ಸಿದ್ದಾಪುರ: ಬಿಳೆಗೋಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನೇತೃತ್ವದಲ್ಲಿ ತಾಲ್ಲೂಕಿನ ದೊಡ್ಮನೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಎಂಜಿವಿವಿ ಪ್ರೌಢಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದೊಡ್ಮನೆ ಗ್ರಾ.ಪಂ ಅಧ್ಯಕ್ಷ ಸುಬ್ರಾಯ್ ಭಟ್ ಗಡಿಹಿತ್ಲು, ಮಕ್ಕಳಲ್ಲಿನ ಪ್ರತಿಭೆ ಹೊರತರುವ ನಿಟ್ಟಿನಲ್ಲಿ ಪ್ರತಿಭಾ ಕಾರಂಜಿ ಮಹತ್ವದ್ದಾಗಿದೆ. ಇದರಿಂದ ಮಕ್ಕಳ ಆತ್ಮಬಲ ಹೆಚ್ಚುವುದರ ಜೊತೆಗೆ ಮಕ್ಕಳನ್ನು ಇನ್ನಷ್ಟು ಕೌಶಲ್ಯಭರಿತರನ್ನಾಗಿ ಮಾಡಬಹುದು. ಆದ ಕಾರಣ ಸೋಲು ಗೆಲುವಿನ ಬಗ್ಗೆ ಯೋಚನೆ ಮಾಡದೇ ಪ್ರತಿಯೊಬ್ಬ ಪಾಲಕರು ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಕ್ಕಳನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉತ್ತಮ ಸಾಧನೆ ಮಾಡಿದ ಇಬ್ಬರು ನಿವೃತ್ತ ಶಿಕ್ಷಕರು ಸೇರಿ ಒಟ್ಟು 6 ಮಂದಿ ಶಿಕ್ಷಕರನ್ನು, ಅಂತರಾಷ್ಟ್ರೀಯ ಚೆಸ್ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾದ ಭರತ್ ಹೆಗಡೆ ಹಾಗೂ ಬಿಳೆಗೋಡ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ವಸಂತ ಗಂಗಾಧರ ಹೆಗಡೆ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು.
ಪ್ರತಿಭಾ ಕಾರಂಜಿ ವೇಳೆ ಕ್ಲೇ ಮಾಡ್ಲಿಂಗ್, ಆಶುಭಾಷಣ, ಛದ್ಮವೇಶ, ಕನ್ನಡ ಕಂಠಪಾಠ, ಇಂಗ್ಲೀಷ್ ಕಂಠಪಾಟ, ಲಗು ಸಂಗೀತ, ಚಿತ್ರಕಲೆ, ಕಥೆ ಹೇಳುವುದು, ಅಭಿನಯ ಗೀತೆ ಹೀಗೆ ಹಲವು ಸ್ಪರ್ಧೆಗಳು ಹಿರಿಯರ ಹಾಗೂ ಕಿರಿಯ ವಿಭಾಗದಲ್ಲಿ ನಡೆಯಿತು.
ತಾಲೂಕ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ್ ಹೆಗಡೆ, ತಾಲ್ಲೂಕಾ ಅಕ್ಷರ ದಾಸೋಹ ನಿರ್ದೇಶಕ ಭೀಮೇಶ ನಾಯ್ಕ, ಗ್ರಾ.ಪಂ ಸದಸ್ಯ ಬೀರಾ ಗೌಡ ಇನ್ನಿತರರು ಇದ್ದರು.