ್ವ ಬೆಂಬಲವಂತೂ ದೊರೆತಿದ್ದು, ಹಿಲ್ಲೂರು ಯಕ್ಷಮಿತ್ರ ಮತ್ತು ಶ್ರೀಪ್ರಭಾ ಸ್ಟುಡಿಯೋ ಶಿರಸಿ ಇವರು ನಾಲ್ಕನೇ ವರ್ಷದ ಪುನಃ ಸಂಘಟನೆಗೆ ಅಭಿಮಾನಿಗಳು ಕಾದು ಕುಳಿತಿರುವಂತಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top