ದಾಂಡೇಲಿ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕರ‍್ಯಾಲಯ ಹಳಿಯಾಳ, ದಾಂಡೇಲಿ ವಲಯ ಮಟ್ಟದ ಪ್ರಾಥಮಿಕ ಶಾಲೆಗಳ ಮಕ್ಕಳ ಕ್ರೀಡಾ ಕೂಟ ಸಮಿತಿ ಹಾಗೂ ರೋಟರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಸಂಯುಕ್ತಾಶ್ರಯದಲ್ಲಿ 2022-23ನೇ ಸಾಲಿನ ದಾಂಡೇಲಿ ವಲಯ ಮಟ್ಟದ ಪ್ರಾಥಮಿಕ ಶಾಲೆಗಳ 14 ವರ್ಷದ ಒಳಗಿನ ಮಕ್ಕಳ ಕ್ರೀಡಾ ಕೂಟಕ್ಕೆ ನಗರದ ಡಿಎಫ್‌ಎ ಮೈದಾನದಲ್ಲಿ ಮಂಗಳವಾರ ಚಾಲನೆ ನೀಡಲಾಯಿತು.
ಕ್ರೀಡಾಕೂಟವನ್ನು ನಗರಸಭೆಯ ಅಧ್ಯಕ್ಷೆ ಸರಸ್ವತಿ ರಜಪೂತ್ ಅವರು ಉದ್ಘಾಟಿಸಿ ಮಾತನಾಡುತ್ತಾ, ಮಕ್ಕಳಲ್ಲಿರುವ ಕ್ರೀಡಾ ಪ್ರತಿಭೆಗಳ ಅನಾವರಣಕ್ಕೆ ಇಂತಹ ಪಂದ್ಯಾವಳಿಗಳು ಸಹಕಾರಿ. ವಿದ್ಯಾರ್ಥಿಗಳು ಈ ಪಂದ್ಯಾವಳಿಯಲ್ಲಿ ಸಕ್ರೀಯವಾಗಿ ಭಾಗವಹಿಸಿ, ಅತ್ಯುತ್ತಮ ಕ್ರೀಡಾಪಟುಗಳಾಗಿ ರೂಪುಗೊಳ್ಳಬೇಕೆಂದು ಕರೆ ನೀಡಿದರು.
ನಗರಸಭೆಯ ಉಪಾಧ್ಯಕ್ಷ ಸಂಜಯ್ ನಂದ್ಯಾಳ್ಕರ್ ಅವರು ಸೋಲು ಮತ್ತು ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಮುನ್ನಡೆದಾಗ ಭವಿಷ್ಯದಲ್ಲಿ ಉನ್ನತಿಯನ್ನು ಕಾಣಲು ಸಾಧ್ಯವಿದೆ. ಇಂದು ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಪ್ರೋತ್ಸಾಹವನ್ನು ನೀಡಲಾಗುತ್ತಿದ್ದು, ದಾಂಡೇಲಿಯ ಮಕ್ಕಳು ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಸಾಧನೆಯನ್ನು ಮಾಡುವಂತಾಗಲೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ರೋಟರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಶ್ವನಾಥ ಶೆಟ್ಟಿ, ಮಕ್ಕಳ ವ್ಯಕ್ತಿತ್ವ, ಮಾನಸಿಕ, ದೈಹಿಕ ವಿಕಸನಕ್ಕೆ ಕ್ರೀಡೆ ಪರಿಣಾಮಕಾರಿ. ಆರೋಗ್ಯ ಸಂವರ್ಧನೆಗೆ ಕ್ರೀಡೆ ಅತ್ಯವಶ್ಯ. ಮಕ್ಕಳು ಕಲಿಕೆಯ ಜೊತೆ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಿ ಕ್ರೀಡಾಕ್ಷೇತ್ರದಲ್ಲಿ ಸಾಧನೆಯ ಸಾಧಕರಾಗಬೇಕೆಂದು ಕರೆ ನೀಡಿ, ಪಂದ್ಯಾವಳಿಗೆ ಶುಭ ಕೋರಿದರು.
ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಮೌಲಾಲಿ ಮುಲ್ಲಾ, ಸದಸ್ಯರಾದ ಮಹಾದೇವ ಜಮಾದಾರ, ಶಿಕ್ಷಣ ಇಲಾಖೆಯ ತಾಲೂಕು ದೈಹಿಕ ಪರಿವೀಕ್ಷಕ ವಿವೇಕ್ ಕೌರಿ ಭಾಗವಹಿಸಿ ಪಂದ್ಯಾವಳಿಗೆ ಶುಭ ಕೋರಿದರು. ವೇದಿಕೆಯಲ್ಲಿ ಸಿಆರ್‌ಪಿಗಳಾದ ಲಲಿತಾ ಗೌಡ, ಶ್ರೀದೇವಿ, ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಸುರೇಶ ನಾಯಕ, ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಮಮತಾ ಕಾಮತ್, ವಿಜಲಯಕ್ಷ್ಮಿ ಮುರುಗೇಶ ಮೊದಲಾದವರು ಉಪಸ್ಥಿತರಿದ್ದರು.
ರೋಟರಿ ಶಾಲೆಯ ಮುಖ್ಯೋಪಾಧ್ಯಯರಾದ ಮೋಹನ ಪತ್ತಾರ ಸ್ವಾಗತಿಸಿದ ಕಾರ್ಯಕ್ರಮಕ್ಕೆ ಶಿಕ್ಷಕ ದಾಸರ ವಂದಿಸಿದರು. ಶಿಕ್ಷಕಿ ಮೇನಕಾ ಮಡಿವಾಳ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದಲ್ಲಿ ದಾಂಡೇಲಿ ವಲಯ ಮಟ್ಟದ ಪ್ರಾಥಮಿಕ ಶಾಲೆಗಳ ಶಿಕ್ಷಕರು, ದೈಹಿಕ ಶಿಕ್ಷಕರು, ವಿವಿಧ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.