ಬೆಂಗಳೂರು: ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ಶೀಘ್ರದಲ್ಲೇ ರದ್ದಾಗಲಿದೆ. ಇದಕ್ಕೆ ಪರ್ಯಾಯವಾಗಿ ಆಯುಷ್ಮಾನ್ ಭಾರತ್ ಹೆಲ್ತ್ ಅಕೌಂಟ್ (ಆಭಾ) ಕಾರ್ಡ್ ಜಾರಿಗೆ ತರಲಾಗಿದೆ. ಈ ವಿಚಾರವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಿಬ್ಬಂದಿಗೆ ತರಬೇತಿ ನೀಡಲು ಮುಂದಾಗಿದೆ.
ಭಾರತೀಯ ನಾಗರಿಕ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್, ಪ್ರಧಾನಮಂತ್ರಿ ಜನಾರೋಗ್ಯ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರ ಆರೋಗ್ಯ ಸೇವೆಯನ್ನು ಸಂಪೂರ್ಣ ಡಿಜಿಟಲೀಕರಣ ಮಾಡುತ್ತಿದ್ದು, ಆಭಾ ಕಾರ್ಡ್ ಮೂಲಕ ಹೊಸ ಆಯಾಮ ಕಲ್ಪಿಸುತ್ತಿದೆ.
ವೈದ್ಯರ ತಪಾಸಣೆ, ಹೊರರೋಗಿ ಮತ್ತು ಒಳರೋಗಿ ಪರೀಕ್ಷೆ ಕುರಿತ ಮಾಹಿತಿ, ರೋಗಿಯ ದಾಖಲಾತಿ, ಗುಣಮುಖರಾಗಿ ಹೊರಬರುವುದು, ರೋಗದ ಸಂಬಂಧ ಹಿಂದಿನ ವೈದ್ಯರು ನೀಡಿದ ಚಿಕಿತ್ಸೆ, ಔಷಧೋಪಚಾರ ಸೇರಿ ಎಲ್ಲಾ ಆರೋಗ್ಯ ಸಂಬಂಧಿತ ಮಾಹಿತಿಯನ್ನು ಒಂದೇ ಸೂರಿನಡಿ ಲಭ್ಯವಾಗುವಂತೆ ಮಾಡಲು ನೂತನ ಹೆಲ್ತ್ ಕಾರ್ಡ್ ಸಹಕಾರಿಯಾಗಲಿದೆ. ಈ ಕುರಿತು ಮಾಹಿತಿ ನೀಡಲಾಗುತ್ತಿದೆ. ಅಲ್ಲದೆ, ಹಲವು ನಾಗರಿಕರಿಗೆ ಕಾರ್ಡ್ ಕೂಡ ಮಾಡಿಕೊಡಲಾಗುತ್ತಿದೆ.
ಆರೋಗ್ಯ ಸೇವೆ ಪಡೆಯುವವರು, ಸಂಬಂಧಿತ ಆಸ್ಪತ್ರೆ, ಸಂಸ್ಥೆ ಹಾಗೂ ವೈದ್ಯಕೀಯ ಸಿಬ್ಬಂದಿ ನಡುವೆ ಇರುವ ಅಂತರ ತಪ್ಪಿಸುವ ಸದುದ್ದೇಶದೊಂದಿಗೆ ಈ ಕಾರ್ಡ್ ಪರಿಚಯಿಸಲು ಆರೋಗ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.
