ಸಿದ್ದಾಪುರ: ಚರ್ಮ ಗಂಟುರೋಗ ಅಪಾಯಕಾರಿ ರೋಗವಾಗಿದ್ದು, ಅದಕ್ಕೆ ಬೇಕಾದ ಔಷಧಿಗಳು ಆಸ್ಪತ್ರೆಯಲ್ಲಿ ಲಭ್ಯವಿದೆ. ಜಿಲ್ಲೆಯ ಹಲವು ಭಾಗಗಳಲ್ಲಿ ಈ ರೋಗ ಲಕ್ಷಣ ಕಂಡು ಬಂದಿದೆ. ಈ ರೋಗವು ಒಂದು ಜಾನುವಾರಿನಿಂದ ಇನ್ನೊಂದಕ್ಕೆ ಹರಡುವುದರಿಂದ ಜಾನುವಾರುಗಳಲ್ಲಿ ಜ್ವರ, ದೇಹದಲ್ಲಿ ಗಂಟು ಮುಂತಾದ ರೋಗ ಲಕ್ಷಣ ಕಂಡುಬಂದರೆ ರೈತರು ಜಾಗೃತರಾಗಿ ಮುಂಜಾಗ್ರತ ಕ್ರಮ ಕೈಗೊಳ್ಳಿ. ವೈದ್ಯಾಧಿಕಾರಿ ಗಮನಕ್ಕೆ ತಂದು ಚಿಕಿತ್ಸೆ ಕೊಡಿಸಿ ಎಂದು ತಾಲೂಕು ಪಶು ಆಸ್ಪತ್ರೆ ಮುಖ್ಯ ಪಶುಅಧಿಕಾರಿ ಡಾ.ವಿವೇಕಾನಂದ ಹೆಗಡೆ ಸಲಹೆ ನೀಡಿದರು.
ಅವರು ತಾಲೂಕಿನ ವಾಜಗೋಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಸ್ತಿಹಕ್ಲುನಲ್ಲಿ ನಡೆದ ಬರಡು ಜಾನುವಾರು ಚಿಕಿತ್ಸಾ ಕಾರ್ಯಕ್ರಮದಲ್ಲಿ ರೈತರಿಗೆ ಮಾಹಿತಿ ನೀಡಿದರು. ಇಲಾಖೆಯಲ್ಲಿ ಅಧಿಕಾರಿಗಳು, ಸಿಬ್ಬಂದಿಗಳ ಕೊರತೆ ಇದೆ. ಅದರಲ್ಲಿಯು ಇರುವ ಸಿಬ್ಬಂದಿಗಳಿಗೆ ತರಬೇತಿ ನೀಡಿ ಸೇವೆ ನೀಡುತ್ತಿದ್ದೇವೆ. ಜಾನುವಾರು ಸಾಕಾಣಿಕೆದಾರರಿಗೆ ಪಂಚಾಯತ್‌ದಿoದ ಹೆಚ್ಚಿನ ಸಹಾಯಧನ ನೀಡಿ ಸಾಕಾಣಿಕೆಗೆ ಪ್ರೋತ್ಸಾಹ ನೀಡಬೇಕು ಎಂದರು.
ಕೊಟ್ಟಿಗೆಗಳನ್ನು ಸ್ವಚ್ಛವಾಗಿಡಿ. ಸೊಳ್ಳೆ, ನೊಣ, ಉಣ್ಣೆ ಗಳು ಆಗದಂತೆ ಎಚ್ಚರ ವಹಿಸಿ. ಇದರಿಂದ ಜಾನುವಾರು ಜೊತೆಗೆ ಮನುಷ್ಯನ ಆರೋಗ್ಯವು ಸಹ ಉತ್ತಮವಾಗಿರುತ್ತದೆ. ಮುಂದಿನ ತಲೆಮಾರಿಗೆ ಕೃಷಿ, ಜಾನುವಾರು ಸಾಕಾಣಿಕೆ ಬಗ್ಗೆ ತರಬೇತಿ ನೀಡಿ ಯುವ ಜನತೆ ಕೃಷಿ ಹೈನುಗಾರಿಕೆಯಿಂದ ದೂರ ಸರಿಯುತ್ತಿದ್ದಾರೆ, ಈ ರೀತಿ ಆಗಬಾರದು. ಹಾಗಾಗಿ ಮಕ್ಕಳನ್ನು ಉತ್ತಮ ಮಾರ್ಗದಲ್ಲಿ ಬೆಳೆಸಿ ಕೃಷಿ ಮತ್ತು ಹೈನುಗಾರಿಕೆ ಉಳಿಸಿ ಎಂದು ಕರೆ ನೀಡಿದರು.
