• Slide
  Slide
  Slide
  previous arrow
  next arrow
 • ಬಿಜೆಪಿ ಕಾರ್ಯಕರ್ತರ ಸಮಾವೇಶ: ಜನತೆಯ ಪ್ರೀತಿಗೆ ಚಿರಋಣಿ ಎಂದ ಸಚಿವ ಹೆಬ್ಬಾರ್

  300x250 AD

  ಮುಂಡಗೋಡು: ಬದಲಾದ ರಾಜಕೀಯ ಸನ್ನಿವೇಶದಲ್ಲಿ ರಾಜ್ಯದಲ್ಲಿ ಒಂದು ಸರ್ಕಾರದ ಉದಯಕ್ಕೂ ಇನ್ನೊಂದು ಸರ್ಕಾರದ ಪತನಕ್ಕೂ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡ 17 ಶಾಸಕರ ದಿಟ್ಟ ನಿರ್ಧಾರವೇ ಕಾರಣವಾಯಿತು. ಧೀಮಂತ ನಾಯಕ ಯಡಿಯೂರಪ್ಪನವರು ಕೊಟ್ಟ ಮಾತಿನಂತೆ ಸದಾ ನಮ್ಮ ಬೆನ್ನಿಗೆ ನಿಂತು ರಾಜ್ಯದಲ್ಲಿ ಜನರ ಆಶೋತ್ತರಗಳಿಗೆ ಸ್ಪಂದಿಸುವ ಕಾರ್ಯಕರ್ತರನ್ನೇ ಮಾಲಕರೆಂದುಕೊಳ್ಳುವ ಸಿದ್ಧಾಂತಬದ್ಧ ಬಿಜೆಪಿಯನ್ನು ಅಧಿಕಾರಕ್ಕೆ ತರಲಾಯಿತು. ಅದರಂತೆ ಸಚಿವನಾಗಿ ಕ್ಷೇತ್ರದ ಅಭಿವೃದ್ಧಿಗೆ ಕಿಂಚಿತ್ತೂ ಭಂಗ ಬರದಂತೆ ಸೇವೆ ಸಲ್ಲಿಸುತ್ತಾ ಬಂದಿದ್ದೇನೆ. ಅದಕ್ಕೆ ಪ್ರತಿಯಾಗಿ ರಾಜ್ಯಕ್ಕೆ ಮಾದರಿಯಾಗುವಂತೆ ಜಾತಿ, ಮತ, ಪಂಥ ಬೇಧಗಳನ್ನು ಮರೆತು ತಾಲೂಕಿನ ಜನತೆ ನನ್ನ ಕೈ ಹಿಡಿದು ನಡೆಸಿದ್ದಾರೆ. ಅವರೆಲ್ಲರ ಪ್ರೀತಿಗೆ ನಾನು ಚಿರಋಣಿ ಎಂದು ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.
  ಅವರು ಪಟ್ಟಣದ ಟೌನ್‌ಹಾಲ್‌ನಲ್ಲಿ ತಾಲೂಕು ಬಿಜೆಪಿ ಮಂಡಲದ ವತಿಯಿಂದ ಹಮ್ಮಿಕೊಂಡ ಕಾರ್ಯಕರ್ತರ ಸಮಾವೇಶವನ್ನುದ್ದೇಶಿಸಿ ಮಾತನಾಡಿ, ರಾಜ್ಯದಲ್ಲಿ ಚುನಾವಣಾ ವರ್ಷ ಇದಾಗಿದೆ. ಹಳೆ ನೀರು ಹರಿದು ಹೋಗುತ್ತಿದೆ, ಹೊಸ ನೀರು ಹರಿದು ಬರುತ್ತಿದೆ. ಹೋಗುವ ನೀರಿಗೆ ತಡೆಗಟ್ಟುವ ಶಕ್ತಿ ನಮಗಿಲ್ಲ. ಆದರೆ ಬರುವ ಹೊಸ ನೀರನ್ನು ಕಟ್ಟಿ ಗಟ್ಟಿಗೊಳಿಸುವ ಶಕ್ತಿ ನಮಗಿದೆ ಎಂದು ವಿ.ಎಸ್.ಪಾಟೀಲ ಪಕ್ಷ ತೊರೆಯುವ ವಿಚಾರವನ್ನು ಮಾರ್ಮಿಕವಾಗಿ ನುಡಿದರು.
