ಯಲ್ಲಾಪುರ: ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಮೋದ್ ಹೆಗಡೆಯವರು ಯಲ್ಲಾಪುರ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಉಚಿತವಾಗಿ ಪತ್ರಿಕೆ, ಮ್ಯಾಗಜಿನ್‌ಗಳನ್ನು ಓದುವ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ.
ಹಳೆಯ ಬಸ್ ನಿಲ್ದಾಣವನ್ನು ಉರುಳಿಸಿ 7ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ಬಸ್ ನಿಲ್ದಾಣವನ್ನು ಅತ್ಯಾಧುನಿಕ ರೀತಿಯಲ್ಲಿ ನಿರ್ಮಿಸಲಾಗಿದೆ. ಈ ಬಸ್ ನಿಲ್ದಾಣದಲ್ಲಿ ಎಲ್ಲ ವ್ಯವಸ್ಥೆಗಳು ಇದ್ದರೂ, ಪತ್ರಿಕೆ ಪುಸ್ತಕಗಳನ್ನು ಮಾರಾಟ ಮಾಡುವ ಅಂಗಡಿ ಇರಲಿಲ್ಲ. ಇದರಿಂದಾಗಿ ಹಲವಾರು ಸಂಘ ಸಂಸ್ಥೆಗಳ ಪ್ರಮುಖರು ಬೇಸತ್ತು ಸಾರಿಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಅನೇಕ ಮನವಿ ನೀಡಿ ಆಗ್ರಹಿಸಿದ್ದರು ಹಾಗೂ ಪ್ರತಿಭಟನೆಯ ಎಚ್ಚರಿಕೆಯನ್ನು ನೀಡಿದ್ದರು. ಆದರೂ ಕಿವಿಗೊಡದ ಅಧಿಕಾರಿಗಳು ಪತ್ರಿಕೆ ಪುಸ್ತಕ ಮಾರಾಟಕ್ಕೆ ವ್ಯವಸ್ಥೆ ಮಾಡಿರಲಿಲ್ಲ.
ಇದರಿಂದ ಬೇಸತ್ತ ಪ್ರಮೋದ ಹೆಗಡೆಯವರು, ಬಸ್ ನಿಲ್ದಾಣದ ಕಂಟ್ರೋಲ್ ರೂಮಿನ ಪಕ್ಕದ ಒಂದು ಚಿಕ್ಕ ಕೊಠಡಿಯಲ್ಲಿ ತಮ್ಮ ಸ್ವಂತ ವೆಚ್ಚದಲ್ಲಿ ಎಲ್ಲ ಸ್ಥಳೀಯ ಹಾಗೂ ರಾಜ್ಯಮಟ್ಟದ ಪತ್ರಿಕೆಗಳನ್ನು ಸಾರ್ವಜನಿಕರು ಹಾಗೂ ಪ್ರಯಾಣಿಕರು ಓದುವ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದಾರೆ. ಈ ಹಿಂದೆಯೂ ಕೂಡ ಐಬಿ ರಸ್ತೆಯಲ್ಲಿ ಮೌನ ಗ್ರಂಥಾಲಯವನ್ನೂ ಸ್ಥಾಪಿಸಿ 60 ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಮೌನ ಗ್ರಂಥಾಲಯದಲ್ಲಿಟ್ಟು ಪುಸ್ತಕ ಪ್ರೇಮಿಗಳಿಗೆ ಉಚಿತವಾಗಿ ಓದುವ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದ್ದರು. ಇದೀಗ ಪ್ರಯಾಣಿಕರು ಹಾಗೂ ಸಾರ್ವಜನಿಕರು ಮೌನವಾಗಿ ಬಸ್ ನಿಲ್ದಾಣದ ಒಳಗಿನ ಕೊಠಡಿಯಲ್ಲಿ ಎಲ್ಲ ರೀತಿಯ ಪತ್ರಿಕೆಗಳನ್ನು ಓದುವ ವ್ಯವಸ್ಥೆಯನ್ನು ಮಾಡಿಕೊಟ್ಟು ಸಾರ್ವಜನಿಕರ ಶ್ಲಾಘನೆಗೆ ಪಾತ್ರರಾಗಿದ್ದಾರೆ.