ಕುಮಟಾ: ದಿ.ಹನುಮಂತ ಬೆಣ್ಣೆಯವರ 103ನೇ ಹುಟ್ಟು ಹಬ್ಬದ ನಿಮಿತ್ತ ಬೆಣ್ಣೆ ಕುಟುಂಬವು ಪಟ್ಟಣದ ಹನುಮಂತ ಬೆಣ್ಣೆ ಸರ್ಕಾರಿ ಪದವಿಪೂರ್ವ ಕಾಲೇಜ್‌ನ 1838 ವಿದ್ಯಾರ್ಥಿಗಳಿಗೆ ಸಿಹಿ ಮತ್ತು ಜ್ಯೂಸ್ ವಿತರಿಸುವ ಮೂಲಕ ಶೈಕ್ಷಣಿಕ ಪ್ರೇಮ ಮೆರೆದರು.
ಪಟ್ಟಣದ ಹನುಮಂತ ಬೆಣ್ಣೆ ಸರ್ಕಾರಿ ಪದವಿಪೂರ್ವ ಕಾಲೇಜ್‌ನಲ್ಲಿ ಹಮ್ಮಿಕೊಂಡ ಸರಳ ಕಾರ್ಯಕ್ರಮದಲ್ಲಿ ದಿ. ಹನುಮಂತ ಬೆಣ್ಣೆಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಕಾಲೇಜ್ ಪ್ರಾಂಶುಪಾಲ ಸತೀಶ ಬಿ ನಾಯ್ಕ ಅವರು ಕಾಲೇಜ್‌ಗೆ ಬೆಣ್ಣೆ ಕುಟುಂಬದ ಕೊಡುಗೆಯ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾಲೇಜ್‌ಗೆ ಅಗತ್ಯವಾದ ಕುಡಿಯುವ ನೀರು, ಡೆಸ್ಕ್, ಬೇಂಚ್ ಸೇರಿದಂತೆ ವಿದ್ಯಾರ್ಥಿಗಳಿಗೆ ಅಗತ್ಯವಾದ ಕಲಿಕಾ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡುವ ಮೂಲಕ ಶೈಕ್ಷಣಿಕ ಪ್ರೇಮ ಮೆರೆದಿದ್ದಾರೆ ಎಂದರು.
ಕಾಲೇಜ್ ಉಪನ್ಯಾಸಕ ಆನಂದು ನಾಯ್ಕ ಮಾತನಾಡಿ, ದಿ. ಹನುಮಂತ ಬೆಣ್ಣೆ ಅವರ ಹೆಸರನ್ನು ಈ ಕಾಲೇಜ್‌ಗೆ ಇಡಲಾಗಿದೆ. ಈ ಕಾಲೇಜಕ್ಕೆ ಅಗತ್ಯವಾದ ಜಾಗವನ್ನು ನಮ್ಮ ಕಾಲೇಜ್ ಹೆಸರಿಗೆ ಮಾಡಿಸಿಕೊಳ್ಳಲು ಅರಣ್ಯ ಇಲಾಖೆಗೆ 12 ಲಕ್ಷ ರೂ. ಮತ್ತು ಜಾಗದ ನೋಂದಣಿ ಶುಲ್ಕ 1 ಲಕ್ಷ ಒಟ್ಟು 13 ಲಕ್ಷ ರೂ. ಸರ್ಕಾರಕ್ಕೆ ಭರಣ ಮಾಡುವ ಮೂಲಕ ಈ ಜಾಗವನ್ನು ನಮ್ಮ ಕಾಲೇಜ್ ಹೆಸರಿಗೆ ಬೆಣ್ಣೆ ಕುಟುಂಬ ಮಾಡಿಕೊಟ್ಟಿದೆ. ಹಾಗಾಗಿ ಈ ಕಾಲೇಜ್‌ಗೆ ಹನುಮಂತ ಬೆಣ್ಣೆ ಸರ್ಕಾರಿ ಪಿಯು ಕಾಲೇಜ್ ಎಂದು ನಾಮಕರಣ ಮಾಡಲಾಗಿದೆ. ಅಲ್ಲಿಂದ ಇಲ್ಲಿಯವರೆಗೆ ಬೆಣ್ಣೆ ಕುಟುಂಬ ಈ ಕಾಲೇಜ್‌ನ ಅಭಿವೃದ್ಧಿಗೆ ಸಾಕಷ್ಟು ಕೊಡುಗೆಯನ್ನು ನೀಡಿದೆ. ಆ ಕುಟುಂಬದ ಶೈಕ್ಷಣಿಕ ಸೇವೆಗೆ ನಾವು ಕೃತಜ್ಞರಾಗಿದ್ದೇವೆ ಎಂದರು.
ಬಳಿಕ ಕಾಲೇಜಿನ 1838 ವಿದ್ಯಾರ್ಥಿಗಳಿಗೆ ಜ್ಯೂಸ್ ಮತ್ತು ಸಿಹಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಬೆಣ್ಣೆ ಕುಟುಂಬದ ವಿನಾಯಕ ಹನುಮಂತ ಬೆಣ್ಣೆ, ಪ್ರಸನ್ನ ವಾಸುದೇವ ಬೆಣ್ಣೆ, ಪ್ರಜ್ಞಾ ವಿನಾಯಕ ಬೆಣ್ಣೆ ಉಪಸ್ಥಿತರಿದ್ದರು.