ಶಿರಸಿ: ನಾವೆಲ್ಲರೂ ಒಂದೇ ಕುಲದವರೆಂಬ ಜಗತ್ತಿಗೆ ಸಮಾನತೆಯ ಮಾರ್ಗದರ್ಶನ ಮಾಡಿದ ನಾರಾಣಯಣ ಗುರುಗಳ ಆದರ್ಶ, ಸಮಾಜಮುಖಿ ಕೆಲಸ ಮಾಡುವವರಿಗೆ ಬಹುದೊಡ್ಡ ಪ್ರೇರಣದಾಯಕರು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಅವರು ಶನಿವಾರ ಅಂಬೇಡ್ಕರ್ ಭವನದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ 168ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವೈಕಂ ಸತ್ಯಾಗ್ರಹದ ಮೂಲಕ ಇಡೀ ರಾಷ್ಟ್ರದ ಗಮನ ಸೆಳೆದಿದ್ದ ನಾರಾಯಣ ಗುರುಗಳ ಅಸ್ಪೃಷ್ಯತೆ ವಿರುದ್ಧದ ಹೋರಾಟ ಸಮಾಜ ಪರಿಪರ್ತನೆಗೆ ಪ್ರಮುಖ ಕಾರಣವಾಗಿದೆ ಎಂದರು.
ದೇಶ ಮೊದಲು ಎಂದು ನಾವು ನಂಬುವವರೆಗೂ ಸುಖದ ಜೀವನ ಸಾಧ್ಯವಾಗುವುದಿಲ್ಲ. ಜಾತಿ, ಉಪ ಜಾತಿಯನ್ನೇ ನಾವು ಪ್ರಮುಖ ಮಾಡಿಕೊಂಡರೆ ಉಳಿಗಾಲವಿಲ್ಲ. ನಾರಾಯಣ ಗುರುಗಳ ಜನ್ಮ ದಿನಾಚರಣೆ ಮೂಲಕ ನಾವು ಸಂಘಟಿತರಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಸ್ಕೋಡ್‌ವೆಸ್‌ನ ಎಂಡಿ ವೆಂಕಟೇಶ ನಾಯ್ಕ ಸೇರಿದಂತೆ ಸಮಾಜದ ಸಾಧಕರನ್ನು ಸನ್ಮಾನಿಸಲಾಯಿತು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ, ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಉಪಾಧ್ಯಕ್ಷೆ ವೀಣಾ ಶೆಟ್ಟಿ, ಶಿರಸಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಂದನ ಸಾಗರ, ಉಪವಿಭಾಗಾಧಿಕಾರಿ ದೇವರಾಜ ಆರ್., ತಹಶೀಲ್ದಾರ್ ಶ್ರೀಧರ ಮುಂದಲಮನಿ ಮುಂತಾದವರಿದ್ದರು.