ಶಿರಸಿ: ಅರಣ್ಯ ಭೂಮಿ ಹಕ್ಕಿನ ಹೋರಾಟವು 32 ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ, ಅರಣ್ಯವಾಸಿಗಳ ಸಮಸ್ಯೆಗಳನ್ನ ಸರಕಾರದ ಗಮನ ಸೆಳೆಯುವ ಉದ್ದೇಶದಿಂದ ವಿಶಿಷ್ಟ ಸಾಂಸ್ಕೃತಿಕ ವಾದ್ಯ, ಡೊಳ್ಳು, ನೃತ್ಯಗಳೊಂದಿಗೆ, ಮಳೆಯಲ್ಲಿಯೂ ಉತ್ಸಾಹದಿಂದ ಜಿಲ್ಲಾದ್ಯಂತ ಬೃಹತ್ ಸಂಖ್ಯೆಯಲ್ಲಿ ಆಗಮಿಸಿದ ಅರಣ್ಯ ಅತಿಕ್ರಮಣದಾರರ ಸಮ್ಮುಖದಲ್ಲಿ ಹೋರಾಟಗಾರರ ಪ್ರಮುಖರು ‘ಉರುಳು ಸೇವೆ’ ಮಾಡುವ ಮೂಲಕ ವಿಶೇಷ ರೀತಿಯಲ್ಲಿ ಇಂದು ಅರಣ್ಯ ಭೂಮಿ ಹಕ್ಕಿಗಾಗಿ ಹಕ್ಕೊತ್ತಾಯಿಸಲಾಯಿತು.
ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ನೇತ್ರತ್ವದಲ್ಲಿ ಇಂದು ಶಿರಸಿ ಮಾರಿಕಾಂಬಾ ದೇವಾಲಯದ ಎದುರು ಉರುಳು ಸೇವೆ ಮಾಡುವ ಸಂದರ್ಭದಲ್ಲಿ ಹೋರಾಟದ ಬಾವುಟ, ಹಕ್ಕಿಗಾಗಿ ಒತ್ತಾಯದ ಘೋಷಣೆ ಮೂಲಕ ವಿಭಿನ್ನ ರೀತಿಯ ಹೋರಾಟಕ್ಕೆ ಚಾಲನೆ ನೀಡಿರುವುದು ವಿಶೇಷವಾಗಿತ್ತು.
ವಿವಿಧ ತಾಲೂಕಿನ ಪ್ರಮುಖರಾದ ಶಿವಾನಂದ ಜೋಗಿ ಮುಂಡಗೋಡ, ಮಾರುತಿ ನಾಯ್ಕ ಮತ್ತಿಘಟ್ಟ, ಮಹೇಶ ನಾಯ್ಕ ಶಿವಳಮನೆ, ಲಕ್ಷ್ಮಣ ಮಾಳ್ಳಕ್ಕನವರ, ಎಮ್ ಪಿ ಗೌಡ ಹುಕ್ಕಳಿ, ಕಿರಣ ಮರಾಠಿ ದೇವನಳ್ಳಿ, ಶಾಂತಪ್ಪ ಮಡಲೂರು ಶಿರಸಿ, ಉಮೇಶ ನಾಯ್ಕ ಶೆಲೂರು, ರಾಮು ಗೌಡ ದನಗನಹಳ್ಳಿ ಮುಂತಾದವರು ಉರುಳು ಸೇವೆಯಲ್ಲಿ ಪಾಲ್ಗೊಂಡಿದ್ದರು.