ಅಂಕೋಲಾ: ತಾಲೂಕಿನಲ್ಲಿ ಈ ಬಾರಿಯ ಗಣೇಶೋತ್ಸವದಲ್ಲಿ ನಾನಾ ಬಗೆಯ ರೂಪಕಗಳು ಗಮನ ಸೆಳೆದವು. ಹಾಗೇ ನಾಮಧಾರಿ ಕಲ್ಯಾಣ ಮಂಟಪದಲ್ಲಿ ಪ್ರತಿಷ್ಠಾಪಿಸಲಾದ ಗಣೇಶೋತ್ಸವದಲ್ಲಿ ಎಲ್ಲ ಸಮುದಾಯದ ವಿದ್ಯಾರ್ಥಿಗಳಿಗಾಗಿ ಸಮಿತಿಯ ಅಧ್ಯಕ್ಷ ರಮೇಶ ಎಸ್.ನಾಯ್ಕ ತೆಂಕಣಕೇರಿ ಇವರ ನೇತೃತ್ವದಲ್ಲಿ ವಿವಿಧ ಸ್ಪರ್ಧೆಯನ್ನು ಆಯೋಜಿಸಿರುವುದು ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಿದಂತಾಗಿದೆ.
ನಾಮಧಾರಿ ಕಲ್ಯಾಣ ಮಂಟಪದಲ್ಲಿ ಆರು ದಿನಗಳ ಕಾಲ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಭಕ್ತಿಗೀತೆ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಗಣಪತಿ ಚಿತ್ರ ಬಿಡಿಸುವ ಸ್ಪರ್ಧೆ, ನಾರಾಯಣಗುರು ಚಿತ್ರ ಬಿಡಿಸುವ ಸ್ಪರ್ಧೆ ಆಯೋಜಿಸಲಾಗಿತ್ತು. ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ವಿದ್ಯಾರ್ಥಿಗಳಿಗಾಗಿ ಎಲ್ಲ ಸ್ಪರ್ಧೆಯನ್ನು ಪ್ರತ್ಯೇಕ ವಿಭಾಗವಾಗಿ ಆಯೋಜಿಸಲಾಗಿತ್ತು.
ಈ ಸ್ಪರ್ಧೆಯಲ್ಲಿ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿಜೇತ ವಿದ್ಯಾರ್ಥಿಗಳಿಗೆ ನಗದು ಹಾಗೂ ಪ್ರಮಾಣಪತ್ರ ನೀಡಲಾಯಿತು. ಹಾಗೇ ಸ್ಪರ್ಧೆಗೆ ಆಗಮಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಅವರ ಭಾವಚಿತ್ರವುಳ್ಳ ಪ್ರಶಂಸನ ಪತ್ರವನ್ನು ನೀಡಲಾಯಿತು. ಒಂದು ಸಮುದಾಯದ ಹಬ್ಬದಲ್ಲಿ ಸ್ಪರ್ಧೆಯನ್ನು ಆಯೋಜಿಸಿ ಎಲ್ಲ ಸಮಾಜದವರಿಗೂ ಅವಕಾಶ ನೀಡಿರುವುದು ಶ್ಲಾಘನೀಯ ಎಂಬ ಮಾತು ಕೇಳಿಬರುತ್ತದೆ. ಸಮಿತಿಯ ಅಧ್ಯಕ್ಷ ರಮೇಶ ನಾಯ್ಕ, ಕಾರ್ಯದರ್ಶಿ ಮೋಹನ ಎಚ್. ನಾಯ್ಕ ಹಾಗೂ ಎಲ್ಲ ಪದಾಧಿಕಾರಿಗಳ ಪಾತ್ರ ಮಹತ್ತರವಾದದ್ದು ಎಂಬ ಅಭಿಪ್ರಾಯ ಸಹಜವಾಗಿಯೇ ಸ್ಪರ್ಧೆಯಲ್ಲಿ ಭಾಗವಹಿಸಿದ ಪಾಲಕರ ಹೊಗಳಿಕೆಯಾಗಿದೆ.