Slide
Slide
Slide
previous arrow
next arrow

ಐಎನ್ಎಸ್ ವಿಕ್ರಾಂತ್ ಕಾರ್ಯಾರಂಭ: ನೌಕಾಪಡೆಗೆ ಹೊಸ ಧ್ವಜ ನೀಡಿದ ಮೋದಿ

300x250 AD

ಕೊಚ್ಚಿ: ಐಎನ್ಎಸ್ ವಿಕ್ರಾಂತ್ (INS Vikrant) ವಿಶೇಷ ಮತ್ತು ವಿಶಿಷ್ಟ ಹಡಗು ಎಂದು ಬಣ್ಣಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಇದೊಂದು ತೇಲಾಡುವ ನಗರವಾಗಿದೆ ಎಂದರು. ಯುದ್ಧ ವಿಮಾನಗಳನ್ನು ಹೊತ್ತೊಯ್ಯುವ ಮತ್ತು ಸ್ವದೇಶಿ ನಿರ್ಮಿತ ಐಎನ್ಎಸ್ ವಿಕ್ರಾಂತ್ ಹಡಗಿನ ಕಾರ್ಯಾರಂಭಕ್ಕೆ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಇದೇ ವೇಳೆ, ನೌಕಾಪಡೆಗೆ ಹೊಸ ಧ್ವಜವನ್ನು ನೀಡಲಾಗಿದ್ದು, ಹಡಗಿನಲ್ಲಿ ಹೊಸ ಧ್ವಜವನ್ನು ಮೊದಲ ಬಾರಿಗೆ ಹಾರಾಟ ನಡೆಸಲಾಯಿತು.

ಪ್ರಧಾನಿ ಮೋದಿ ನೌಕಾಪಡೆ ಹಿರಿಯ ಅಧಿಕಾರಿಗಳೊಂದಿಗೆ ಐಎನ್ಎಸ್ ವಿಕ್ರಾಂತ್ ನೌಕೆಯನ್ನು ಪ್ರವೇಶಿಸಿದರು. ಈ ವೇಳೆ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ನೌಕಾಪಡೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು. ಇದಕ್ಕೂ ಮೊದಲು, ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಗುಲಾಮಿ ಮಾನಸಿಕ ಸ್ಥಿತಿಯನ್ನು ಕಿತ್ತೊಗೆಯುವ ಸಂಕೇತವಾಗಿ, ನೌಕಾಪಡೆಗೆ ಹೊಸ ಧ್ವಜವನ್ನು ನೀಡಲಾಗಿದೆ ಎಂದು ತಿಳಿಸಿದರು.

ತೇಲಾಡುವ ನಗರ: ಐಎನ್ಎಸ್ ವಿಕ್ರಾಂತ್ ಕುರಿತು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಸ್ವದೇಶಿ ನಿರ್ಮಿತ ಐಎನ್ಎಸ್ ವಿಕ್ರಾಂತ್ ವಿಶೇಷ ಹಾಗೂ ವಿಶಿಷ್ಟ ಹಡಗು. ಇದೊಂದು ತೇಲಾಡುವ ನಗರವಾಗಿದೆ. ಈ ಹಡಗಿನಲ್ಲಿರುವ ಜನರೇಟರ್‌ಗಳಿಂದ ಉತ್ಪಾದಿಸುವ ವಿದ್ಯುತ್ ಅನ್ನು 5000 ಮನೆಗಳಿಗೆ ನೀಡಬಹುದು, ಕೊಚ್ಚಿಯಿಂದ ಕಾಶಿಯವರೆಗೆ ತಲುಪಬಹುದಾದಷ್ಟು ಉದ್ದದ ಕೇಬಲ್‌ಗಳನ್ನು ಬಳಸಲಾಗಿದೆ. ಇಷ್ಟು ಜಟೀಲ ಎಂಜಿನಿಯರಿಂಗ್ ಕೆಲಸವನ್ನು ಪೂರೈಸಿದ ನಮ್ಮ ಎಂಜಿನಿಯರ್‌ಗಳ ಪ್ರತಿಭೆಯನ್ನು ಹೊಗಳಲೇಬೇಕು. ಭಾರತಕ್ಕೆ ಯಾವುದು ಸಾಧ್ಯವಿಲ್ಲ ಎನ್ನುತ್ತಿದ್ದೇವೋ ಅದನ್ನು ನಮ್ಮ ಎಂಜಿನಿಯರ್‌ಗಳು ಸಾಧ್ಯವಾಗಿಸಿದ್ದಾರೆ ಎಂದು ತಿಳಿಸಿದರು.

