ಅಂಕೋಲಾ: ಇತ್ತೀಚಿಗೆ ಮರೆಯಾಗುತ್ತಿರುವ ಜಾನಪದ ಕಲೆಯನ್ನ ಪ್ರೋತ್ಸಾಹಿಸುವ ಕಾರ್ಯ ಪ್ರತಿಯೊಬ್ಬರಿಂದ ಆಗಬೇಕಿದೆ. ಜಾನಪದ ಕಲೆಯನ್ನ ಉಳಿಸಿ- ಬೆಳೆಸಬೇಕಾದ ಅನಿವಾರ್ಯತೆ ಇದೆ ಎಂದು ದರ್ಶನ ನಾಯ್ಕ್ ಹೇಳಿದರು.
ಅವರ್ಸಾದ ಬಲಿಬೀರ ಯಕ್ಷಗಾನ ಮಂಡಳಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಅವರ್ಸಾದ ಸಾರ್ವಜನಿಕ ಗಣೇಶೋತ್ಸವ ರಂಗವೇದಿಕೆಯಲ್ಲಿ ಆಯೋಜಿಸಿದ್ದ, ಜಿಲ್ಲೆಯ ಖ್ಯಾತ ಕಲಾವಿದರ ಕೂಡುವಿಕೆಯ ಜಾನಪದ ಸಂಗೀತ ಹಾಗೂ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮವನ್ನ ಅವರು ಚಂಡೆ ಬಾರಿಸಿ ಉದ್ಘಾಟಿಸಿ ಮಾತನಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಾಡಿನ ಮೇರು ಕಲೆಯಾದ ಯಕ್ಷಗಾನಕ್ಕೆ ಪ್ರೋತ್ಸಾಹ ನೀಡುತ್ತಿರುವುದು ಸಂತೋಷದ ವಿಷಯ. ಇಲಾಖೆಯ ಸಹಾಯ ಸಹಕಾರ ಸರ್ವ ಕಲಾವಿದರಿಗೆ ಆಶಾಕಿರಣವಾಗಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸುಜೀತ ನಾಯ್ಕ, ಅವರ್ಸಾದ ಬಲಿಬೀರ ಯಕ್ಷಗಾನ ಮಂಡಳಿಯು ಅನೇಕ ವರ್ಷಗಳಿಂದ ಯಕ್ಷಗಾನ ಕಲೆಯನ್ನು ಉಳಿಸಿ- ಬೆಳೆಸಿಕೊಂಡು ಬಂದಿದೆ. ಇಂತಹ ಮಂಡಳಿಗೆ ಸರಕಾರದ ನೆರವು ಅಗತ್ಯ ಎಂದರು.
ವೇದಿಕೆಯಲ್ಲಿ ಅವರ್ಸಾ ಗ್ರಾ.ಪಂ. ಮಾಜಿ ಅಧ್ಯಕ್ಷೆ ಸಹನಾ ನಾಯ್ಕ, ಹಾಲಿ ಸದಸ್ಯೆ ಸುಮನಾ ಆಗೇರ, ಮೋಹನ್ ನಾಯ್ಕ ಅವರ್ಸಾ, ಹಿರಿಯ ಕಲಾವಿದ ರಾಮಕೃಷ್ಣ ನಾಯ್ಕ, ಅವರ್ಸಾ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸಂತೋಷ ಎನ್.ನಾಯ್ಕ, ಉಪಾಧ್ಯಕ್ಷ ಶ್ರೀಕಾಂತ ನಾಯ್ಕ, ಯಕ್ಷಗಾನ ಕಲಾವಿದ ಪ್ರೀತಮ್ ನಾಯ್ಕ ಉಪಸ್ಥಿತರಿದ್ದರು. ಅಮದಳ್ಳಿ ಗ್ರಾ.ಪಂ ಪಿಡಿಓ ನಾಗೇಂದ್ರ ಎಮ್.ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ನಂತರ ಕಲಾಭಿಮಾನಿಗಳ ಸಹಕಾರದಲ್ಲಿ ಯಕ್ಷಗಾನ ಯಶಸ್ವಿಯಾಗಿ ಪ್ರದರ್ಶನಗೊಂಡಿತು.