ಕುಮಟಾ: ಕ್ಷೌರಿಕ ಬ್ರಿಗೇಡ್- ಕರ್ನಾಟಕದ ಉತ್ತರಕನ್ನಡ ಜಿಲ್ಲಾ ಘಟಕದಿಂದ ರಾಷ್ಟ್ರೀಯ ಮಟ್ಟದಲ್ಲಿ ಬೆಳ್ಳಿ ಮತ್ತು ಕಂಚಿನ ಪದಕ ಪಡೆದ ಕರಾಟೆಪಟು ಅಜಿತ್ ಕೊಡಿಯಾ ಅವರನ್ನು ಸನ್ಮಾನಿಸಲಾಯಿತು.
ಪಟ್ಟಣದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸನ್ಮಾನ ಕಾರ್ಯಕ್ರಮವನ್ನು ಜೆಡಿಎಸ್ ಮುಖಂಡ ಸೂರಜ ನಾಯ್ಕ ಸೋನಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಸವಿತಾ ಸಮಾಜದ ಕ್ರೀಡಾ ಪ್ರತಿಭೆ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿರುವುದು ಸಮಾಜಕ್ಕೆ ಹೆಮ್ಮೆಯ ಸಂಗತಿ. ಇಂಥ ಕ್ರೀಡಾ ಪ್ರತಿಭೆಯನ್ನು ಪ್ರೋತ್ಸಾಹಿಸುವ ಮೂಲಕ ಇನ್ನಷ್ಟು ಸಾಧನೆ ಪ್ರೇರಣೆ ನೀಡಬೇಕು. ಈ ಸಮಾಜ ಸರ್ವತೋಮುಖ ಅಭಿವೃದ್ಧಿ ಸಾಧಿಸಲು ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಬೇಕು. ಆ ನಿಟ್ಟಿನಲ್ಲಿ ಸಮಾಜದ ಮಕ್ಕಳು ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ರಾಷ್ಟೀಯ ಮಟ್ಟದಲ್ಲಿ ಬೆಳ್ಳಿ ಮತ್ತು ಕಂಚಿನ ಪದಕ ಪಡೆದ ಕರಾಟೆಪಟು ಅಜೀತ್ ಕೊಡಿಯಾ ಮತ್ತು ಕರಾಟೆಪಟು ಜಯಂತ ನಾಯ್ಕ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ಸಿದ್ದಾಪುರದ ಅಜಿತ್ ಕೊಡಿಯಾ ಮಾತನಾಡಿ, ಬಹಳ ಕಷ್ಟದಿಂದ ಈ ಸಾಧನೆ ಮಾಡಿದ್ದೇನೆ. ಸಮರ್ಪಕ ಪ್ರೋತ್ಸಾಹ ದೊರೆಯದಂತಹ ಸಂದರ್ಭದಲ್ಲಿ ದೃತಿಗೆಡದೆ ಸತತ ಪ್ರಯತ್ನದ ಮೂಲಕ ರಾಷ್ಟ್ರೀಯ ಮಟ್ಟದ ಕರಾಟೆ ಸ್ಫರ್ದೆಯಲ್ಲಿ ಬೆಳ್ಳಿ ಮತ್ತು ಕಂಚಿನ ಪದಕ ಗಳಿಸಿದ್ದೇನೆ. ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆ ತೈಲ್ಯಾಂಡ್‌ನಲ್ಲಿ ನಡೆಯಲಿದ್ದು, ಅದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ. ಅದಕ್ಕೆ ಸಾಕಷ್ಟು ಹಣ ಕೂಡ ಅವಶ್ಯಕತೆ ಇದೆ. ಕ್ರೀಡಾ ಪ್ರೇಮಿಗಳು ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸವಿತಾ ಸಮಾಜದ ತಾಲೂಕು ಅಧ್ಯಕ್ಷ ನಾಗರಾಜ ಕೋಡಿಯಾ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅಜೀತಾ ಅವರ ತಂದೆ ಗಣಪತಿ ಕೊಡಿಯಾ, ತಾಯಿ ದೇವಿ ಕೊಡಿಯಾ, ಸವಿತಾ ಸಮಾಜದ ಪ್ರಮುಖರಾದ ಸತೀಶ್ ಭಟ್ಕಳ, ಮಹೇಶ ಮಹಾಲೆ, ಮಹೇಶ ಕರ್ಕಿ, ಎಂ.ಟಿ.ಕೊಡಿಯಾ, ನಾರಾಯಣ ಮಹಾಲೆ, ಸಂತೋಷ ಮುಂಡಗೋಡ ಇತರರು ಇದ್ದರು.