ಆಗಸ್ಟ್ 15ರಂದು ಕೆಂಪುಕೋಟೆಯಲ್ಲಿ ನಿಂತು ಮಾತನಾಡುವಾಗ ನಾನು ಪಂಚ ಪ್ರಾಣಗಳ ಬಗ್ಗೆ ಹೇಳಿದ್ದೆ. ಸಂಕಲ್ಪ, ಗುಲಾಮಿ ಮಾನಸಿಕ ತ್ಯಾಗ, ಪರಂಪರೆ ಬಗ್ಗೆ ಗೌರವ, ದೇಶದ ಐಕ್ಯತೆ ಮತ್ತು ನಾಗರಿಕ ಕರ್ತವ್ಯ. ಸ್ವದೇಶಿ ನಿರ್ಮಿತ ಐಎನ್ಎಸ್ ವಿಕ್ರಾಂತ್ ಈ ಪಂಚ ಪ್ರಾಣಗಳನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದರು.

ನೌಕಾಪಡೆಗೆ ಹೊಸ ಧ್ವಜ: ಗುಲಾಮಿ ಮಾನಸಿಕತೆಯಿಂದ ನಮ್ಮ ನಿಜವಾದ ಶಕ್ತಿಯನ್ನು ಕಳೆದುಕೊಂಡಿದ್ದೆವು. ಈಗ ಕಾಲ ಬದಲಾಗಿದೆ. ಗುಲಾಮಿತನದಿಂದ ಹೊರಗೆ ಬರುತ್ತಿದ್ದೇವೆ. ಸೆ.2 ಐತಿಹಾಸಿಕ ದಿನವಾಗಿದೆ. ಐಎನ್ಎಸ್ ವಿಕ್ರಾಂತ್ ಲೋಕಾರ್ಪಣೆಯಾಗುವುದು ಮಾತ್ರವಲ್ಲದೇ, ಮತ್ತೊಂದು ಗುಲಾಮಿ ಸಂಕೇತಕ್ಕೆ ತಿಲಾಂಜಲಿ ಇಡುತ್ತಿದ್ದೇವೆ. ಗುಲಾಮಿ ಸಂಕೇತವಾಗಿದ್ದ ಈಗಿರುವ ನೌಕಾಪಡೆಯ ಧ್ವಜದ ಬದಲಿಗೆ ಹೊಸ ಧ್ವಜವನ್ನು ನೌಕಾಪಡೆ ಇಂದಿನಿಂದ ಅಳವಡಿಸಿಕೊಳ್ಳುತ್ತಿದೆ. ಈ ಹೊಸ ಧ್ವಜವನ್ನು ಛತ್ರಪತಿ ಶಿವಾಜಿ ಮಹಾರಾಜರಿಗೆ ಅರ್ಪಿಸುತ್ತೇನೆ. ಈ ಧ್ವಜವು ನೌಕಾಪಡೆಯ ಆತ್ಮಸಮ್ಮಾನ ಮತ್ತು ಆತ್ಮಬಲವನ್ನು ಹೆಚ್ಚಿಸಲಿದೆ ಎಂದು ಹೇಳಿದರು.

