ಕಾರವಾರ: ಎನ್‌ಪಿಸಿಐಎಲ್ ಕೈಗಾ ಹಾಗೂ ಉಪಪ್ರಾದೇಶಿಕ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮಾಚರಣೆಯ ಪ್ರಯುಕ್ತ ಕಾರವಾರ ತಾಲೂಕಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆ.22ರಿಂದ 25ರವರೆಗೆ ಪ್ರಬಂಧ ಸ್ಪರ್ಧೆ, ಚಿತ್ರಕಲೆ ಸ್ಪರ್ಧೆ, ರಸಪ್ರಶ್ನೆ ಮತ್ತು ಪ್ರಾಢಶಾಲಾ ಹಾಗೂ ಪದವಿಪೂರ್ವ ವಿದ್ಯಾರ್ಥಿಗಳಿಗೆ ಕೈಗಾ ಅಣುವಿದ್ಯುತ್ ಸ್ಥಾವರಕ್ಕೆ ಭೇಟಿ ನೀಡುವ ಕಾರ್ಯಕ್ರಮ ನಡೆಯಿತು.
ಆ.22ರಂದು ಬಾಡ ಶ್ರೀಮತಿ ರಮಾಬಾಯಿ ಹನುಮಂತ ಬೆಣ್ಣೆ ಶಾಲೆ, ಬಾಲಮಂದಿರ ಪ್ರೌಢಶಾಲೆ, ಶಿರವಾಡ ಕೆಪಿಎಸ್ ಮತ್ತು ಉಪಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಪ್ರಬಂಧ ಮತ್ತು ಚಿತ್ರಕಲಾ ಸ್ಪರ್ಧೆಯನ್ನು ನಡೆಸಲಾಯಿತು. ಪ್ರಬಂಧ ಸ್ಪರ್ಧೆಯಲ್ಲಿ ಸೇಂಟ್ ಮೈಕೆಲ್ಸ್ ಕಾನ್ವೆಂಟ್ ಪ್ರೌಢಶಾಲೆಯ ಜಾನಕಿ ಡಿ.ಪಟಗಾರ ಪ್ರಥಮ ಸ್ಥಾನ, ಚಿತ್ತಾಕುಲ ಶಿವಾಜಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಪ್ರಾಚಿ ಎ.ಮೆಹತಾ ದ್ವಿತೀಯ ಮತ್ತು ಬಿಣಗಾ ಬಾಲಭವನ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಬಾಲಕೃಷ್ಣ ಆರ್.ಬಿಣಗೆ ತೃತೀಯ ಸ್ಥಾನ ಪಡೆದಿದ್ದಾರೆ. ಚಿತ್ರಕಲಾ ಸ್ಪರ್ಧೆಯಲ್ಲಿ ಸೇಂಟ್ ಮೈಕೆಲ್ಸ್ ಕಾನ್ವೆಂಟ್ ಪ್ರೌಢಶಾಲೆಯ ಸರ್ವಧಿ ಆರ್.ರೇವಣಕರ ಪ್ರಥಮ ಸ್ಥಾನ, ಬಾಡ ನ್ಯೂ ಹೈಸ್ಕೂಲ್‌ನ ಸ್ನೇಹಾ ಪಿ.ಪಾಟೀಲ ದ್ವಿತೀಯ ಸ್ಥಾನ ಮತ್ತು ಸದಾಶಿವಗಡ ಪ್ರೌಢಶಾಲೆಯ ರಜತ್ ಡಿ.ಗೋಸಾವಿ ತೃತೀಯ ಸ್ಥಾನ ಪಡೆದಿದ್ದಾರೆ.
