ಕಾರವಾರ: ಮಾಹಿತಿಗಳ ಕೊರತೆಯಿಂದಾಗಿ ಯಾವುದೇ ಅಭ್ಯರ್ಥಿಗಳು ಉದ್ಯೋಗಾವಕಾಶಗಳಿಂದ ವಂಚಿತರಾಗಬಾರದೆಂಬ ಹಿನ್ನಲೆಯಲ್ಲಿ ಕುಂದಾಪುರ ಕೋಟದ ವಿ- ಶೈನ್ ಕೋಚಿಂಗ್ ಸೆಂಟರ್ ಆಶ್ರಯದಲ್ಲಿ ರಿಸರ್ವ್ ಪೊಲೀಸ್ ಕಾನ್ಸ್ಟೆಬಲ್ ಮತ್ತು ಅಗ್ನಿವೀರ ಹುದ್ದೆಗಳ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಅ.2ರಂದು ಕಾರ್ಯಾಗಾರ ಹಮ್ಮಿಕೊಳ್ಳಲಾಗುತ್ತಿದೆ.
ರಿಸರ್ವ್ ಪೊಲೀಸ್ ಕಾನ್ಸ್ಟೆಬಲ್ ಮತ್ತು ಅಗ್ನಿವೀರ ಹುದ್ದೆಗಳಲ್ಲಿ ದೈಹಿಕ ಸಾಮರ್ಥ್ಯದಷ್ಟೇ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವುದು ಕೂಡ ಪ್ರಮುಖವಾಗಿದೆ. ಎಷ್ಟೋ ಸ್ಪರ್ಧಾಕಾಂಕ್ಷಿಗಳು ಸ್ಪರ್ಧಾತ್ಮಕ ಪರೀಕ್ಷೆಗಳ ಅನುಭವ ಇಲ್ಲದೆ ತಡಕಾಡುತ್ತಿರುವುದರಿಂದ, ಈ ಕೊರತೆಯನ್ನು ನೀಗಿಸುವ ಸಲುವಾಗಿ ನುರಿತ ತಜ್ಞರಿಂದ ಈ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ಕಾರ್ಯಗಾರವನ್ನು ಕೋಟದ ಕೋಟ ವಿವೇಕ ಸಮೂಹ ವಿದ್ಯಾಸಂಸ್ಥೆ ಆವರಣದಲ್ಲಿ ಆಯೋಜಿಸಲಾಗಿದ್ದು, ಅ.2ರ ಬೆಳಿಗ್ಗೆ 9ರಿಂದ ಮಧ್ಯಾಹ್ನ 1ರವರೆಗೂ ನಡೆಯಲಿದೆ.
ಯುವಜನರು ಈ ಉಚಿತ ಸ್ಪರ್ಧಾತ್ಮಕ ಪರೀಕ್ಷಾ ಕಾರ್ಯಾಗಾರದ ಸದುಪಯೋಗಪಡಿಸಿಕೊಳ್ಳಬೇಕಿದೆ. ಅಗ್ನಿಪಥ್ ಕಾರ್ಯಕ್ರಮದ ಅಗ್ನಿವೀರರಾಗಿ ಸೇರಬಯಸುವ ಮಹಿಳಾ ಸ್ಪರ್ಧಾಕಾಂಕ್ಷಿಗಳು ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಹರೀಶ್ ಶೆಟ್ಟಿ (ಮೊ.ಸಂ: 9980040551), ಗಿರೀಶ್ ಶೆಟ್ಟಿ (ಮೊ.ಸಂ: 7619310724), ವಿವೇಕ್ ಅಮೀನ್ (ಮೊ.ಸಂ: 9008649069) ಅವರನ್ನು ಸಂಪರ್ಕಿಸಬಹುದಾಗಿದೆ.
ಸಚಿವ ಪೂಜಾರಿಯಿಂದ ಉದ್ಘಾಟನೆ: ಪೊಲೀಸ್ ಕಾನ್ಸ್ಟೆಬಲ್ ಮತ್ತು ಅಗ್ನಿವೀರರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ಕಾರ್ಯಾಗಾರವನ್ನು ಅ.2ರಂದು ಕೋಟದ ಕೋಟ ವಿವೇಕ ಸಮೂಹ ವಿದ್ಯಾಸಂಸ್ಥೆ ಆವರಣದಲ್ಲಿ ಬೆಳಿಗ್ಗೆ 9ಕ್ಕೆ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ್ ಪೂಜಾರಿಯವರು ಉದ್ಘಾಟಿಸಲಿದ್ದಾರೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಛೀಂದ್ರ ಉಪಸ್ಥಿತರಿರಲಿದ್ದಾರೆ. ಜೊತೆಗೆ, ಮಣೂರು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ.ಕುಂದರ್, ಉಡುಪಿ ಹೋಂ ಗಾರ್ಡ್ ಜಿಲ್ಲಾ ಕಮಾಂಡೆಂಟ್ ಡಾ.ಪ್ರಶಾಂತ್ ಶೆಟ್ಟಿ, ಕೋಟ ಸಮೂಹ ವಿದ್ಯಾ ಸಂಸ್ಥೆಗಳ ಕಾರ್ಯದರ್ಶಿ ರಾಮದೇವ್ ಐತಾಳ್, ಪ್ರಾಂಶುಪಾಲ ಜಗದೀಶ ನಾವುಡ, ಕುಂದಾಪುರ ಪುರಸಭೆಯ ಅಧ್ಯಕ್ಷೆ ವೀಣಾ ಭಾಸ್ಕರ್, ಉಪಾಧ್ಯಕ್ಷ ಸಂದೀಪ್ ಖಾರ್ವಿ, ಕೋಟ ಗ್ರಾಮ ಪಂಚಾಯತಿ ಅಧ್ಯಕ್ಷ ಅಜಿತ್ ದೇವಾಡಿಗ, ಕೋಟತಟ್ಟು ಗ್ರಾಮ ಪಂಚಾಯತಿ ಅಧ್ಯಕ್ಷೆ ಅಶ್ವಿನಿ ದಿನೇಶ್, ನಿವೃತ್ತ ಉಪಪ್ರಾಂಶುಪಾಲರಾದ ರೇಖಾ ಬನ್ನಾಡಿ, ಬ್ರಹ್ಮಾವರ ಸಬ್ ರಿಜಿಸ್ಟ್ರಾರ್ ಕೀರ್ತಿ ಭಾಗವಹಿಸಲಿದ್ದಾರೆ.