ಮುಂಡಗೋಡ: ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟಿ ಮತ್ತು ಸರ್ಕಾರಿ ಆಸ್ಪತ್ರೆ ಆಶ್ರಯದಲ್ಲಿ ನೇತ್ರ ದಾನದ ಮಾಹಿತಿ ಕಾರ್ಯಕ್ರಮ ಕೆನರಾ ಬ್ಯಾಂಕ್ ದೇಶಪಾಂಡೆ ಸಬಾಭವನದಲ್ಲಿ ನಡೆಯಿತು.
ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಎಚ್.ಎಫ್.ಇಂಗಳೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಣ್ಣಿನ ದಾನದ ಬಗ್ಗೆ ಜನರು ಸಾಕಷ್ಟು ತಪ್ಪು ತಿಳಿವಳಿಕೆ ಹೊಂದಿದ್ದಾರೆ. ಅದಕ್ಕೆ ಮಾಹಿತಿಯ ಕೊರತೆ ಇದೆ. ಆದ್ದರಿಂದ ಜನರು ತಮ್ಮ ಮರಣಾನಂತರ ಕಣ್ಣುಗಳನ್ನು ದಾನ ಮಾಡಲು ನೋಂದಣಿ ಮಾಡಲು ಮುಂದಾಗಬೇಕು ಮತ್ತು ಒಬ್ಬ ವ್ಯಕ್ತಿಯ ಒಂದು ಕಣ್ಣಿನಿಂದ ಎರಡು ಅಂಧ ಕಣ್ಣಿಗೆ ಸ್ಪರ್ಶ ನೀಡಬಹುದು ಎಂದರು.
ಇನ್ನೋರ್ವ ಅಥಿತಿ ಡಾ.ವರ್ಷ ಮಾತನಾಡಿ, ನೇತ್ರದಾನ ಮಾಡುವವರು ಬದುಕಿರುವಾಗ ನೇತ್ರ ಬ್ಯಾಂಕಿಗೆ ಒಪ್ಪಿಗೆ ಸೂಚಿಸಬೇಕು ಮತ್ತು ತನ್ನ ಕುಟುಂಬದ ಎಲ್ಲಾ ಸದಸ್ಯರಿಗೆ ವಿಷಯ ತಿಳಿಸಿರಬೇಕು. ಅಂಧರಿಗೆ ನೇತ್ರ ಜೋಡಿಸಿದಾಗ ಕುರುಡರ ಬದುಕು ಹಸನಾಗುವುದು. ನೇತ್ರ ಬ್ಯಾಂಕಿನ ತಂಡದವರು ಬರುವವರೆಗೆ ಮೃತ ವ್ಯಕ್ತಿಯ ಪಾರ್ಥಿವ ಶರೀರದ ತಲೆಯ ಕೆಳಗೆ ಎರಡು ದಿಂಬುಗಳನ್ನು ಇಟ್ಟು ತಲೆಯನ್ನು ಸ್ವಲ್ಪ ಮೇಲಿನ ಮಟ್ಟಕ್ಕೆ ಇಡಬೇಕು. ಮೃತ ವ್ಯಕ್ತಿಯ ಕಣ್ಣುಗಳನ್ನು ಪೂರ್ತಿಯಾಗಿ ಮುಚ್ಚಿ ಅದು ಒಣಗದಂತೆ ನೋಡಿಕೊಳ್ಳಬೇಕು. ಮುಚ್ಚಿದ ಕಣ್ಣುಗಳ ಮೇಲೆ ತಣ್ಣೀರಿನಲ್ಲಿ ಒದ್ದೆ ಮಾಡಿದ ಬಟ್ಟೆ ಇಡಬೇಕು. ಕೇವಲ 20 ನಿಮಿಷದಲ್ಲಿ ಕಣ್ಣಿನ ಗುಡ್ಡೆಯನ್ನು ದೇಹದಿಂದ ಬೇರ್ಪಡಿಸಿ, ನೇತ್ರ ಬ್ಯಾಂಕಿಗೆ ಒಯ್ಯುತ್ತಾರೆ ಎಂದರು.
ವೇದಿಕೆ ಮೇಲೆ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟಿ ತಾಲೂಕು ಶಾಖೆಯ ಯೋಜನಾಧಿಕಾರಿ ಮಹಾಬಲೇಶ್ವರ ನಾಯ್ಕ, ಸರ್ಕಾರಿ ಆಸ್ಪತ್ರೆಯ ಆಡಳಿತ ಶಿಕ್ಷಣಾಧಿಕಾರಿ ಶ್ರೀಶೈಲ ಪಟ್ಟಣಶೆಟ್ಟಿ, ನೇತ್ರ ಸಹಾಯಕ ಮಾರುತಿ, ಕೆನರಾಬ್ಯಾಂಕ್ ದೇಶಪಾಂಡೆ ಆರ್‌ಸೆಟಿ ಸಿಬ್ಬಂದಿ ಮತ್ತು ಸ್ವ- ಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.