ಕಾರವಾರ: ಕರ್ನಾಟಕ ಅಥ್ಲೆಟಿಕ್ ಅಸೋಶಿಯೇಶನ್ ಆಶ್ರಯದಲ್ಲಿ ಬೆಂಗಳೂರಿನ ಶ್ರೀಕಂಠೀರವ ಸ್ಟೇಡಿಯಂ ನಡೆದ ಕರ್ನಾಟಕ ರಾಜ್ಯ ಕಿರಿಯರ ಹಾಗೂ ಹಿರಿಯರ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಕಾರವಾರದ ಚಿನ್ನದ ಹುಡುಗಿ ನಿವೇದಿತಾ ಪ್ರಶಾಂತ ಸಾವಂತ ಒಂದು ಚಿನ್ನ, ಒಂದು ಬೆಳ್ಳಿ ಪದಕ ಪಡೆಯುವ ಮೂಲಕ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ರಾಜ್ಯಮಟ್ಟದ ಮುಕ್ತ ಅಥ್ಲೆಟಿಕ್ ಚಾಂಪಿಯನ್ಶಿಪ್ನಲ್ಲಿ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ವತಿಯಿಂದ ಸ್ಪರ್ಧಿಸಿದ್ದ ಕಾರವಾರದ ನಿವೇದಿತಾ, ಮಹಿಳೆಯರ ವಿಭಾಗದ ಡಿಸ್ಕಸ್ ಎಸೆತದಲ್ಲಿ 39.92 ಮೀ. ಡಿಸ್ಕಸ್ ಎಸೆಯುವ ಮೂಲಕ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಹಾಗೂ ಮಹಿಳೆಯರ ವಿಭಾಗದ ಹ್ಯಾಮರ್ ಥ್ರೋ ವಿಭಾಗದಲ್ಲಿ 43.59 ಮೀ. ಹ್ಯಾಮರ್ ಎಸೆಯುವ ಮೂಲಕ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿಯ ಪದಕವನ್ನು ತನ್ನದಾಗಿಸಿಕೊಂಡು, ರಾಷ್ಟ್ರ ಮಟ್ಟದ ಮುಕ್ತ ಅಥ್ಲೆಟಿಕ್ಸ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಕಾರವಾರದ ನಿವೇದಿತಾ ಸಾವಂತ ಈವರೆಗೆ ಡಿಸ್ಕಸ್ ಹಾಗೂ ಶಾಟ್ಪುಟ್ ಎಸೆತದ ವಿವಿಧ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ಸ್ಪರ್ಧಿಸಿ 9 ಚಿನ್ನ, 7 ಬೆಳ್ಳಿ ಹಾಗೂ 4 ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡಿದ್ದು, ರಾಜ್ಯ ಮಟ್ಟದ ಡಿಸ್ಕಸ್ ಎಸೆತದ ದಾಖಲೆ ನಿವೇದಿತಾ ಸಾವಂತ ಅವರ ಹೆಸರಿನಲ್ಲಿದೆ. ಕಾರವಾರದ ಅಥ್ಲೆಟಿಕ್ಸ್ ತರಬೇತುದಾರ ಪ್ರಕಾಶ ರೇವಣಕರ ಬಳಿ ತರಬೇತಿ ಪಡೆಯುತ್ತಿರುವ ನಿವೇದಿತಾ, ಕ್ರೀಡಾ ಕೋಟಾದಡಿಯಲ್ಲಿ ತುಮಕೂರಿನ ಸಿದ್ದಗಂಗಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದು ಪ್ರಸ್ತುತ ಟಿಸಿಎಸ್ನಲ್ಲಿ ಉದ್ಯೋಗ ಮಾಡುತ್ತಿದ್ದಾರೆ.
ನಿವೇದಿತಾಳ ಈ ಕ್ರೀಡಾ ಸಾಧನೆಗೆ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ನ ಅಧ್ಯಕ್ಷ ಸದಾನಂದ ನಾಯ್ಕ, ಕಾರ್ಯದರ್ಶಿ ಕೆ.ಆರ್.ನಾಯಕ ಹಾಗೂ ಜಿಲ್ಲೆಯ ಕ್ರೀಡಾಭಿಮಾನಿಗಳು ಅಭಿನಂದಿಸಿದ್ದಾರೆ.