ಕಾರವಾರ: ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಸತೀಶ್ ಸೈಲ್ ಕೆಲ ತಿಂಗಳುಗಳಿಂದ ಕಾಂಗ್ರೆಸ್ ಪಕ್ಷವನ್ನ ತೊರೆದು ಪಕ್ಷೇತರವಾಗಿ ಕಣಕ್ಕೆ ಇಳಿಯುತ್ತಾರೆ, ಇಲ್ಲವೇ ಬಿಜೆಪಿಗೆ ಸೇರುತ್ತಾರೆ ಎನ್ನುವ ಸುದ್ದಿ ಹರಿದಾಡಿತ್ತು. ಇದೀಗ ಸ್ವತಃ ಸತೀಶ್ ಸೈಲ್ ಅವರೇ ಈ ಗೊಂದಲಕ್ಕೆ ತೆರೆ ಎಳೆದಿದ್ದು ತಾನು ಅಂದು ಕಾಂಗ್ರೆಸ್ ಇಂದು ಕಾಂಗ್ರೆಸ್ ಎನ್ನುವ ಹೇಳಿಕೆಯನ್ನ ನೀಡಿದ್ದಾರೆ.
ಹರಿದಾಡಿದ ಸುದ್ದಿಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸತೀಶ್ ಸೈಲ್ ನನ್ನ ನಡೆ ಕಾಂಗ್ರೆಸ್ ಕಡೆ ಎಂದು ಮೊದಲು ಹೇಳಿದ್ದೆ. ಈಗಲೂ ಪ್ರತಿ ಗ್ರಾಮದಲ್ಲಿ ತೆರಳಿದಾಗ ಇದೇ ಮಾತನ್ನೇ ಹೇಳುತ್ತಿದ್ದೇನೆ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಟಿಕೇಟ್ ಗಾಗಿ ಕೆಲವರು ಪ್ರಯತ್ನ ಪಟ್ಟಿದ್ದಾರೆ. ಇದು ತಪ್ಪಲ್ಲ, ಕಾಂಗ್ರೆಸ್ ಪಕ್ಷ ರಾಷ್ಟ್ರೀಯ ಪಕ್ಷ,ಯಾರಿಗೆ ಬೇಕಾದರು ಟಿಕೇಟ್ ಕೊಡಬಹುದು. ಟಿಕೇಟ್ ಯಾರ ಸ್ವತ್ತಲ್ಲ.ನಾನು ಹದಿನೈದು ವರ್ಷದಿಂದ ಪಕ್ಷಕ್ಕಾಗಿ ದುಡಿಯುತ್ತಿದ್ದು ಇಂದಿಗೂ ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ, ದೇಶಪಾಂಡೆಯವರ ಮುಖಂಡತ್ವದಲ್ಲಿ ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದೇನೆ ಎಂದಿದ್ದಾರೆ. ನಾನು ಶಾಸಕನಾಗಿದ್ದಾಗ, ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿತ್ತು, ಆಗ 1900 ಕೋಟಿ ಹಣವನ್ನ ಕಾರವಾರ ಕ್ಷೇತ್ರಕ್ಕೆ ತಂದು ಅನೇಕ ಅಭಿವೃದ್ಧಿ ಚಟುವಟಿಕೆ ಕೆಲಸ ಮಾಡಿದ್ದೇನೆ. ಸೇತುವೆ, ರಸ್ತೆಗಳನ್ನ ನಿರ್ಮಿಸಿದ್ದೇವೆ. ಸೇತುವೆ ನಿರ್ಮಿಸಿದ್ದರಿಂದ ಕೈಗಾಕ್ಕೆ ಹೋಗಲು 17 ಕಿಲೋ ಮೀಟರ್ ಕಡಿತವಾಗಿರುವುದು ನಾನು ಮಾಡಿರುವ ಅಭಿವೃದ್ಧಿ ಕೆಲಸ. ಈ ಎಲ್ಲಾ ಕೆಲಸಗಳನ್ನ ಮಾಡಿದ್ದು ಕಾಂಗ್ರೆಸ್ ಪಕ್ಷದಲ್ಲಿದ್ದಾಗ. ಅದಕ್ಕಾಗಿಯೇ ಇಂದಿಗೂ ಕಾಂಗ್ರೆಸ್ ನಲ್ಲಿಯೇ ಇದ್ದೇನೆ. ಕೆಲವರು ನಾನು ಪಕ್ಷದಲ್ಲಿ ಸರಿಯಾಗಿ ಗುರುತಿಸಿಕೊಳ್ಳುತ್ತಿಲ್ಲ ಎನ್ನುತ್ತಿದ್ದಾರೆ. ಕುಮಟಾ, ಸಿದ್ದಾಪುರ, ಶಿರಸಿಯಲ್ಲಿ ಸಭೆಗಳಿಗೆ ನಾನು ಹೋಗಿದ್ದೇನೆ. ದಾವಣಗೆರೆಯಲ್ಲಿನ ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಹೋಗಿದ್ದೇನೆ, ಪಕ್ಷದ ನಾಯಕರ ಸಂಪರ್ಕದಲ್ಲಿದ್ದೇನೆ. ನಾನು ಎಂದಿಗೂ ಕಾಂಗ್ರೆಸ್ ಪಕ್ಷದಲ್ಲಿ ಇಲ್ಲ ಎಂದು ಹೇಳಿಲ್ಲ. ಎಲ್ಲಾ ನಾಯಕರ ಜೊತೆ ಸಂಪರ್ಕದಲ್ಲಿದ್ದು ಕೆಲವರು ಚುನಾವಣೆ ಸಂದರ್ಭದಲ್ಲಿ ಬಣ್ಣ ಬದಲಿಸುತ್ತಾರೆ. ಆ ರೀತಿ ನಾನಲ್ಲ ಎಂದಿದ್ದಾರೆ.
ನಾನು ಹಿಂದೆಯೂ ಹೋರಾಟಗಾರನಾಗಿದ್ದು ಇಂದಿಗೂ ಜನರ ಸಮಸ್ಯೆಗಾಗಿ ಹೋರಾಟ ಮಾಡುತ್ತಲೇ ಇದ್ದೇನೆ. ಮುಂದೆಯೂ ಹೋರಾಟವನ್ನ ಮಾಡುತ್ತೇನೆ. ಬಿಜೆಪಿ ಟಿಕೇಟ್ ಗಾಗಿ ಪ್ರಯತ್ನ ಪಡುತ್ತಿರುವುದಾಗಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದು ಕ್ಷೇತ್ರದಲ್ಲಿ ಬಿಜೆಪಿ ಟಿಕೇಟ್ ತರಲು ಈಗ ಸಾಧ್ಯವಿದೆಯೇ, ಸಾಧ್ಯವಿಲ್ಲದನ್ನ ಯಾಕೆ ಪ್ರಯತ್ನಿಸಲಿ ಎಂದು ಸತೀಶ್ ಸೈಲ್ ಹೇಳಿದ್ದಾರೆ.