ಕುಮಟಾ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಮಿತ್ತ ತಾಲೂಕಿನ ಮೂರೂರು ಗ್ರಾಮ ಪಂಚಾಯತ್ ಅಧ್ಯಕ್ಷ ರಾಘವೇಂದ್ರ ನಾಯ್ಕ ಅವರು 500ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ನೋಟ್ಬುಕ್ ವಿತರಿಸುವ ಮೂಲಕ ಶೈಕ್ಷಣಿಕ ಪ್ರೇಮ ಮೆರೆದರು.
75ನೇ ಸ್ವಾತಂತ್ರ್ಯೋತ್ಸವದ ನಿಮಿತ್ತ ಮೂರೂರು ಗ್ರಾಮ ಪಂಚಾಯತ್ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿದ ಅಧ್ಯಕ್ಷ ರಾಘವೇಂದ್ರ ನಾಯ್ಕ ಅವರು ತಮ್ಮ ಗ್ರಾ.ಪಂ ವ್ಯಾಪ್ತಿಯ ಅಳವಳ್ಳಿ, ಮೂರುರು, ಹಟ್ಟಿಕೇರಿ, ಕರ್ಕಿಮಕ್ಕಿ, ಮುಸಗುಪ್ಪ, ಹೊಸಾಡನ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ತೆರಳಿ, ಅಲ್ಲಿನ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ಬುಕ್ ವಿತರಿಸಿದರು.
ಬಡ ಮತ್ತು ಹಿಂದುಳಿದ ವರ್ಗದವರು ಹೆಚ್ಚಾಗಿ ಓದುವ ಸರ್ಕಾರಿ ಶಾಲೆಯ ಮಕ್ಕಳಲ್ಲಿ ಶೈಕ್ಷಣಿಕ ಪ್ರೇಮ ವೃದ್ಧಿಸುವ ಸದುದ್ದೇಶದಿಂದ ಈ ನೋಟ್ಬುಕ್ ವಿತರಿಸಲಾಗಿದೆ. ಮಕ್ಕಳು ಚೆನ್ನಾಗಿ ಓದುವ ಮೂಲಕ ಶೈಕ್ಷಣಿಕ ಸಾಧನೆ ಮಾಡಿ, ನಮ್ಮ ಊರಿಗೆ ಕೀರ್ತಿ ತರುವ ಕಾರ್ಯ ಮಾಡಬೇಕೆಂದು ಅವರು ಈ ವೇಳೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ಸಂತೋಷ ನಾಯ್ಕ, ಈಶ್ವರ ಗೌಡ, ಶಿವರಾಮ ಮೂರುರ, ಮಂಜುನಾಥ ಗೌಡ ಇತರರು ಇದ್ದರು.