ಕಾರವಾರ: ಜಿಲ್ಲೆಯಲ್ಲಿ ಗುಡ್ಡ ಕುಸಿತ ತಡೆಗೆ ಅರಣ್ಯ ಇಲಾಖೆ ವಿನೂತನ ಪ್ರಯೋಗಕ್ಕೆ ಮುಂದಾಗಿದೆ. ಹೆಚ್ಚಿನ ಗಿಡಗಳನ್ನ ಬೆಳೆಸುವ ಮೂಲಕ ಮಣ್ಣು ಕುಸಿಯದಂತೆ ತಡೆಯಲು ಮನುಷ್ಯ ತೆರಳಿ ಗಿಡ ನೆಡದಂತಹ ಪ್ರದೇಶಗಳಲ್ಲಿ ಡ್ರೋನ್ ಮೂಲಕ ಬೀಜ ಬಿತ್ತನೆಗೆ ಮುಂದಾಗಿದೆ.
ರಾಜ್ಯದಲ್ಲಿ ಕಳೆದ ಐದು ವರ್ಷದಿಂದ ಅಧಿಕ ಮಳೆಯಿಂದ ಗುಡ್ಡ ಕುಸಿತವಾಗಿ ಅಪಾರ ಪ್ರಮಾಣದ ಹಾನಿ ಸಂಭವಿಸಿತ್ತು. ಇನ್ನು ಜಿಲ್ಲೆಯ ಭಟ್ಕಳ, ಕಾರವಾರ, ಅಂಕೋಲಾ, ಯಲ್ಲಾಪುರ, ಹೊನ್ನಾವರ, ಶಿರಸಿ ಸೇರಿದಂತೆ ಹಲವೆಡೆ ಗುಡ್ಡ ಕುಸಿತವಾಗಿ ಅಪಾರ ಪ್ರಮಾಣದ ಹಾನಿಯಾಗಿದ್ದಲ್ಲದೇ ಪ್ರಾಣ ಹಾನಿ ಸಹ ಸಂಭವಿಸಿತ್ತು.
ಇನ್ನು ಗುಡ್ಡ ಕುಸಿತಕ್ಕೆ ಕಾರಣ ಏನೆಂಬದನ್ನ ಅರಣ್ಯ ಇಲಾಖೆಯವರು ಪರಿಶೀನೆಗೆ ಮುಂದಾದಾಗ, ಅಧಿಕ ಮಳೆ, ಅರಣ್ಯ ನಾಶ, ನೀರಿನ ಹರಿವನ್ನ ತಡೆಯುವುದು, ಮಾರ್ಗ ಬದಲಿಸುವುದು, ಇಳಿಜಾರು ಪ್ರದೇಶದಲ್ಲಿ ಮರ ಗಿಡಗಳನ್ನ ಕಡಿಯುವುದು ಸೇರಿದಂತೆ ನಾನಾ ಕಾರಣದಿಂದ ಮಣ್ಣು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಕಳೆದುಕೊಂಡು ಗುಡ್ಡ ಕುಸಿಯುತ್ತಿದೆ ಎಂದು ತಿಳಿದು ಬಂದಿತ್ತು.
ಈ ನಿಟ್ಟಿನಲ್ಲಿ ಗುಡ್ಡ ಕುಸಿತವಾದ ಪ್ರದೇಶದಲ್ಲಿ ಅರಣ್ಯ ಇಲಾಖೆ ಬೀಜ ಬಿತ್ತನೆ ಕಾರ್ಯ ಮಾಡಲು ಮುಂದಾಗಿದೆ. ಜಿಲ್ಲೆಯ ಹೊನ್ನಾವರ, ಕಾರವಾರ, ಶಿರಸಿ, ಕುಮಟಾ, ಜೋಯಿಡಾ, ಯಲ್ಲಾಪುರ ಸೇರಿ ಒಟ್ಟು 120 ಹೆಕ್ಟೆರ್ ಪ್ರದೇಶದಲ್ಲಿ ಗುಡ್ಡ ಕುಸಿತವಾಗಿದ್ದು ಇದರಲ್ಲಿ ಈಗ ಸುಮಾರು 100 ಹೆಕ್ಟೆರ್ ಪ್ರದೇಶದಲ್ಲಿ ಡ್ರೋನ್ ಮೂಲಕ ಬೀಜ ಬಿತ್ತನೆ ನಡೆಸಲಾಗಿದೆ.
ಗುಡ್ಡ ಕುಸಿತವಾದ ಪ್ರದೇಶಗಳಲ್ಲಿ ಮನುಷ್ಯರು ಹೋಗಿ ಮತ್ತೆ ಗಿಡಗಳನ್ನ ನೆಟ್ಟಿ ಮಣ್ಣು ಜಾರುವುದನ್ನ ತಡೆಯಲು ಸಾಧ್ಯವಾಗದೇ ಇರುವಂತಹ ಪ್ರದೇಶಗಳನ್ನ ಗುರುತಿಸಿ ಡ್ರೋನ್ ಮೂಲಕ ಬೀಜ ಬಿತ್ತನೆ ಮಾಡಿದ್ದು ಈ ಮೂಲಕ ಗುಡ್ಡ ಕುಸಿತ ತಡೆಗೆ ಪ್ರಯತ್ನ ನಡೆಸಲಾಗಿದೆ ಎಂದು ಕಾರವಾರ ಅರಣ್ಯ ವಲಯದ ಡಿಎಫ್ಒ ಪ್ರಶಾಂತಕುಮಾರ್ ತಿಳಿಸಿದ್ದಾರೆ.