300x250 AD

ಎಲ್ಲ ವಿಭಾಗಗಳಲ್ಲಿ ಮಹಿಳೆಯರು: ಐಎನ್ಎನ್ ವಿಕ್ರಾಂತದಲ್ಲಿ 600 ಮಹಿಳಾ ಸೈನಿಕರು ಕಾರ್ಯನಿರ್ವಹಿಸಲಿದ್ದಾರೆ. ಭಾರತವು ಸೇನೆಯನ್ನು ಆಧುನಿಕಗೊಳಿಸುತ್ತಿದೆ. ಅದರ ಪರಿಣಾಮವಾಗಿ ನೌಕಾ ಪಡೆ ಮಾತ್ರವಲ್ಲದೇ ಮೂರು ಪಡೆಗಳ ಎಲ್ಲ ವಿಭಾಗಗಳಲ್ಲಿ ಮಹಿಳೆಯರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಅವರಿಗೆ ಹೊಸ ಜವಾಬ್ದಾರಿಗಳನ್ನು ನೀಡಲಾಗುತ್ತಿದೆ. ಯುದ್ಧಭೂಮಿಯಲ್ಲಿ ಮಹಿಳೆಯರ ಸೇವೆಯನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ಇದೇ ವೇಳೆ ತಿಳಿಸಿದರು.

ಸಮುದ್ರದಲ್ಲಿ ವಿಕ್ರಾಂತ್, ಆಕಾಸದಲ್ಲಿ ತೇಜಸ್: ಭಾರತವು ಈಗ ಆತ್ಮನಿರ್ಭರವಾಗುತ್ತಿದೆ. ಜಗತ್ತಿನಲ್ಲಿ ಕೆಲವೇ ರಾಷ್ಟ್ರಗಳು ಯುದ್ಧವಿಮಾನಗಳನ್ನು ಹೊತ್ತೊಯ್ಯುವ ಹಡಗುಗಳನ್ನು ಸ್ವಂತವಾಗಿ ನಿರ್ಮಾಣ ಮಾಡುತ್ತಿವೆ. ಈಗ ಐಎನ್ಎಸ್ ವಿಕ್ರಾಂತ್ ಮೂಲಕ ಭಾರತವು ಆ ರಾಷ್ಟ್ರಗಳ ಸಾಲಿಗೆ ಸೇರಿದೆ. ಸಮುದ್ರದಲ್ಲಿ ಐಎನ್ಎಸ್ ವಿಕ್ರಾಂತ್ ಹೇಗೆ ನಮ್ಮ ಹೆಮ್ಮೆಯಾಗಿದೆಯೋ, ಆಕಾಶದಲ್ಲಿ ತೇಜಸ್ ಯುದ್ಧವಿಮಾನ ನಮ್ಮ ಹೆಮ್ಮೆ ಎಂದು ಪ್ರಧಾನಿ ಹೇಳಿದರು.

ಸ್ವದೇಶಿ ಕಂಪನಿಗಳಿಂದಲೇ ಉಪಕರಣ: ಭಾರತೀಯ ಸೇನೆಯು ತನಗೆ ಅಗತ್ಯವಿರುವ ಉಪಕರಣಗಳ ಉದ್ದದ ಪಟ್ಟಿಯನ್ನು ನೀಡಿದೆ. ಆತ್ಮ ನಿರ್ಭರದ ಅಂಗವಾಗಿ ಈ ಎಲ್ಲ ಉಪಕರಣಗಳನ್ನು ಭಾರತೀಯ ಕಂಪನಿಗಳಿಂದಲೇ ಖರೀದಿಸಲಾಗುವುದು. ಸೇನೆಗೆ ಬಜೆಟ್ ಹೆಚ್ಚಿಸಲಾಗುವುದು. ಸೇನಾ ಬಜೆಟ್‌ನ ಶೇ.25ರಷ್ಟು ಹಣವನ್ನು ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ವೆಚ್ಚ ಮಾಡಲಾಗುವುದು. ಉತ್ತರ ಪ್ರದೇಶ ಮತ್ತು ತಮಿಳುನಾಡುಗಳಲ್ಲಿ ಎರಡು ಡಿಫೆನ್ಸ್ ಕಾರಿಡಾರ್ ನಿರ್ಮಾಣ ಮಾಡಲಾಗುತ್ತಿದೆ ಎಂದು ಪ್ರಧಾನಿ ತಿಳಿಸಿದರು.

Share This
300x250 AD
300x250 AD
300x250 AD
Back to top