ಕಾರವಾರ: ಉತ್ತರ ಕನ್ನಡಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಕಾರವಾರದ ಮೆಡಿಕಲ್ ಕಾಲೇಜಿನಲ್ಲಿ ಸೂಪರ್ ಸ್ಪೆಷಾಲಿಟಿ ಸೌಲಭ್ಯ ಕಲ್ಪಿಸಲು ಶಾಸಕಿ ರೂಪಾಲಿ ಎಸ್.ನಾಯ್ಕ ಕೇಳಿದ ಪ್ರಶ್ನೆಗೆ ಆರೋಗ್ಯ ಸಚಿವ ಡಾ.ಸುಧಾಕರ್ ವಿಧಾನಸಭೆಯಲ್ಲಿ ಉತ್ತರಿಸಿ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಕಾರವಾರ ಮೆಡಿಕಲ್ ಕಾಲೇಜಿನಲ್ಲಿ ಉನ್ನತ ವೈದ್ಯಕೀಯ ಸೌಲಭ್ಯ ಕಲ್ಪಿಸುವುದಾಗಿ ಭರವಸೆ ನೀಡಿದರು. ಇದರಿಂದ ನಿರಂತರವಾಗಿ 1525 ದಿನಗಳಿಂದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ರೂಪಾಲಿ ನಾಯ್ಕ ನಡೆಸಿದ ಹೋರಾಟ ಸಫಲವಾದಂತಾಗಿದೆ.
ಕಳೆದ ವಾರ ಆರೋಗ್ಯ ಸಚಿವರ ಗೈರುಹಾಜರಿಯಿಂದ ತಡೆಹಿಡಿಯಲಾದ ತಮ್ಮ ಚುಕ್ಕೆ ಗುರುತಿನ ಪ್ರಶ್ನೆ 787ರ ಮೇಲೆ ಮಾತನಾಡಿದ ಶಾಸಕಿ ರೂಪಾಲಿ ಎಸ್.ನಾಯ್ಕ, ಜಿಲ್ಲೆಯ ಆರೋಗ್ಯಸೇವೆ ತೃಪ್ತಿಕರವಾಗಿಲ್ಲ. ಹೃದ್ರೋಗ, ನರರೋಗ ಮತ್ತಿತರ ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆ ಮತ್ತು ಅಪಘಾತಗಳಾದಾಗ ಹೊರ ಜಿಲ್ಲೆಗಳ ದೂರದ ಆಸ್ಪತ್ರೆಗೆ ಹೋಗಬೇಕಾದ ಪರಿಸ್ಥಿತಿ ಇದೆ. ಪ್ರಯಾಣದ ನಡುವೆಯ ಪ್ರಾಣ ಕಳೆದುಕೊಂಡ ಉದಾಹರಣೆಯೂ ಇದೆ. ಇದರಿಂದ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆಗಲೇಬೇಕು. ಎಲ್ಲೇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡಿದರೂ ನನ್ನ ಅಭ್ಯಂತರ ಇಲ್ಲ. ಸೂಕ್ತ ಸ್ಥಳವನ್ನು ನೋಡಿ ಆಸ್ಪತ್ರೆ ನಿರ್ಮಾಣವಾಗಲಿ ಎಂದರು.
ಆದರೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರೋಗ್ಯಸೇವೆಗೆ ಸಿದ್ಧವಾಗಲು 5-6 ವರ್ಷಗಳಾದರೂ ಬೇಕು. ಈಗ ಶೀಘ್ರದಲ್ಲಿ ಜನತೆಗೆ ಉನ್ನತ ವೈದ್ಯಕೀಯ ಸೇವೆ ಸಿಗಬೇಕಾದಲ್ಲಿ ಕಾರವಾರದ ಮೆಡಿಕಲ್ ಕಾಲೇಜನ್ನು ಮೆಲ್ದರ್ಜೆಗೇರಿಸಿ, ಸೂಪರ್ ಸ್ಪೆಷಾಲಿಟಿ ಸೌಲಭ್ಯ ಕಲ್ಪಿಸಬೇಕು. ಈಗ ಮೆಡಿಕಲ್ ಕಾಲೇಜಿನಲ್ಲಿ 160 ಕೋಟಿ ರೂ.ವೆಚ್ಚದಲ್ಲಿ 450 ಹಾಸಿಗೆ ಸಾಮರ್ಥ್ಯ ಇರುವ ಆಸ್ಪತ್ರೆ ನಿರ್ಮಾಣವಾಗುತ್ತಿದೆ. ಮೆಡಿಕಲ್ ಕಾಲೇಜಿನಲ್ಲಿ ಸೂಪರ್ ಸ್ಪೆಷಾಲಿಟಿ ಸೌಲಭ್ಯ ಕಲ್ಪಿಸಲು 7 ತಜ್ಞ ವೈದ್ಯರನ್ನು ಸಂದರ್ಶನಕ್ಕೆ ಕರೆದರೂ ಕೇವಲ ಒಬ್ಬ ವೈದ್ಯರು ಮಾತ್ರ ಸಂದರ್ಶನಕ್ಕೆ ಆಗಮಿಸಿದ್ದರು. ಉಳಿದ ಆರು ವಿಭಾಗಕ್ಕೆ ತಜ್ಞ ವೈದ್ಯರು ಹಾಗೂ ಎಂಆರ್ ಐ ಯಂತ್ರವನ್ನು ನೀಡಬೇಕು. ಆಸ್ಪತ್ರೆಗೆ ಅಗತ್ಯವಾದ 30 ಕೋಟಿ ರೂ.ಗಳನ್ನು ನೀಡಲು ಆರ್ಥಿಕ ಇಲಾಖೆ ಹಿಂದೇಟು ಹಾಕಿದೆ. ಮತ್ತೆ ಪ್ರಸ್ತಾವನೆ ಸಲ್ಲಿಸಿ 30 ಕೋಟಿ ರೂ. ತಕ್ಷಣ ಬಿಡುಗಡೆ ಆಗುವಂತೆ ಮಾಡಬೇಕು ಎಂದು ಆಗ್ರಹಿಸಿದರು.
