Slide
Slide
Slide
previous arrow
next arrow

ಶಿಕ್ಷಣವಿದ್ದಲ್ಲಿ ದಾರಿದ್ರ್ಯವಿಲ್ಲ: ಪ್ರಸನ್ನನಾಥ ಸ್ವಾಮೀಜಿ

300x250 AD

ಕುಮಟಾ: ತಾಲೂಕಿನ ದೀವಗಿಯ ಹಾಲಕ್ಕಿ ಒಕ್ಕಲಿಗರ ಸಮುದಾಯ ಭವನದಲ್ಲಿ ಜಿಲ್ಲಾ ಮಟ್ಟದ ಹಾಲಕ್ಕಿ ಒಕ್ಕಲಿಗರ ಪ್ರತಿಭಾ ಪುರಸ್ಕಾರ ಹಾಗೂ ನಾಡಪ್ರಭು ಕೆಂಪೇಗೌಡರವರ ಜಯಂತೋತ್ಸವ ಕಾರ್ಯಕ್ರಮ ಆದಿಚುಂಚನಗಿರಿ ಮಠದ ಪ್ರಸನ್ನನಾಥ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಸಂಪನ್ನಗೊಂಡಿತು.
ನಾಡಪ್ರಭು ಕೆಂಪೇಗೌಡರವರ ಜಯಂತೋತ್ಸವ ನಿಮಿತ್ತ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳು, ಉತ್ತರ ಕನ್ನಡ ಮತ್ತು ಶಿವಮೊಗ್ಗ ಶಾಖಾ ಮಠದ ಪ್ರಸನ್ನನಾಥ ಸ್ವಾಮೀಜಿ ಅವರು ಜಿಲ್ಲಾ ಮಟ್ಟದ ಹಾಲಕ್ಕಿ ಒಕ್ಕಲಿಗರ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ನಂತರ ಮಾತನಾಡಿದ ಶ್ರೀಗಳು, ಜಿಲ್ಲೆಯಲ್ಲಿರುವ ಹಾಲಕ್ಕಿ ಒಕ್ಕಲಿಗರು ಬುಡಕಟ್ಟು ಸಂಸ್ಕೃತಿ ಹೊಂದಿರುವ ಕಲೆ ಸಂಪ್ರದಾಯದಲ್ಲಿ ಶ್ರೀಮಂತವಾಗಿರುವ ಸಮುದಾಯ. ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಯಾಕೆ ಹಿಂದುಳಿದಿದ್ದಾರೆ ಎಂಬುದನ್ನು ಪ್ರತಿಯೊಬ್ಬ ಹಾಲಕ್ಕಿ ಪ್ರಶ್ನಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಎಲ್ಲಿ ಶಿಕ್ಷಣ ಇರುತ್ತೋ ಅಲ್ಲಿ ದಾರಿದ್ರ‍್ಯ ಮುಕ್ತವಾಗುತ್ತದೆ. ಶಿಕ್ಷಣ ಪ್ರತಿಯೊಬ್ಬರ ಹಕ್ಕು ಇದು ಸಂವಿಧಾನವೇ ನಮಗೆ ನೀಡಿದೆ. ಅದನ್ನು ಪಡೆದುಕೊಳ್ಳುವ ಛಲ ಹೋರಾಟ ಮಾಡಬೇಕು ಎಂದರು.
ಪದ್ಮಶ್ರೀ ಪುರಸ್ಕೃತೆ ಮತ್ತು ಚುಂಚಶ್ರೀ ಪ್ರಶಸ್ತಿಗೆ ಆಯ್ಕೆಯಾದ ತುಳಸಿ ಗೌಡ ಮಾತನಾಡಿ, ಎಲ್ಲರೂ ಗಿಡ ನೆಡುವುದರ ಮೂಲಕ ಪರಿಸರ ಪ್ರಜ್ಞೆ ಬೆಳೆಸಿಕೊಳ್ಳಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಗೋವಿಂದ ಗೌಡ ಮಾತನಾಡಿ, ಪ್ರತಿಭಾವಂತರಾಗಿರುವ ವಿದ್ಯಾರ್ಥಿಗಳು ಆರ್ಥಿಕ ಸಂಕಷ್ಟಕ್ಕೆ ಹೆದರಿ ತಮ್ಮ ಶಿಕ್ಷಣವನ್ನು