  ಚುನಾವಣೆಯಾಗಿ ಕ್ಷೇತ್ರದ ಅಭಿವೃದ್ಧಿಯೊಂದನ್ನೇ ಗುರಿಯಾಗಿಸಿಕೊಂಡು ಹದಿನೇಳೇ ತಿಂಗಳಿಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಗೊಂಡು ಉಪಚುನಾವಣೆ ಎದುರಿಸಿ ನಿಮ್ಮೆಲ್ಲರ ಆಶೀರ್ವಾದದಿಂದ ಗೆದ್ದು ಸಚಿವನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಆದರೆ ಕ್ಷೇತ್ರದಾದ್ಯಂತ ತ್ಯಾಗ ಮಾಡಿದ್ದೇನೆ, ತ್ಯಾಗ ಮಾಡಿದ್ದೇನೆ ಎನ್ನುವ ವಿ.ಎಸ್.ಪಾಟೀಲ ರಾಜ್ಯದಲ್ಲಿ ಸರ್ಕಾರ ತರದೇ ಹೋಗಿದ್ದರೆ ಅವರಿಗೆ ಗೂಟದ ಕಾರಿನ ಭಾಗ್ಯವೇ ದೊರೆಯುತ್ತಿರಲಿಲ್ಲ. ಕ್ಯಾಬಿನೆಟ್ ದರ್ಜೆಯ ಸ್ಥಾನಮಾನವೂ ಸಿಗುತ್ತಿರಲಿಲ್ಲ. ಒಂದು ಗ್ರಾ.ಪಂ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಲಾಗದ ಈ ಕಾಲಘಟ್ಟದಲ್ಲಿ ಅಧಿಕಾರದಲ್ಲಿರುವ ಪಕ್ಷದ ಶಾಸಕನಾಗಿ ನಿಗಮ ಮಂಡಳಿಯ ಅಧ್ಯಕ್ಷನಾಗಿದ್ದರೂ ಅಧಿಕಾರ ತ್ಯಾಗ ಮಾಡಿ ಕ್ಷೇತ್ರದ ಏಳಿಗೆಗಾಗಿ ಪುನಃ ನಿಮ್ಮ ಮುಂದೆ ಉಪಚುನಾವಣೆಯ ಮೂಲಕ ಆಶೀರ್ವಾದ ಬೇಡಿ ಬಂದವನು ನಾನು ಎಂದು ತಾವು ಮಾಡಿದ ತ್ಯಾಗವನ್ನು ಮೆಲುಕು ಹಾಕಿದರು.
  ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಎಲ್.ಟಿ.ಪಾಟೀಲ ಮಾತನಾಡಿ, ಕೇಂದ್ರದಲ್ಲಿ ಮೋದಿ ಸರ್ಕಾರ, ರಾಜ್ಯದಲ್ಲಿ ಬೊಮ್ಮಾಯಿ ನೇತೃತ್ವದ ಸರ್ಕಾರ ಹಲವು ಜನಪ್ರಿಯ ಯೋಜನೆಗಳ ಮೂಲಕ ಜನಮನ ಗೆಲ್ಲುತಿದೆ. ತಾಲೂಕಿನ ಮಟ್ಟಕ್ಕೆ ಹೇಳುವುದಾದರೆ ಅಧಿಕಾರ ತೊರೆದು ಬಿಜೆಪಿ ಸೇರಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ ಶಿವರಾಮ ಹೆಬ್ಬಾರ್ ಕೇವಲ ಸರ್ಕಾರ ಮಟ್ಟದಲ್ಲಲ್ಲದೇ ತಮ್ಮ ಸ್ವಂತ ಶಕ್ತಿಯಿಂದಲೂ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ವೇಗ ತಂದಿದ್ದಾರೆ. ಬಡವ, ಬಲ್ಲಿದ ಎನ್ನದೇ ಎಲ್ಲರನ್ನೂ ಸಮಾನವಾಗಿ ಕಂಡು ಕುಟುಂಬದವರಂತೆ ನಡೆದಿದ್ದಾರೆ. ಬರಡು ಭೂಮಿಗೆ ನೀರು ಹರಿಸಿ ರೈತರ ಬಾಳಿನ ಆಶಾ ಕಿರಣವಾಗಿರುವ ಹೆಬ್ಬಾರ್ ಅವರು ಸದ್ಯ ಅತಿವೃಷ್ಠಿಯಲ್ಲಿ ಬೆಳೆಹಾನಿಗೊಳಗಾದ ರೈತರಿಗೆ ಪರಿಹಾರ ಕೊಡಿಸುವಲ್ಲಿ ಸದನದಲ್ಲಿ ಧ್ವನಿ ಎತ್ತಬೇಕಿದೆ ಎಂದರು.
