ಸಿದ್ದಾಪುರ: ಕಾಂಗ್ರೆಸ್ ಪಕ್ಷ ಇನ್ನಷ್ಟು ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ಕೆಲ ತಿಂಗಳ ಹಿಂದೆ ಪ್ರಧಾನ ಕಾರ್ಯದರ್ಶಿಗಳ ನೇಮಕವನ್ನ ಮಾಡಲಾಗಿತ್ತು. ಇನ್ನು ಜಿಲ್ಲೆಯಿಂದ ಐವರು ಪ್ರಧಾನ ಕಾರ್ಯದರ್ಶಿಗಳ ನೇಮಕ ಕೇವಲ ನೆಪ ಮಾತ್ರಕ್ಕೆ, ಸಂಘಟನೆಗೆ ಯಾವುದೇ ಬಲ ನೀಡುತ್ತಿಲ್ಲ ಎನ್ನುವ ಆರೋಪ ಕಾರ್ಯಕರ್ತರಿಂದಲೇ ಕೇಳಿ ಬಂದಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಪಕ್ಷವನ್ನ ಇನ್ನಷ್ಟು ಬಲಪಡಿಸಲು ಕಳೆದ ಐದಾರು ತಿಂಗಳ ಹಿಂದೆಯೇ ಪ್ರಧಾನ ಕಾರ್ಯದರ್ಶಿಗಳನ್ನ ನೇಮಕ ಮಾಡಿದ್ದರು. ಜಿಲ್ಲೆಯಿಂದ ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವಾ ಪುತ್ರ ನಿವೇದಿತ್ ಆಳ್ವಾ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ, ಈ ಹಿಂದೆ ಜಿಲ್ಲಾ ಪರಿಷತ್ ಅಧ್ಯಕ್ಷರಾಗಿದ್ದ ರಮಾನಂದ ನಾಯಕ, ಕೆಪಿಸಿಸಿ ಶಿರಸಿ ಸಿದ್ದಾಪುರ ಕ್ಷೇತ್ರದ ಉಸ್ತುವಾರಿಯಾಗಿದ್ದ ಸುಷ್ಮಾ ರಾಜಗೋಪಾಲ ಹಾಗೂ ಕಾರವಾರದ ಗಜಾನನ ತಾರೀಕರ್ ಎನ್ನುವವರನ್ನ ನೇಮಕ ಮಾಡಿ ಆದೇಶಿಸಿದ್ದರು.
ಜಿಲ್ಲೆಯಿಂದ ಐವರಿಗೆ ಪ್ರಧಾನ ಕಾರ್ಯದರ್ಶಿ ಹುದ್ದೆಗಳನ್ನ ನೀಡಿದ್ದು ಪಕ್ಷ ಇನ್ನಷ್ಟು ಬಲಪಡಿಸಲು ಸಹಕಾರಿಯಾಗಲಿದೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ ಸದ್ಯ ಜಿಲ್ಲೆಯಿಂದ ಐವರ ನೇಮಕದಿಂದ ಪಕ್ಷ ಸಂಘಟನೆಗೆ ಯಾವ ಬಲವೂ ಸಿಕ್ಕಿಲ್ಲ ಎನ್ನುವ ಆರೋಪ ಕೇಳಿ ಬರುತ್ತಿದೆ. ಅಲ್ಲದೇ ಜಿಲ್ಲೆಗೆ ಸ್ಥಾನ ಮಾನ ಕೊಡಬೇಕು ಎನ್ನುವ ಉದ್ದೇಶದಿಂದ ಕೇವಲ ನೆಪ ಮಾತ್ರಕ್ಕೆ ನೇಮಕ ಮಾಡಲಾಗಿದೆ ಎನ್ನುವ ಆರೋಪ ಸಹ ಕೇಳಿ ಬಂದಿದೆ.
ಪ್ರಧಾನ ಕಾರ್ಯದರ್ಶಿಗಳಾಗಿ ನೇಮಕವಾಗಿರುವ ನಿವೇದಿತ್ ಆಳ್ವಾ ಶಿರಸಿ-ಸಿದ್ದಾಪುರ ಕ್ಷೇತ್ರ ಮೂಲ ಎನ್ನುತ್ತಿದ್ದರು ನೆಲೆಸಿರುವುದು ಮಾತ್ರ ಬೆಂಗಳೂರಿನಲ್ಲಿ. ಆಗೋಮ್ಮೆ, ಈಗೊಮ್ಮೆ ಬಂದು ಹೋಗುವುದರಿಂದ ಪಕ್ಷಕ್ಕೆ ಯಾವ ಕೊಡುಗೆ ಇಲ್ಲ ಎನ್ನುವುದು ಕೆಲ ಕಾರ್ಯಕರ್ತರ ಅಭಿಪ್ರಾಯವಾಗಿದೆ. ಇನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಈ ವರೆಗೆ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನೇ ವಹಿಸಿಕೊಂಡಿಲ್ಲ.
ಇನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿಯೇ ಮುಂದು ವರೆದಿದ್ದು, ಪ್ರಧಾನ ಕಾರ್ಯದರ್ಶಿ ಹುದ್ದೆಯ ಮೇಲೆ ಭೀಮಣ್ಣ ನಾಯ್ಕರಿಗೆ ಆಸಕ್ತಿಯೇ ಇಲ್ಲದಂತಾಗಿದ್ದು ಒತ್ತಾಯ ಪೂರ್ವಕವಾಗಿ ಹುದ್ದೆಯನ್ನ ನೀಡಲಾಗಿದ್ದು ಇದೇ ಕಾರಣಕ್ಕೆ ಇನ್ನು ಹುದ್ದೆಯನ್ನ ವಹಿಸಿಕೊಂಡಿಲ್ಲ ಎನ್ನಲಾಗಿದೆ. ಇನ್ನು ಮತ್ತೋರ್ವ ಪ್ರಧಾನ ಕಾರ್ಯದರ್ಶಿ ರಮಾನಂದ ನಾಯಕ ಹಿರಿಯ ಕಾಂಗ್ರೆಸ್ಸಿಗರಾಗಿದ್ದು ಕೇವಲ ಪಕ್ಷದ ಸಭೆಗಳಿಗೆ ಮಾತ್ರ ಪಾಲ್ಗೊಳ್ಳುತ್ತಿದ್ದಾರೆ.
ಪಕ್ಷ ಸಂಘಟನೆ ಮಾಡಲು ಜಿಲ್ಲೆಯಲ್ಲಿ ತಿರುಗಾಟ ಮಾಡಲು ಮುಂದಾಗುತ್ತಿಲ್ಲ. ಅಲ್ಲದೇ ವಯಸ್ಸು ಸಹ ಹೆಚ್ಚಾಗಿರುವುದು ಜಿಲ್ಲೆಯಾದ್ಯಂತ ಸಂಘಟನೆ ಮಾಡಲು ಯಾವ ಸಹಾಯ ಅವರಿಂದ ಆಗುತ್ತಿಲ್ಲ ಎನ್ನುವ ಆರೋಪ ಕಾರ್ಯಕರ್ತರದ್ದು. ಇನ್ನೋರ್ವ ಪ್ರಧಾನ ಕಾರ್ಯದರ್ಶಿ ಗಜಾನನ ತಾರೀಕರ ಜಿಲ್ಲೆಯಲ್ಲಿ ಬಹುತೇಕ ಕಾಂಗ್ರೆಸ್ ನಾಯಕರಿಗೆ ಅವರು ಯಾರು ಎನ್ನುವುದೇ ಪರಿಚಯವಿಲ್ಲ. ಮಾಜಿ ಶಾಸಕ ಸತೀಶ್ ಸೈಲ್ ಪ್ರಭಾವದಿಂದ ಹುದ್ದೆ ನೀಡಿದ್ದು ಇದು ಜಿಲ್ಲೆಯಲ್ಲಿ ಸಂಘಟನೆಗೆ ಯಾವುದೇ ಪ್ರಯೋಜನವಿಲ್ಲ ಎನ್ನುವುದು ಕಾರ್ಯಕರ್ತರ ಅಭಿಪ್ರಾಯ.
ಶಿರಸಿ-ಸಿದ್ದಾಪುರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಎಂದು ಗುರುತಿಸಿಕೊಂಡಿದ್ದ ಸುಷ್ಮಾ ರಾಜಗೋಪಾಲ ಕ್ಷೇತ್ರದಲ್ಲಿ ಹಾಗೂ ಜಿಲ್ಲೆಯಲ್ಲಿ ಸಂಘಟನೆಗಾಗಿ ತಿರುಗಾಟ ನಡೆಸಿದ್ದರು. ಆದರೆ ಕೆಲ ತಿಂಗಳುಗಳಿಂದ ಕ್ಷೇತ್ರದಿಂದ ಟಿಕೇಟ್ ಆಸಕ್ತಿ ಕಳೆದುಕೊಂಡು ಮತ್ತೆ ಬೆಂಗಳೂರಿನತ್ತ ಮುಖ ಮಾಡಿದ್ದು ಜಿಲ್ಲೆಗೆ ಇವರ ನೇಮಕ ಯಾವುದೇ ಪ್ರಯೋಜನ ಆಗುವುದಿಲ್ಲ ಎನ್ನುವುದು ಕಾರ್ಯಕರ್ತರ ಆರೋಪ.