ಆ.23ರಂದು ಬಾಲಮಂದಿರ ಪ್ರೌಢಶಾಲೆಯಲ್ಲಿ ಕೈಗಾ ಎನ್‌ಪಿಸಿಐಎಲ್‌ನ ವೈಜ್ಞಾನಿಕ ಅಧಿಕಾರಿ ಎನ್.ಶ್ರೀನಿವಾಸು, ಯೋಜನಾ ವಿಜ್ಞಾನಿ ಕೆ.ಎಸ್.ಲಕ್ಷ್ಮಿಕಾಂತ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿ, ಕೈಗಾ ಅಣುವಿದ್ಯುತ್ ಸ್ಥಾವರದ ಬಗ್ಗೆ ಅರಿವು ಮೂಡಿಸಿದರು. ನಂತರ ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಿದರು. ರಸಪ್ರಶ್ನೆ ಸ್ಪರ್ಧೆಯಲ್ಲಿ ಆಂಗ್ಲ ಮಾಧ್ಯಮದಲ್ಲಿ ಬಾಲಮಂದಿರ ಪ್ರೌಢಶಾಲೆಯ ತೇಜಸ್ವಿ ತಾಂಡೇಲ ಮತ್ತು ಶಿವಾನಿ ರಾಯ್ಕರ್ ಪ್ರಥಮ, ಅಮೃತ ವಿದ್ಯಾಲಯಮ್‌ನ ಮಧುಕರ ವಿ.ಶೆಣೈ ಮತ್ತು ಅಪೇಕ್ಷಾ ರಾಥೊರ್ ದ್ವಿತೀಯ, ಸೇಂಟ್ ಮೈಕೆಲ್ಸ್ ಕಾನ್ವೆಂಟ್ ಪ್ರೌಢಶಾಲೆಯ ಅಪೇಕ್ಷಾ ಗಾವಂಕರ ಮತ್ತು ಅನಿಕಾ ಚಿಂಚನಕರ್ ತೃತೀಯ ಸ್ಥಾನ ಮತ್ತು ಶಿರವಾಡ ಡಾ.ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಸತಿಶಾಲೆಯ ಸಹನಾ ಪೂಜಾರ ಮತ್ತು ರಕ್ಷಿತಾ ನಾಯ್ಕ ಸಮಾಧಾನಕರ ಸ್ಥಾನ ಪಡೆದಿದುಕೊಂಡಿದ್ದಾರೆ.
ಕನ್ನಡ ಮಾಧ್ಯಮದಲ್ಲಿ ಬಾಡ ಶಿವಾಜಿ ಬಾಲಕಿಯರ ಪ್ರೌಢಶಾಲೆಯ ಸ್ವಾತಿ ಎಸ್.ನಾಯ್ಕ ಮತ್ತು ರಾಧಾ ನಾಯ್ಕ ಪ್ರಥಮ, ಸುಮತಿ ದಾಮ್ಲೆ ಬಾಲಕಿಯರ ಪ್ರೌಢಶಾಲೆಯ ನುಜ್‌ತ್ ಎಸ್.ಕೆ. ಮತ್ತು ಸ್ವಾತಿ ಎಮ್.ಸೈಲ್ ದ್ವಿತೀಯ ಮತ್ತು ಸರಸ್ವತಿ ವಿದ್ಯಾಲಯದ ಕೀರ್ತಿ ಕುನ್ನೆರ್ ಮತ್ತು ಅಪೇಕ್ಷಾ ಸೋನ್ನದ ತೃತೀಯ ಸ್ಥಾನ ಪಡೆದಿದ್ದಾರೆ. ಚಿತ್ರಕಲಾ, ಪ್ರಬಂಧ ಮತ್ತು ರಸಪ್ರಶ್ನೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಟಿ-ಶರ್ಟ್ ಮತ್ತು ಕ್ಯಾಪ್ ವಿತರಿಸಲಾಯಿತು.
ಆ.24ರಂದು ತಾಲೂಕಿನ ಪದವಿಪೂರ್ವ ವಿದ್ಯಾರ್ಥಿಗಳು ಹಾಗೂ 25ರಂದು ಪ್ರೌಢಶಾಲಾ ವಿದ್ಯಾರ್ಥಿಗಳು ಕೈಗಾ ಅಣುವಿದ್ಯುತ್ ಸ್ಥಾವರಕ್ಕೆ ಭೇಟಿ ನೀಡಿದರು. ವಿದ್ಯಾರ್ಥಿಗಳಿಗೆ ಎನ್‌ಪಿಸಿಐಎಲ್ ನ್ಯೂಕ್ಲಿಯರ್ ಟ್ರೇನಿಂಗ್ ಸೆಂಟರ್ ಹೇಗೆ ಕಾರ್ಯ ನಿರ್ವಹಿಸುತ್ತದೆ, ವಿದ್ಯುತ್ ಶಕ್ತಿಯನ್ನು ಹೇಗೆ ತಯಾರಿಸಲಾಗುತ್ತದೆ, ಇದರಿಂದ ಬಿಡುಗಡೆಯಾಗುವ ವಿಕಿರಣದಿಂದ ಯಾವುದೇ ಹಾನಿ ಉಂಟಾಗುವುದಿಲ್ಲ, ಜನಸಾಮಾನ್ಯರಲ್ಲಿ ಇರುವ ತಪ್ಪು ನಂಬಿಕೆಯನ್ನು ಹೋಗಲಾಡಿಸಬಹುದು ಎಂದು ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಕಾರವಾರ ತಾಲೂಕಿನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸೇರಿ 1,200 ಜನರು ಭಾಗವಹಿಸಿದ್ದರು. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ, ಟಿ-ಶರ್ಟ್ ಮತ್ತು ಕ್ಯಾಪ್ ವಿತರಿಸಲಾಯಿತು.