ಯಲ್ಲಾಪುರ: ತಾಲೂಕಿನ ಉಮ್ಮಚಗಿ ಗ್ರಾ.ಪಂ ವ್ಯಾಪ್ತಿಯಲ್ಲಿ ಮಳೆಯಿಂದ ಹಾನಿಗೊಳಗಾದ ರೈತರ ತೋಟಗಳಿಗೆ ತೋಟಗಾರಿಕಾ ಇಲಾಖೆಯ ಅಧಿಕಾರಿ ಹೀನಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಅವರನ್ನು ಭೇಟಿ ಮಾಡಿ ಮಾಹಿತಿ ನೀಡಿದ ಗ್ರಾ.ಪಂ.ಸದಸ್ಯೆ ಸರಸ್ವತಿ ಸುಬ್ರಾಯ ಪಟಗಾರ ಅವರು, ತುಡುಗುಣಿ, ಚವತ್ತಿ ಭಾಗದ ಪ್ರತಿ ಊರಿನಲ್ಲೂ ಮಳೆಯಿಂದಾಗಿ ಹಾನಿಯುಂಟಾಗಿದ್ದು, ಪ್ರತಿ ರೈತರೂ ಸಂಕಟದಲ್ಲಿದ್ದಾರೆ. ಅವರ ಅಡಿಕೆ ಬೆಳೆಗೆ ಕೊಳೆ ರೋಗ ಬಾಧಿಸುವ ಸಂಭವ ಜಾಸ್ತಿಯಿದೆ. ಕಾಳು ಮೆಣಸಿಗೂ ರೋಗ ಕಾಡಬಹುದು ಎಂದು ಹೇಳಿದರು.
ನಿಲ್ಲದ ಹಾನಿ: ಹಾಸ್ಪುರದ ನರಸಿಂಹ ಗಣೇಶ ಹೆಗಡೆ ಎನ್ನುವವರ ತೋಟಕ್ಕೆ ದೊಡ್ಡ ದೊಡ್ಡ ಕಲ್ಲುಗಳ ರಾಶಿಯೇ ಬಂದು ಬಿದ್ದಿವೆ. ಕೂಮನಮನೆಯ ರಸ್ತೆಗೆ ಅಳವಡಿಸಿದ್ದ ಪೈಪ್ ಕಿತ್ತು ಹೋಗಿ ಸಂಚಾರಕ್ಕೆ ಯೋಗ್ಯವಿಲ್ಲದಂತಾಗಿದೆ.
ಸ್ಥಳಕ್ಕೆ ಬಾರದ ಕೃಷಿ ಇಲಾಖೆಯ ಅಧಿಕಾರಿಗಳು: ಮಳೆಯಿಂದಾಗಿ ಚವತ್ತಿ ಮತ್ತು ತುಡುಗುಣಿ ಪ್ರದೇಶದಲ್ಲಿ ಭತ್ತಕ್ಕೆ ಹಾನಿಯಾಗಿ,ನಾಟಿ ಮಾಡಿದ ಭತ್ತದ ಸಸಿಗಳು ನೀರಿನಲ್ಲಿ ಕೊಚ್ಚಿ ಹೋಗಿ ವಾರವಾದರೂ ಸ್ಥಳಕ್ಕೆ ಬಂದು ರೈತರನ್ನು ಭೇಟಿ ಮಾಡಿ ಕೊನೆ ಪಕ್ಷ ಸಾಂತ್ವನ ಹೇಳುವ ಕೆಲಸವನ್ನೂ ಮಾಡದ ಕೃಷಿ ಇಲಾಖೆಯ ಅಧಿಕಾರಿಗಳ ಬಗ್ಗೆ ರೈತರು ತೀವ್ರ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಭತ್ತ ಬೆಳೆಯುವವರೇ ಕಡಿಮೆಯಾಗುತ್ತಿರುವಾಗ ಭತ್ತ ಬೆಳೆದು ಸಂಕಷ್ಟಕ್ಕೀಡಾದರೂ ತಿರುಗಿ ನೋಡದ ಇಲಾಖೆಯ ಅಧಿಕಾರಿಗಳ ಬಗೆಗೆ ಆಕ್ರೋಶ ವ್ಯಕ್ತವಾಗುತ್ತಿದೆ.