ನಾನು ಶಾಸಕಳಾಗಿ ಆಯ್ಕೆಯಾದಾಗಿನಿಂದ ಅಂದರೆ 16-07-2018ರಿಂದ ಇದುವರೆಗೆ 1525 ದಿನಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ 33 ಮನವಿಗಳನ್ನು ನೀಡಿದ್ದೇನೆ. ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಅಂದಿನ ಸಚಿವರುಗಳಾದ ತುಕಾರಾಂ, ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಹಿಂದಿನ ಆರೋಗ್ಯ ಸಚಿವ ಶ್ರೀರಾಮುಲು, ಇಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಡಾ.ಸುಧಾಕರ್ ಹೀಗೆ ಎಲ್ಲರಿಗೆ ಮನವಿ ಮಾಡುತ್ತ ಬಂದಿದ್ದೇನೆ ಎಂದು ತಾವು ನಡೆಸಿದ ಪ್ರಯತ್ನವನ್ನು ವಿವರಿಸಿದರು.
ಆರೋಗ್ಯ ಸಚಿವ ಡಾ.ಸುಧಾಕರ್, ರೂಪಾಲಿ ನಾಯ್ಕ ಅವರ ಪ್ರಶ್ನೆಗೆ ಉತ್ತರಿಸಿ, ಜಿಲ್ಲೆಗೆ ಅಗತ್ಯವಾಗಿ ಉತ್ಕೃಷ್ಟವಾದ ಆರೋಗ್ಯ ಸೇವೆ ಸಿಗಬೇಕು ಎನ್ನುವುದಕ್ಕೆ ಸರ್ಕಾರ ಬದ್ಧವಾಗಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಮುಖ್ಯಮಂತ್ರಿ ತಾತ್ವಿಕ ಒಪ್ಪಿಗೆ ನೀಡಿದ್ದಾರೆ. ಕಾರವಾರದಲ್ಲಿ ಸೂಪರ್ ಸ್ಪೆಷಾಲಿಟಿ ಸೌಲಭ್ಯ ಕಲ್ಪಿಸಲು 7 ಹುದ್ದೆಗಳಿಗೆ ಸಂದರ್ಶನ ಕರೆಯಲಾಗಿದ್ದು, ಒಬ್ಬರು ಮಾತ್ರ ಸಂದರ್ಶನಕ್ಕೆ ಆಗಮಿಸಿದ್ದರು. ಸರ್ಕಾರದ ನಿಯಮಾವಳಿಯಂತೆ ಗ್ರಾಮೀಣ ಪ್ರದೇಶದಲ್ಲಿ ಕಡ್ಡಾಯ ತರಬೇತಿ ಪ್ರಕಾರ ವೈದ್ಯರನ್ನು ಪ್ರಾಶಸ್ತ್ಯದ ಮೇಲೆ ಕಾರವಾರಕ್ಕೆ ಕಳುಹಿಸಲಾಗುತ್ತದೆ. ಈ ಬಗ್ಗೆ ಮುಖ್ಯಮಂತ್ರಿ ಸಮ್ಮತಿಸಿದ್ದಾರೆ. ಸದನದಲ್ಲಿ ನಾನೂ ಹೇಳಿದ ಮೇಲೆ ಮತ್ತೆ ಪ್ರಶ್ನೆ ಉದ್ಭವಿಸುವುದಿಲ್ಲ. ಮತ್ತೊಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಎಲ್ಲಿ ಮಾಡಬೇಕು ಎನ್ನುವುದನ್ನು ಎಲ್ಲರೂ ಸೇರಿ ನಿರ್ಧರಿಸೋಣ ಎಂದರು.
ನಾನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದ ಪ್ರಯತ್ನಕ್ಕೆ ಈಗ ಫಲ ಸಿಕ್ಕಂತಾಗಿದೆ. ನಮ್ಮ ಜನತೆಯ ಪರದಾಟ, ಸಂಕಟ ತಪ್ಪಿದರೆ ಅದಕ್ಕಿಂತ ದೊಡ್ಡ ಸಂತಸ ಬೇರೇನೂ ಇಲ್ಲ. ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಕಾರವಾರದಲ್ಲಿ ಸೂಪರ್ ಸ್ಪೆಷಾಲಿಟಿ ಸೌಲಭ್ಯ ಕಲ್ಪಿಸುವುದಾಗಿ ವಿಧಾನಸಭೆಯಲ್ಲಿ ಭರವಸೆ ನೀಡಿದ ಆರೋಗ್ಯ ಸಚಿವ ಡಾ.ಸುಧಾಕರ ಅವರಿಗೆ ಧನ್ಯವಾದಗಳು. ಇದಕ್ಕೆ ಕೈಜೋಡಿಸಿದ ಮುಖ್ಯಮಂತ್ರಿಗಳು, ಸಚಿವರುಗಳು, ಶಾಸಕರುಗಳು ಹಾಗೂ ನನ್ನೊಂದಿಗಿದ್ದ ಜನತೆಗೆ ಧನ್ಯವಾದಗಳು.
· ರೂಪಾಲಿ ಎಸ್.ನಾಯ್ಕ, ಶಾಸಕಿ