‘ಆಭಾ’ ಕಾರ್ಡ್ ವಿಶೇಷತೆ ಏನು ? ಚಿಕಿತ್ಸೆ ಪಡೆಯುವ ವ್ಯಕ್ತಿ ತನ್ನ ಎಲ್ಲಾ ವೈದ್ಯಕೀಯ ಮಾಹಿತಿಯನ್ನು ಒಂದೆಡೆ ನಿರ್ವಹಣೆ ಮಾಡುವ ಆಧಾರ್ ಕಾರ್ಡ್ ಮಾದರಿಯ 14 ಅಂಕಿಯ ವಿಶಿಷ್ಟ ನಂಬರ್ ಇದಾಗಿದೆ. ಅತಿ ಕಡಿಮೆ ಸಮಯದಲ್ಲಿ ಆಧಾರ್ ಕಾರ್ಡ್ ಹಾಗೂ ಮೊಬೈಲ್ ಸಂಖ್ಯೆ ಬಳಸಿ ‘ಆಭಾ’ಕಾರ್ಡ್ ರಚಿಸಿಕೊಳ್ಳಬಹುದು. ಗೂಗಲ್ ಸ್ಟೋರಲ್ಲಿ ಆ್ಯಪ್ ಮೂಲಕ ಸುಲಭವಾಗಿ ಡೌನ್‌ಲೋಡ್ ಮಾಡಿಕೊಂಡು ನೋಂದಣಿ ಆಗಬಹುದು. ಹತ್ತಿರದ ಆರೋಗ್ಯ ಕೇಂದ್ರ, ಆರೋಗ್ಯ ಉಪ ಕ್ಷೇಮ ಕೇಂದ್ರ, ಗ್ರಾಮ ಒನ್ ಸೇವಾ ಕೇಂದ್ರಗಳಲ್ಲೂ ಪಡೆಯಬಹುದು.
ಪರಿಣಾಮಕಾರಿಯಾಗಿ ಆರೋಗ್ಯ ಸೇವೆ ಕಲ್ಪಿಸುವ ಉದ್ದೇಶದಿಂದ ಡಿಜಿಟಲೀಕರಣ ಮಾಡಲಾಗಿದೆ. ಕೇಂದ್ರ ಸರ್ಕಾರದ ಈ ಯೋಜನೆಯಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ತಾಯಿ ಮತ್ತು ಮಕ್ಕಳ ಆರೋಗ್ಯದಡಿ ಗರ್ಭಿಣಿಯರು, ಅರ್ಹ ದಂಪತಿಗಳ ಮಾಹಿತಿ ಆಭಾದೊದಿಗೆ ಆರ್ಸಿಎಚ್ ಪೋರ್ಟಲ್ ದತ್ತಾಂಶ ಜೋಡಣೆಯಲ್ಲಿ ಚಿತ್ರದುರ್ಗ ಜಿಲ್ಲೆ ರಾಜ್ಯದ ಪ್ರಥಮ ಸ್ಥಾನ ಪಡೆದಿದೆ.
ಚಿತ್ರದುರ್ಗ ತಾಲೂಕಿನ ಚಿಕ್ಕಗೊಂಡನಹಳ್ಳಿ ಪ್ರಾಥಮಿ ಆರೋಗ್ಯ ಕೇಂದ್ರದಲ್ಲಿ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ನೇತೃತ್ವದ ತಂಡ 200 ಜನರಿಗೆ ಮಾಹಿತಿ ನೀಡಿತು. ಸ್ಥಳದಲ್ಲೇ ಅಲ್ಲಿದ್ದ ಎಲ್ಲರಿಗೂ ಆಭಾ ಕಾರ್ಡ್ ಮಾಡಿಸಲಾಯಿತು. ವೈದ್ಯಾಧಿಕಾರಿ ಡಾ.ಮಂಜುನಾಥ, ಕ್ಷೇತ್ರ ಶಿಕ್ಷಣಾಧಿಕಾ ಬಿ.ಮೂಗಪ್ಪ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀಧರ್ ಇತರರಿದ್ದರು.
ಈಗಾಗಲೇ ಸರ್ಕಾರಿ ಮತ್ತು ಖಾಸಗಿ ವೈದ್ಯರಿಗೆ ವಿಶೇಷ ಕೌಶಲಾಭಿವೃದ್ಧಿ ತರಬೇತಿ ನೀಡಲಾಗಿದೆ. ಗ್ರಾಮ ನಗರ ಪ್ರದೇಶಗಳಲ್ಲಿ ಪ್ರಾತ್ಯಕ್ಷಿಕೆ ಮುಂದುವರೆದಿದೆ.