ಸದ್ಯ ಕೆಪಿಸಿಸಿ ಕಾರ್ಯದರ್ಶಿ ಸೇರಿದಂತೆ ಇನ್ನು ಹುದ್ದೆಗಳ ನೇಮಕ ಮಾಡುತ್ತಿದ್ದು ಪಕ್ಷಕ್ಕಾಗಿ ದುಡಿಯುತ್ತಿರುವ, ಜಿಲ್ಲೆಯಲ್ಲಿಯೇ ಸಂಘಟನೆ ಮಾಡುತ್ತಿರುವವರನ್ನ ಗುರುತಿಸಿ ನೇಮಕ ಮಾಡುವ ಮೂಲಕ ಪಕ್ಷ ಸಂಘಟನೆಗೆ ಹೆಚ್ಚು ಒತ್ತನ್ನ ಕೊಡಲಿ, ಜೊತೆಗೆ ಕಾರ್ಯಕರ್ತರನ್ನ ಗುರುತಿಸುವಂತಾಗಲಿ. ನೆಪ ಮಾತ್ರಕ್ಕೆ ನೇಮಕ ಮಾಡುವುದು ಜಿಲ್ಲೆಯಲ್ಲಿ ಸಂಘಟನೆಗೆ ಯಾವುದೇ ಪ್ರಯೋಜನವಿಲ್ಲ ಎನ್ನುವುದು ಕಾರ್ಯಕರ್ತರ ಅಭಿಪ್ರಾಯವಾಗಿದೆ.
ಪಕ್ಷದ ಕಾರ್ಯಕ್ರಮಕ್ಕಿಂತ ಸ್ವಂತ ಕಾರ್ಯಕ್ರಮ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ನಿವೇದಿತ್ ಆಳ್ವಾ ಕಾಂಗ್ರೆಸ್ ಪಕ್ಷದ ಹೆಸರಿನಲ್ಲಿ ಕೆಲಸ ಮಾಡುವುದಕ್ಕಿಂತ ಆಳ್ವಾ ಫೌಂಡೇಶನ್ ಹೆಸರಿನಲ್ಲಿ ಕೆಲಸ ಮಾಡುತ್ತಿದ್ದು, ಇದರಿಂದ ಸಂಘಟನೆಗೆ ಏನು ಪ್ರಯೋಜನ ಎನ್ನುವುದು ಕೆಲ ಕಾರ್ಯಕರ್ತರ ಆರೋಪವಾಗಿದೆ.
ನಿವೇದಿತ್ ಆಳ್ವಾ ಪ್ರಧಾನ ಕಾರ್ಯದರ್ಶಿಯಾಗಿದ್ದು ಕಾರ್ಯಕರ್ತರ ಸಭೆಯನ್ನ ಮಾಡುವುದಾಗಲಿ, ಸಂಘಟನೆ ಮಾಡುವುದಾಗಲಿ ಯಾವ ಕೆಲಸ ಮಾಡುತ್ತಿಲ್ಲ. ಪಕ್ಷದ ಕಾರ್ಯಕ್ರಮ ಹಮ್ಮಿಕೊಂಡಿದ್ದರೆ, ನಾಯಕರುಗಳು ಕ್ಷೇತ್ರಕ್ಕೆ, ಅಥವಾ ಜಿಲ್ಲೆಗೆ ಆಗಮಿಸುವುದಾದರೆ ಅಂತಿಮ ಹಂತದಲ್ಲಿ ಬಂದು ಮುಖ ತೋರಿಸಿ ಹೋಗುತ್ತಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಅಲ್ಲದೇ ಕ್ಷೇತ್ರದಲ್ಲಿ ಪಕ್ಷದ ಹೆಸರಿನಲ್ಲಿ ಯಾವ ಕೆಲಸ ಮಾಡುತ್ತಿಲ್ಲ, ಬದಲಾಗಿ ಆಳ್ವಾ ಫೌಂಡೇಶನ್ ಹೆಸರಿನಲ್ಲಿ ಹೆಚ್ಚಿನ ಕೆಲಸ ಮಾಡುತ್ತಿದ್ದು ಪ್ರಧಾನ ಕಾರ್ಯದರ್ಶಿಯಾದರು ಯಾವ ಪ್ರಯೋಜನ ಇಲ್ಲದಂತಾಗಿದೆ ಎನ್ನುವುದು ಕೆಲ ಕಾರ್ಯಕರ್ತರ ಅಭಿಪ್ರಾಯವಾಗಿದೆ.