  ಮುAಡಗೋಡ ಬಿಜೆಪಿ ನಿಕಟಪೂರ್ವ ಮಂಡಲಾಧ್ಯಕ್ಷ ಗುಡ್ಡಪ್ಪ ಕಾತೂರ, ದಶಕಗಳ ಕಾಲ ಈ ನೆಲದಲ್ಲೇ ಬಾಳಿ ಬದುಕಿದವರಿಗೆ ರೈತರ ಗೋಳು ಕಾಣಲಿಲ್ಲ. ಕೆರೆಗಳಿಗೆ ನೀರು ತುಂಬಿಸುವ ಕಲ್ಪನೆಯೂ ಬರಲಿಲ್ಲ. ರೈತರ ಪಾಲಿನ ಭಾಗ್ಯವೆಂಬಂತೆ ಹೆಬ್ಬಾರ್ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಸರ್ಕಾರ ರಚಿಸಿ ಸಚಿವರಾಗಿ ಮುಂಡಗೋಡು ತಾಲೂಕಿನ ಅನೇಕ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಮಾಡಿ ಆಧುನಿಕ ಭಗೀರಥರಾಗಿದ್ದಾರೆ. ಗ್ರಾಮಗ್ರಾಮಗಳ ಸಣ್ಣಪುಟ್ಟ ರಸ್ತೆಗಳನ್ನೂ ಕಾಂಕ್ರೀಟಿಕರಣಗೊಳಿಸಿದ ಕೀರ್ತಿ ಹೆಬ್ಬಾರ್ ಅವರಿಗೆ ಸಲ್ಲುತ್ತದೆ. ಕೇಂದ್ರದಲ್ಲಿ ಮೋದಿ, ದೇಶಕ್ಕೆ ಹೊಸ ಮನ್ವಂತರವನ್ನು ಬರೆಯುತ್ತಿದ್ದರೆ ಕ್ಷೇತ್ರದಲ್ಲಿ ಹೆಬ್ಬಾರರು ಅಭಿವೃದ್ಧಿಯ ಹೊಸ ಪರ್ವವನ್ನೇ ತೋರುತ್ತಿದ್ದಾರೆ. ಅವರ ಅಭಿವೃದ್ಧಿ ಕಾರ್ಯ ಇನ್ನಷ್ಟು ಸಾಗಲಿ ಎಂದು ಹೇಳಿದರು.
  ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಮಂಡಲಾಧ್ಯಕ್ಷ ನಾಗಭೂಷಣ ಹಾವಣಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರು ಎಸಳೆ, ಗುರುಪ್ರಸಾದ ಹೆಗಡೆ, ಉಷಾ ಹೆಗಡೆ, ಜಿ.ಪಂ ಮಾಜಿ ಸದಸ್ಯ ರವಿ ಗೌಡ ಪಾಟೀಲ, ಪ.ಪಂ ಅಧ್ಯಕ್ಷರಾದ ಜಯಸುಧಾ ಬೋವಿ, ಉಪಾಧ್ಯಕ್ಷ ಶ್ರೀಕಾಂತ ಸಾನು, ರೈತಮೋರ್ಚಾ ಜಿಲ್ಲಾಧ್ಯಕ್ಷ ಮಹೇಶ್ ಹೊಸಕೊಪ್ಪ, ಎಸ್.ಟಿ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ ತಳವಾರ, ಮುಂಡಗೋಡು ಪ್ರಭಾರಿ ಸದಾನಂದ ಭಟ್ಟ, ಪ್ರಮುಖರಾದ ಉಮೇಶ್ ಬಿಜಾಪುರ, ಪ.ಪಂ ಸದಸ್ಯರು, ಪಕ್ಷದ ವಿವಿಧ ಸ್ತರದ ಪದಾಧಿಕಾರಿಗಳು, ಜಿಲ್ಲಾಸ್ತರದ ಪದಾಧಿಕಾರಿಗಳು, ವಿವಿದ ಮೋರ್ಚಾ ಅಧ್ಯಕ್ಷರು, ಬೂತ್ ಅಧ್ಯಕ್ಷರು, ಬೂತ್ ಉಸ್ತುವಾರಿಗಳು, ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
