ಶಿರಸಿ: ಮಳೆಗಾಲದ ವಿಧಾನಸಭಾ ಅಧಿವೇಶನದಲ್ಲಿ ಅರಣ್ಯವಾಸಿಗಳ ಪರವಾಗಿ ಸುಫ್ರೀಂ ಕೋರ್ಟನಲ್ಲಿ ತಿದ್ದುಪಡಿ ಪ್ರಮಾಣ ಪತ್ರ ಸಲ್ಲಿಸಲು ತೀರ್ಮಾನ ತೆಗೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ಅಧಿವೇಶನದ ನಂತರ ಜನಪ್ರತಿನಿಧಿಗಳ ಮನೆಯಮುಂದೆ ಧರಣಿ ಮಾಡುವದೊಂದಿಗೆ ಜಿಲ್ಲಾದ್ಯಂತ ಅರಣ್ಯವಾಸಿ ವಿರೋಧಿ ನೀತಿಯ ಕುರಿತು ಜನಜಾಗೃತಿ ಮತ್ತು ಜನಾಂದೋಲನ ಮಾಡುವ ಮುಂತಾದ 6 ಪ್ರಮುಖ ನಿರ್ಣಯವನ್ನ ಹೋರಾಟಗಾರರ ವೇದಿಕೆಯು ನಿರ್ಣಯಿಸಿದೆ.
ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರ ಅಧ್ಯಕ್ಷತೆಯಲ್ಲಿ ಇಂದು ಕಿಕ್ಕಿರಿದ ಶಿರಸಿ ಮಾರಿಕಾಂಬಾ ಕಲ್ಯಾಣ ಮಂಟಪದಲ್ಲಿ ಹೋರಾಟವು 32 ನೇ ವರ್ಷಕ್ಕೆ ಪಾದಾರ್ಪಣೆ ಮಾಡಿರುವ ಹಿನ್ನೆಲೆಯಲ್ಲಿ ಜರುಗಿದ ಜಿಲ್ಲಾ ಮಟ್ಟದ ಸಭೆಯಲ್ಲಿ ಮೇಲಿನಂತೆ ತೀರ್ಮಾನಿಸಲಾಯಿತು.
ಕೇಂದ್ರ ಮತ್ತು ರಾಜ್ಯ ಸರಕಾರದ ಅರಣ್ಯವಾಸಿ ವಿರೋಧಿ ನೀತಿಗೆ ಖಂಡನೆ ನಿರ್ಣಯದೊಂದಿಗೆ ಅರಣ್ಯವಾಸಿಗಳ ರಕ್ಷಣೆಗೆ ಹೋರಾಟಗಾರರ ವೇದಿಕೆಯು ಬದ್ಧವಾಗಿರಲು, ಸುಫ್ರೀಂ ಕೋರ್ಟನಲ್ಲಿ ಅರಣ್ಯವಾಸಿಗಳ ಪರ ವಿಶ್ರಾಂತ ನ್ಯಾಯಮೂರ್ತಿ ಹೆಚ್ ಎನ್ ನಾಗಮೋನದಾಸ್ ಅವರ ಮಾರ್ಗದರ್ಶನದಲ್ಲಿ ಸಮರ್ಥ ಕಾನೂನು ಹೋರಾಟ ಮುಂದುವರೆಸುವ ಹಾಗೂ ಜನಜಾಗೃತಿ ಮಾಡುವ ದಿಶೆಯಲ್ಲಿ ಹಳ್ಳಿ ಕಡೆ ನಡೆ ಕಾರ್ಯಕ್ರಮವನ್ನ ಸಂಘಟಿಸಲು ನಿರ್ಣಯಿಸಲಾಯಿತು.
ಸಭೆಯಲ್ಲಿ ಜಿ ಎಮ್ ಶೆಟ್ಟಿ ಅಂಕೋಲಾ, ಸುರೇಶ್ ಮೇಸ್ತ ಹೋನ್ನಾವರ,ಚಂದ್ರಕಾಂತ್ ಕೋಚರೆಕರ, ರಮಾನಂದ ನಾಯ್ಕ ಅಚಿವೆ ಮುಂತಾದವರು ವಿಷಯ ಮಂಡಿಸಿದರು. ಎಮ್ ಆರ್ ನಾಯ್ಕ ಖಂಡ್ರಾಜಿ, ಶಿವಾನಂದ ಪೂಜಾರಿ, ಭೀಮ್ಸಿ ವಾಲ್ಮೀಕಿ, ಯಂಕು ಮರಾಠಿ, ಸ್ವಾಮಿ ಜೋಯಿಡಾ, ಯಾಕೂಬ ಕುಮಟ, ಸಾರಂಬಿ ಕುಮಟ, ಶಬ್ಬೀರ್ ಭಟ್ಕಳ, ಶಬ್ಬೀರ್ ಚಪಾತಿ, ಶೇಖಯ್ಯ ಹಿರೇಮಠ, ದೇವರಾಜ ಮರಾಠಿ, ಸುಶೀಲಾ ನಾಯ್ಕ ಕಾನಸೂರ, ಪಠಾಣ, ರಾಮಚಂದ್ರ ಮರಾಠಿ ಮುಂತಾದವರು ಉಪಸ್ಥಿತರಿದ್ದರು. ಸ್ವಾಗತ ಮತ್ತು ವಂದನಾರ್ಪಣೆಯನ್ನು ಬಾಲಚಂದ್ರ ಶೆಟ್ಟಿಯವರು ನಿರ್ವಹಿಸಿದರು.