ಅಂಕೋಲಾ: ತಾಲೂಕಿನ ಗುಂಡಬಾಳಾ ಗ್ರಾಮದಲ್ಲಿ 25ನೇ ವರ್ಷದ ಗಣೇಶೋತ್ಸವ ಬೆಳ್ಳಿ ಮಹೋತ್ಸವದ ಅಂಗವಾಗಿ ವನಮಹೋತ್ಸವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ್ದ ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡ ಮಾತನಾಡಿ, ಗಿಡ ನೆಟ್ಟು ಬೆಳೆಸುವುದರಿಂದ ನಮಗೆ ಒಳ್ಳೆಯ ಗಾಳಿ, ಮಳೆ, ಉರುವಲಿಗೆ ಸೌದೆ ಸೇರಿದಂತೆ ಅನೇಕ ಪ್ರಯೋಜನ ಸಿಗುತ್ತದೆ. ಗಿಡ ಕಡಿಯುವ ಬದಲು ಎಲ್ಲರೂ ಗಿಡ ನೆಡೋಣ. ಗುಂಡಬಾಳಾ ಗ್ರಾಮದವರು ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಬಹಳ ಒಳ್ಳೆಯದು ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಹೊಸಾಕಂಬಿ ವಲಯ ಅರಣ್ಯಾಧಿಕಾರಿ ಸುರೇಶ ನಾಯ್ಕ, ಗಣೇಶೋತ್ಸವ ದೇಶದಲ್ಲಿ ಪ್ರಾರಂಭವಾದ ಹಿನ್ನೆಲೆ ತಿಳಿಸುತ್ತಾ ಅರಣ್ಯ ಬೆಳೆಸಿ ಉಳಿಸಬೇಕಾದ ಅನಿವಾರ್ಯತೆ ಮತ್ತು ಅಗತ್ಯತೆಯ ಬಗ್ಗೆ ತಿಳಿಸಿದರು. ಜೊತೆಗೆ ಗಿಡ ನೆಟ್ಟು ಬೆಳೆಸುವ ರೈತರಿಗೆ ಸರ್ಕಾರ ನೀಡುವ ಸಹಾಯಧನದ ಬಗ್ಗೆ ಸಹ ಜನತೆಗೆ ತಿಳಿಸಿಕೊಟ್ಟರು.
ಸಂಘಟಕ ರಮಾನಂದ ನಾಯ್ಕ ಗುಂಡಬಾಳಾ ಪ್ರಾಸ್ತಾವಿಕವಾಗಿ ಮಾತನಾಡಿ, ಬೆಳ್ಳಿ ಮಹೋತ್ಸವದ ಪ್ರಯುಕ್ತ ನಾವು ಯಕ್ಷಗಾನ, ಅನ್ನದಾನ, ಗುಮ್ಮಟೆ ವಾದ್ಯ ನುಡಿಸುವ ಕಾರ್ಯಕ್ರಮಗಳ ಜೊತೆಗೆ ಜನತೆಯಲ್ಲಿ ಪರಿಸರ ಮತ್ತು ಸ್ವಚ್ಚತೆಯ ಅರಿವು ಮೂಡಿಸಲು ಇವತ್ತು ವನಮಹೋತ್ಸವ ಮತ್ತು ನಾಳೆ ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ.ನಮ್ಮೂರಿನ ಅರಣ್ಯ, ಪರಿಸರ ಉಳಿಸಿಕೊಳ್ಳುವ ಜವಾಬ್ದಾರಿಯನ್ನು ನಾವು ಸಮರ್ಥವಾಗಿ ನಿರ್ವಹಿಸುತ್ತೇವೆ ಎಂದರು.
ಉಪ ವಲಯ ಅರಣ್ಯಾಧಿಕಾರಿಗಳಾದ ಸತೀಶ್ ಕಾಂಬ್ಳೆ, ರಾಘವೇಂದ್ರ ಜೀರಗಾಳೆ, ಉದ್ದಿಮೆದಾರ ಮುಕುಂದ ನಾಯ್ಕ, ಶಿಕ್ಷಕ ಸಿಣ್ಣಾಗಾಂವಕರ, ಗುಂಡಬಾಳಾ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಅನಿಲ್ ನಾಯ್ಕ, ಉಪಾಧ್ಯಕ್ಷ ಸಂತೋಷ್ ಗೌಡ, ಚಂದ್ರಹಾಸ ಗೌಡ ಸೇರಿದಂತೆ ಅರಣ್ಯ ಇಲಾಖೆಯವರು ಮತ್ತು ಊರ ನಾಗರಿಕರು ಉಪಸ್ಥಿತರಿದ್ದರು.