ಮೈಸೂರು: ಬಿಜೆಪಿ ಇಂದು ಮೈಸೂರಿನಲ್ಲಿ ಸಾವರ್ಕರ್ ರಥಯಾತ್ರೆಯನ್ನು ಆರಂಭಿಸಿದೆ. ರಥಯಾತ್ರೆಗೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಚಾಲನೆ ನೀಡಿದ್ದಾರೆ.
ಸಾವರ್ಕರ್ ಪ್ರತಿಷ್ಠಾನ ವತಿಯಿಂದ ಈ ರಥೋತ್ಸವ ಆಯೋಜನೆ ಮಾಡಲಾಗಿದೆ. ರಥಯಾತ್ರೆಯ ಇಡೀ ವಾಹನವನ್ನು ಕೇಸರಿ ಬಣ್ಣದ ಹೂವುಗಳಿಂದ ಅಲಂಕಾರ ಮಾಡಲಾಗಿದೆ. ವಾಹನದ ಎಲ್ಇಡಿಯಲ್ಲಿ ವೀರ್ ಸಾವರ್ಕರ್ ಬಗ್ಗೆ ಮಾಹಿತಿ, ಸಾವರ್ಕರ್ ಜೀವನ ಯಾನದ ಬಗ್ಗೆ ಮಾಹಿತಿ ನೀಡಲಾಗಿದೆ.
ರಥಯಾತ್ರೆ ಉದ್ಘಾಟಿಸಿ ಮಾತನಾಡಿದ ಯಡಿಯೂರಪ್ಪ, “ಎಂಟು ದಿನಗಳ ಈ ಯಾತ್ರೆ ರಾಜ್ಯದ ಮೂಲೆ ಮೂಲೆಗೆ ತಲುಪಲಿದೆ, ವೀರ್ ಸಾವರ್ಕರ್ ಅವರ ಜೀವನ ಮೌಲ್ಯ, ದೇಶ ಪ್ರೇಮದ ಸಂದೇಶವನ್ನು ಸಾರಲಿದೆ. ನಮ್ಮ ದೇಶ ಇಂದು ವಿಶ್ವಗುರು ಆಗುವತ್ತ ದಾಪುಗಾಲು ಇಡುತ್ತಿದೆ. ಇನ್ನೊಂದೆಡೆ ಅನೇಕ ಸವಾಲುಗಳು ನಮ್ಮ ಮುಂದಿದೆ. ದೇಶದ ಮೌಲ್ಯಗಳಿಗೆ ಮಸಿ ಬಳಿಯುವ ಕೆಲಸ ಕೆಲವರಿಂದ ನಡೆಯುತ್ತಿದೆ. ಇವುಗಳಲ್ಲಿ ಸಾವರ್ಕರ್ ವಿರುದ್ಧ ನಡೆಯುತ್ತಿರುವ ಅಪಪ್ರಚಾರ ಕೂಡ ಒಂದು’ ಎಂದು ಹೇಳಿದ್ದಾರೆ.
“ಇವನಾರವ ಎನ್ನದೇ ಸಾವರ್ಕರ್ ನಮ್ಮವ ಎಂದು ಎಲ್ಲರೂ ಹೇಳಬೇಕು. ಸ್ವಾತಂತ್ರ್ಯ ಹೋರಾಟದೊಂದಿಗೆ ಹಿಂದೂ ಧರ್ಮದ ಸುಧಾರಣೆ, ರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದ ಅವರನ್ನು ಇಂದು ನೆನಪು ಮಾಡಿಕೊಳ್ಳಬೇಕಿದೆ. ಇಂದಿರಾ ಗಾಂಧಿ, ಸರ್ವಪಳ್ಳಿ ರಾಧಾಕೃಷ್ಣನ್ ಸೇರಿದಂತೆ ಮಹಾನಾಯಕರೇ ಸಾವರ್ಕರ್ ಅವರನ್ನು ಹೊಗಳಿದ್ದಾರೆ, ವೀರ ಎಂದು ಕರೆದಿದ್ದಾರೆ. ಸಾವರ್ಕರ್ ವಿಚಾರ ಮಾರ್ಗದರ್ಶನ ಭಾರತೀಯರಿಗೆ ದಾರಿ ದೀಪ, ಇಂದಿನ ಯುವಕರಿಗೆ ಅದರ ಅರಿವಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡು ಕೆಲವರು ದಾರಿ ತಪ್ಪಿಸುವ ಕೆಲ ಮಾವ ಮಾಡುತ್ತಿದ್ದಾರೆ” ಎಂದಿದ್ದಾರೆ