  ಮುಂಡಗೋಡ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ವಿಠ್ಠಲ ಬಾಳಂಬೀಡ ಸ್ವಾಗತಿಸಿದರು. ಪ.ಪಂ ಸದಸ್ಯ ಅಶೋಕ ಛಲವಾದಿ ಪ್ರಾಸ್ತಾವಿಕ ನುಡಿದರು. ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಮಂಜುನಾಥ ನಾಡಿಗೇರ ವಂದಿಸಿದರು. ಮುಂಡಗೋಡು ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪಾಟೀಲ ನಿರೂಪಿಸಿದರು


  ಹೆಬ್ಬಾರ್ ಕೊಂಡಾಡಿದ ಕಾರ್ಯಕರ್ತರು: ಸಮಾವೇಶಕ್ಕೆ 2000ಕ್ಕೂ ಅಧಿಕ ಮಂದಿ ಸೇರಿದ್ದರು. ಚುನಾವಣಾ ವರ್ಷವಾದ್ದರಿಂದ ಕ್ಷೇತ್ರದಲ್ಲಿ ಮುಂಡಗೋಡು ಕಾರ್ಯಕರ್ತರ ಸಮಾವೇಶವೇ ಚುನಾವಣಾ ರಣಕಹಳೆ ಮೊಳಗಿಸಿದಂತಿತ್ತು. ಕಾರ್ಯಕರ್ತರಿಗೆ ಮದ್ಯಾಹ್ನದ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಸಚಿವರೆಂಬ ಹಮ್ಮು ಬಿಮ್ಮು ಇಲ್ಲದೇ ಹೆಬ್ಬಾರ್ ಕಾರ್ಯಕರ್ತರಿಗೆ ಊಟ ಬಡಿಸುವ ಕಾರ್ಯದಲ್ಲಿ ತೊಡಗಿದ್ದರು. ಸಮಾವೇಶದ ತುಂಬಾ ಹೆಬ್ಬಾರ್ ಅವರನ್ನು ಕೊಂಡಾಡುವುದೇ ಕಂಡು ಬಂದಿತು. ಚುನಾವಣೆ ಯಾವುದೇ ಸಂದರ್ಭದಲ್ಲಿ ಬಂದರೂ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಗೆಲುವು ಹೆಬ್ಬಾರ್ ಅವರಿಗೆ ಕಟ್ಟಿಟ್ಟ ಬುತ್ತಿ ಎಂಬ ಮಾತು ಕಾರ್ಯಕರ್ತರ ವಲಯದಲ್ಲಿ ಕೇಳಿಬಂದಿತು.

  300x250 AD

  ಕೋಟ್…
  ಯಾರೂ ಯಾರನ್ನೂ ಮೋಸ ಮಾಡಲು ಸಾಧ್ಯವಿಲ್ಲ. ನಮ್ಮ ನಡೆ- ನುಡಿ ಎಲ್ಲವನ್ನೂ ನಿರ್ಧರಿಸುತ್ತದೆ. ನೇರ, ದಿಟ್ಟ, ನಿರಂತರವಾಗಿದ್ದಾಗ ಯಾವುದಕ್ಕೂ ಭಯ ಪಡುವ ಅಗತ್ಯವಿಲ್ಲ. ಬಡವರನ್ನು ಕಾಪಾಡುವ ಸೇವೆ ನನ್ನಿಂದಾಗುತ್ತಿದೆ ಎಂಬ ಆತ್ಮವಿಶ್ವಾಸವಿದ್ದಾಗ ಮೇಲಿರುವ ಭಗವಂತನೂ ಕಾಪಾಡುತ್ತಾನೆ.
  • ಶಿವರಾಮ ಹೆಬ್ಬಾರ್, ಕಾರ್ಮಿಕ ಸಚಿವ

  Share This
  300x250 AD
  300x250 AD
  300x250 AD
  Leaderboard Ad
  Back to top