ಮೊಟಕುಗೊಳಿಸಬಾರದು. ಅಂತಹ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ನೆರವು ನೀಡಲು ನಮ್ಮ ಸಂಘ ವಿದ್ಯಾನಿಧಿ ಎನ್ನುವ ಯೋಜನೆ ಮೂಲಕ ಎಲ್ಲಾ ದಾನಿಗಳ ನೆರವು ಪಡೆದು ಆರ್ಥಿಕವಾಗಿ ಹಿಂದುಳಿದಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತದೆ. ಅದನ್ನು ಪಡೆದವರು ಭವಿಷ್ಯದಲ್ಲಿ ಅಷ್ಟೇ ಗೌರವ ಪೂರಕವಾಗಿ ಹಿಂದಿರುಗಿಸಿ ಉಳಿದವರಿಗೆ ಅನುಕೂಲ ಮಾಡುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಕಳೆದ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಶೇಕಡಾ 85 ಹಾಗೂ ಪಿಯುಸಿ ಯಲ್ಲಿ ಶೇಕಡ 80ಕ್ಕಿಂತ ಹೆಚ್ಚು ಅಧಿಕ ಅಂಕಗಳಿಸಿದ 160 ವಿದ್ಯಾರ್ಥಿ ಪ್ರತಿಭೆಗಳನ್ನು ಸನ್ಮಾನಿಸಿ ಪುರಸ್ಕರಿಸಲಾಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಉಪನ್ಯಾಸಕ ಡಾ. ಬಾಬು ಗೌಡ, ಸರ್ಕಾರಿ ವಕೀಲ ವೆಂಕಟೇಶ್ ಗೌಡ, ಪ್ರಜಾವಾಣಿ ಚೇಂಜ್ ಮೇಕರ್ ಪ್ರಶಸ್ತಿ ಪುರಸ್ಕೃತ ಮಾರುತಿ ಗೌಡ, ಬಿಲ್ವಿದ್ಯೆ ಪ್ರವೀಣ ಅಮಿತ್ ಗೌಡ, ರಾಷ್ಟ್ರೀಯ ಕ್ರೀಡಾಪಟು ಕೃಷ್ಣ ಗೌಡ, ಜಿಲ್ಲಾ ಉತ್ತಮ ಶಿಕ್ಷಕ ಮಹಾದೇವ ಗೌಡ, ರಾಜ್ಯಮಟ್ಟದ ನಿರೂಪಕ ದಿನೇಶ್ ಗೌಡ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಈಶ್ವರ ಗೌಡ ಸ್ವಾಗತಿಸಿದರು. ಡಾ.ಶ್ರೀಧರ ಗೌಡ ಪ್ರಸ್ತಾವಿಸಿದರು. ವೇದಿಕೆಯಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್ ಕಾರವಾರ ಪ್ರಾಂಶುಪಾಲರಾದ ವಾಸುದೇವ ಗೌಡ, ಉತ್ತರ ಕನ್ನಡ ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘದ ಅಧ್ಯಕ್ಷ ಹನುಮಂತ ಗೌಡ, ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂ.ಬಿ.ಗೌಡ, ನೌಕರರ ಸಂಘದ ಅಧ್ಯಕ್ಷ ಆರ್.ಪಿ.ಗೌಡ, ಗ್ರಾಮ ಒಕ್ಕಲು ಸಮುದಾಯ ಭವನದ ಅಧ್ಯಕ್ಷ ಮಂಜುನಾಥ್ ಪಟಗಾರ, ಎಚ್ ಎನ್ ರಾಜೇಶ್, ಸುಬ್ರಾಯ ಗೌಡ, ಸೀಮೆಗೌಡರಾದ ದೇವು ಗೌಡ, ಗೋಪಾಲ್ ಗೌಡ, ಪಕೀರ ಗೌಡ ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top