ಕಾರವಾರ: ನಗರದಲ್ಲಿ ಹಲವು ವರ್ಷಗಳಿಂದ ತರಕಾರಿ ಮಾರಾಟ ಮಾಡುತ್ತಿರುವ ಗ್ರಾಮೀಣ ಭಾಗದ ಮಹಿಳೆಯರಿಗೆ ಫುಟ್ ಪಾತ್ ಮೇಲೆ ವ್ಯಾಪಾರ ಮಾಡಲು ಅನುವು ಮಾಡಿಕೊಡುವಂತೆ ಮಾಜಿ ಶಾಸಕ ಸತೀಶ್ ಸೈಲ್ ನಗರಸಭೆ ಅಧಿಕಾರಿಗಳಿಗೆ ಮನವಿ ಮಾಡಿದರು.
ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಹೂವು ಹಣ್ಣು ಮಾರುಕಟ್ಟೆಗೆ ಬೀದಿ ಬದಿ ವ್ಯಾಪರಸ್ಥರನ್ನ ಸ್ಥಳಾಂತರ ಮಾಡಲಾಗಿತ್ತು. ಈ ಹಿಂದೆಯೇ ಸ್ಥಳಾಂತರ ಮಾಡಿದ್ದರು, ಗಣಪತಿ ಹಬ್ಬ ಹಿನ್ನಲೆಯಲ್ಲಿ ಬೀದಿ ಬದಿಯಲ್ಲಿಯೇ ಮಾರಾಟ ಮಾಡಲು ಅನುವು ಮಾಡಿಕೊಡುವಂತೆ ಒತ್ತಾಯಿಸಿದ ಹಿನ್ನಲೆಯಲ್ಲಿ ಕೆಲಕಾಲ ವಿನಾಯಿತಿ ನೀಡಿದ್ದ ನಗರಸಭೆ ಅಧಿಕಾರಿಗಳು ಸೋಮವಾರ ಎಲ್ಲರನ್ನ ಹೊಸ ಮಾರುಕಟ್ಟೆಗೆ ಸ್ಥಳಾಂತರ ಮಾಡಿದ್ದರು.
ಇನ್ನು ಇದೇ ವೇಳೆ ನಗರದಲ್ಲಿ ಹಲವು ವರ್ಷಗಳಿಂದ ತರಕಾರಿ ಮಾರಾಟ ಮಾಡುತ್ತಿದ್ದ ಗ್ರಾಮೀಣ ಭಾಗದ ಮಹಿಳೆಯರನ್ನ ಕೂಡ ಸ್ಥಳಾಂತರ ಮಾಡಿದ ಹಿನ್ನೆಲೆಯಲ್ಲಿ ಮಾಜಿ ಶಾಸಕ ಸತೀಶ್ ಸೈಲ್ ಅವರು ವ್ಯಾಪಾರಸ್ಥರೊಂದಿಗೆ ಬಂದು ನಗರಸಭೆಗೆಯ ಆಯುಕ್ತರು ಹಾಗೂ ಅಧ್ಯಕ್ಷರಿಗೆ ಮನವಿ ಮಾಡಿದ್ದಾರೆ.
ಕಾರವಾರದಲ್ಲಿ ಬೀದಿ ಬದಿ ಕುಳಿತು ತರಕಾರಿ ಮಾರಾಟ ಮಾಡುವವರು ಬಹುತೇಕ ಸ್ಥಳೀಯ ಗ್ರಾಮೀಣ ಭಾಗದ ಮಹಿಳೆಯರೇ ಆಗಿದ್ದಾರೆ. ತರಕಾರಿ, ಸೊಪ್ಪುಗಳು, ಗೆಣಸು ಹಾಗೂ ಹೂವುಗಳನ್ನು ಬೆಳೆದು ಮಾರಾಟ ಮಾಡಲಿದ್ದು, ದಿನದ ದುಡಿಮೆಗಾಗಿ ಬೀದಿ ಬದಿಯಲ್ಲಿ ಕೆಲ ಕಾಲ ಕೂತು ವ್ಯಾಪಾರ ಮಾಡುತ್ತಾರೆ. ಕೋರ್ಟ್ ಬಳಿ ನಿರ್ಮಿಸಿರುವ ಹೊಸ ಮಾರುಕಟ್ಟೆ ಬಳಿ ಕುಳಿತು ಮಾರಾಟ ಮಾಡಿದರೆ ದಿನದ ದುಡಿಮೆಯೂ ಸಿಗುವುದಿಲ್ಲ. ಹೀಗಾಗಿ ಮೊದಲಿನಂತೆ ಅವರಿಗೆ ಫುಟ್ ಪಾತ್ ಮೇಲೆ ವ್ಯಾಪಾರ ಮಾಡಲು ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಸತೀಶ್ ಸೈಲ್ ಮನವಿ ನೀಡಿದ ಬಳಿಕ ಮಾತನಾಡಿದ ನಗರ ಸಭೆಯ ಪೌರಯುಕ್ತ ಆರ್ ಪಿ ನಾಯ್ಕ್ ಹಾಗೂ ಉಪಾಧ್ಯಕ್ಷ ಪ್ರಕಾಶ್ ನಾಯ್ಕ್ ಮಾತನಾಡಿ, ತರಕಾರಿ ಮಾರಾಟ ಮಾಡುವ ಮಹಿಳೆಯರಿಗೆ ಹೂವು ಹಣ್ಣು ಮಾರುಕಟ್ಟೆಯಲ್ಲಿ ಕುಡಿಯುವ ನೀರು ಹಾಗೂ ಶೌಚಾಲಯ ಕೂಡ ನಿರ್ಮಿಸಿ ಕೊಡಲಾಗಿದೆ. ಆದರೆ ಅಲ್ಲಿ ವ್ಯಾಪಾರವಾಗುವುದಿಲ್ಲ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಸಭೆ ನಡೆಸಿ ತೀರ್ಮಾನಕ್ಕೆ ಬರುತ್ತೇವೆ. ಅಲ್ಲಿಯ ವರೆಗೆ ಇಲ್ಲಿನ ಸ್ವೀಮ್ಮಿಂಗ್ ಪೂಲ್ ಮುಂಭಾಗದಲ್ಲಿ ಕುಳಿತು ವ್ಯಾಪಾರ ನಡೆಸುವಂತೆ ತಿಳಿಸಿದರು.