ಜೊಯಿಡಾ: ತಾಲೂಕಿನ ನಂದಿಗದ್ದಾ ಸೇವಾ ಸಹಕಾರಿ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆಯು ಯರಮುಖದ ಶ್ರೀಸೋಮೇಶ್ವರ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎನ್.ವಿ.ಹೆಗಡೆ ಮಾತನಾಡಿ, ಸಂಘದ ಲಾಭ ನಷ್ಟದ ಬಗ್ಗೆ ವಿವರಣೆ ನೀಡಿದರು. ಸಂಘದ ಮುಖ್ಯ ಕಾರ್ಯನಿರ್ವಾಹಕ ಶಂಕರ ದೇಸಾಯಿ ನಿಧನ ಹೊಂದಿದ್ದರಿಂದ ಸಂಘಕ್ಕೆ ದೊಡ್ಡ ಹೊಡೆತ ಉಂಟಾಗಿದೆ. ಸಂಘವು ಈ ಬಾರಿ ಕಳೆದ ವರ್ಷಕ್ಕಿಂತ ಕಡಿಮೆ ಲಾಭದಲ್ಲಿದೆ. ಆದರೂ 12 ಲಕ್ಷ ಲಾಭ ಗಳಿಸಿದೆ. ರೈತರ ಕಷ್ಟಗಳಿಗೆ ನಮ್ಮ ಸಹಕಾರಿ ಸಂಘ ಎಂದೂ ಸಹಕಾರ ನೀಡಿದೆ. ನಮ್ಮಲ್ಲಿಯೇ ವ್ಯವಹಾರ ಮಾಡುವ ಸದಸ್ಯರಿಗೆ ನಾವು ಹೆಚ್ಚಿನ ಒತ್ತನ್ನು ನೀಡುತ್ತಾ ಬಂದಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಸಹಕಾರಿ ಸಂಘದಲ್ಲಿ ಸಾಧನೆ ಮಾಡಿದ ಶಂಭುಲಿಂಗ ಹೆಗಡೆ ಶಿರಸಿ, ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಊರಿನ ನಿವೃತ್ತ ಶಿಕ್ಷಕ ಪದ್ಮನಾಭ ಗಾಂವ್ಕರ್, ಎಂಜಿನಿಯರ್ ವಿಭಾಗದಲ್ಲಿ ನಿವೃತ್ತಿ ಹೊಂದಿದ ಊರಿನ ರಂಗರಾವ್ ಭಟ್ಟ ಅವರಿಗೆ ಸನ್ಮಾನಿಸಲಾಯಿತು. ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಂಘದ ಸದಸ್ಯರ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ವೇದಿಕೆಯಲ್ಲಿ ನಂದಿಗದ್ದಾ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಮಂಜುನಾಥ ಭಾಗ್ವತ್, ಮುಖ್ಯ ಕಾರ್ಯನಿರ್ವಾಹಕ ಸಂಧ್ಯಾ ಭಟ್ಟ, ಜಿಲ್ಲಾ ಯುನಿಯನ್ ಸಹಕಾರಿ ಸಂಘದ ಸದಸ್ಯ ತಿಮ್ಮಣ್ಣ ಗಾಂವ್ಕರ್, ಹಾಗೂ ಸಹಕಾರಿ ಸಂಘದ ಎಲ್ಲಾ ಸದಸ್ಯರು ಇದ್ದರು.