ಹೈನುಗಾರಿಕೆಯಿಂದ ವ್ಯಾಯಾಮವಾಗುವುದರಿಂದ ಯಾವುದೇ ಕಾಯಿಲೆಗಳು ಬರುವುದಿಲ್ಲ. ಇದು ಹೈನುಗಾರಿಕೆಯ ದೊಡ್ಡ ಲಾಭ. ರೈತರು ಆರೋಗ್ಯವಾಗಿರಲು ಕೃಷಿ, ಹೈನುಗಾರಿಕೆ ಸಹ ಅತ್ಯಂತ ಪರಿಣಾಮಕಾರಿಯಾಗಿದೆ ಎಂದರು.
ವಾಜಗೋಡ ಗ್ರಾಮ ಪಂಚಾಯತ್ ಅಧ್ಯಕ್ಷೆ ಚಂದ್ರಕಲಾ ನಾಯ್ಕ್ ಕಾರ್ಯಕ್ರಮ ಉದ್ಘಾಟಿಸಿ, ಜಾನುವಾರು ಸಾಕಾಣಿಕೆಯಲ್ಲಿ ಎಲ್ಲರೂ ತೊಡಗಿಕೊಂಡು ದೇಶದ ಅಭಿವೃದ್ಧಿ ಜೊತೆಗೆ ಆರ್ಥಿಕ ಲಾಭ ಪಡೆದುಕೊಳ್ಳುವಂತಾಗಬೇಕು ಎಂದರು.
ಉಪಾಧ್ಯಕ್ಷೆ ಮಂಗಲ ಗೌಡ, ಸದಸ್ಯರಾದ ಕೃಷ್ಣಮೂರ್ತಿ ನಾಯ್ಕ್, ಎಸ್.ಎಂ.ಭಟ್, ಸುರೇಶ್ ನಾಯ್ಕ್, ನಾಗರಾಜ್ ಗೌಡರ್, ಯಶೋಧ ಹಸ್ಲರ್, ಸ್ಥಳೀಯರಾದ ಲೋಕೇಶ್ ನಾಯ್ಕ್, ಗೋಪಾಲ, ಸವಿತಾ ವಿ.ನಾಯ್ಕ್, ಪತ್ರಕರ್ತ ದಿವಾಕರ್ ಸಂಪಖAಡ ಉಪಸ್ಥಿತರಿದ್ದರು. ಹಾ.ಉ.ಸಂಘ ಮಾಸ್ತಿಹಕ್ಲುದ ಅಧ್ಯಕ್ಷ ಬಾಲಚಂದ್ರ ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇಲಾಖೆಯ ಸಿಬ್ಬಂದಿ ಮೋಹನ್ ನಾಯ್ಕ್ ಸ್ವಾಗತಿಸಿ ನಿರೂಪಿಸಿದರು. ಲಂಬಾಪುರ ಪಶು ಚಿಕಿತ್ಸಾ ಸಿಬ್ಬಂದಿ ಎಸ್.ಬಿ.ಬನ್ನಟ್ಟಿ ವಂದಿಸಿದರು.
ಜಾನುವಾರು ಸಾಗಾಣಿಕೆ ಮಾಡಲು ಪಶು ಆಸ್ಪತ್ರೆಯ ಅನುಮತಿ ಪಡೆದುಕೊಳ್ಳಬೇಕು ಜಾನುವಾರು ಖರೀದಿದಾರ, ಕೊಡುವವರ ಆಧಾರ್ ಕಾರ್ಡ್ (ಪ್ರತಿ), ಸಾಗಾಣಿಕೆ ವಾಹನದ ದಾಖಲೆ, ಚಾಲಕನ ಚಾಲನೆ ಪರವಾನಗಿ ನೀಡಿ ಅನುಮತಿ ಪಡೆದುಕೊಳ್ಳಬೇಕು ರಜಾ ದಿನದ ಸಂದರ್ಭದಲ್ಲಿ ಎರಡು ದಿನ ಮೊದಲು ಸಾಗಾಣಿಕೆ ದಿನಕ್ಕೆ ಪರವಾನಗಿ ಪಡೆದುಕೊಳ್ಳಬೇಕು. ಜಾನುವಾರು ಕೊಡುವವರು ಪರವಾನಗಿ ಪಡೆಯಬೇಕು.
· ಡಾ.ವಿವೇಕಾನಂದ ಹೆಗಡೆ, ತಾಲೂಕು ಪಶು ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