ಅಂಕೋಲಾ: ನಾಮಧಾರಿ ಸಮಾಜದ ವಿದ್ಯಾರ್ಥಿಗಳ ಉತ್ತಮ ಶಿಕ್ಷಣ ಪಡೆಯುವುದರೊಂದಿಗೆ ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳುವಂತಾಗಬೇಕು. ಇಲ್ಲಿ ಪ್ರತಿಭಾ ಪುರಸ್ಕಾರ ಪಡೆದವರು ಮುಂದಿನ ದಿನಗಳಲ್ಲಿ ಉತ್ತಮ ಹುದ್ದೆಯಲ್ಲಿದ್ದು ಅತಿಥಿಗಳಾಗಿ ಇದೇ ವೇದಿಕೆ ಅಲಂಕರಿಸುವಂತಾಗಲಿ ಎಂದು ತಾಲೂಕು ನಾಮಧಾರಿ ಆರ್ಯ ಈಡಿಗ ಸಂಘದ ಅಧ್ಯಕ್ಷ ನಾಗೇಶ ನಾಯ್ಕ ಆಚಾ ಹೇಳಿದರು.
ಪಟ್ಟಣದ ನಾಮಧಾರಿ ಕಲ್ಯಾಣ ಮಂಟಪದಲ್ಲಿ ನಾಮಧಾರಿ ಆರ್ಯ ಈಡಿಗ ಸಂಘ, ಕರ್ನಾಟಕ ಆರ್ಯ ಈಡಿಗ (ನಾಮಧಾರಿ) ಸಂಘದ ಆಶ್ರಯದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಮಿತ್ತ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಸಮುದಾಯದ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ವಿವಿಧ ಹುದ್ದೆ ಏರಿದರೂ ಕೂಡ ಸಮುದಾಯದ ಮೇಲೆ ಪ್ರೀತಿ ಇರಲಿ. ನಿಮ್ಮಿಂದಾದ ಸಹಾಯ-ಸಹಕಾರ ಮಾಡಿ ಎಂದರು.
ಅಧ್ಯಕ್ಷತೆ ವಹಿಸಿದ ಕರ್ನಾಟಕ ಆರ್ಯ ಈಡಿಗ (ನಾಮಧಾರಿ) ಸಂಘದ ಅಧ್ಯಕ್ಷ ರವೀಂದ್ರ ನಾಯ್ಕ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಮಧಾರಿಗಳು ಅಂಕೋಲಾದಲ್ಲಿ ಜನಸಂಖ್ಯೆಯಲ್ಲಿ 5 ನೇ ಸ್ಥಾನಗಳಿದ್ದರೂ ಅತ್ಯಂತ ವೈವಿಧ್ಯಮಯವಾದ ಸಂಸ್ಕೃತಿ ಇಲ್ಲಿ ಅಡಗಿದೆ. ವಿಶೇಷವಾಗಿ ನಾಮಧಾರಿ ದಹಿಂಕಾಲ ಉತ್ಸವ, ಸುಗ್ಗಿ ಕುಣಿತ ಸೇರಿದಂತೆ ಕಣ್ಣಿಗೆ ಕಟ್ಟುವಂತಹ ವೈವಿಧ್ಯತೆಯಿದೆ. ಸಮಾಜ ಕಟ್ಟಲು ಯಾರೇ ಮುಂದಾದರೂ ಅವರಿಗೆ ಪ್ರೋತ್ಸಾಹ ನೀಡಬೇಕು. ಇಲ್ಲದಿದ್ದರೆ ತಮ್ಮಷ್ಟಕ್ಕೆ ಸುಮ್ಮನಿರಬೇಕು. ಅದನ್ನು ಬಿಟ್ಟು ಯಾವುದೇ ಕಾರಣಕ್ಕೂ ಸಮಾಜದಲ್ಲಿ ಒಡಕು ತರುವಂತಹ ದುಸ್ಸಾಹಸಕ್ಕೆ ಯಾರು ಕೈ ಹಾಕುವುದು ಸಮಂಜಸವಲ್ಲ ಎಂದರು.
ಶ್ರೀ ನಾರಾಯಣಗುರು ವೇದಿಕೆಯ ಅಧ್ಯಕ್ಷ ನಾಗರಾಜ ಮಂಜಗುಣಿ ಮಾತನಾಡಿ, ರಾಜ್ಯದಲ್ಲಿ 70 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಈಡಿಗ ಸಮುದಾಯಕ್ಕೆ ಇನ್ನುವರೆಗೂ ನಿಗಮ ಮಂಡಳಿ ಸ್ಥಾಪಿಸಿಲ್ಲ. ಈ ಕುರಿತು ಅಲ್ಲಲ್ಲಿ ನಿರಂತರವಾಗಿ ಹೋರಾಟಗಳು ನಡೆಯುತ್ತಿವೆ. ಇಲ್ಲಿ ಕೆಲವೇ ಕೆಲವರು ಶ್ರೀಮಂತರಿದ್ದಾರೆ. ಆದರೆ ಲಕ್ಷಾಂತರ ಕುಟುಂಬ ಇವತ್ತಿಗೂ ತೀರಾ ದುಸ್ಥಿತಿಯಲ್ಲಿವೆ. ಹೀಗಾಗಿ ಅವರನ್ನು ಕೂಡ ಮುಖ್ಯವಾಹಿನಿಗೆ ತರಬೇಕಾದರೆ ಈಡಿಗ ನಿಗಮ ಮಂಡಳಿ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಸಮಾಜದವರು ಯಾರೇ ಹೋರಾಟ ಮಾಡಿದರೂ ಅವರಿಗೆ ಕೈ ಜೋಡಿಸಬೇಕು ಎಂದರು.
ತಾಲೂಕ ನಾಮಧಾರಿ ಆರ್ಯ ಈಡಿಗ ಸಂಘದ ಕಾರ್ಯದರ್ಶಿ ಮೋಹನ ಎಚ್. ನಾಯ್ಕ, ಕರ್ನಾಟಕ ಆರ್ಯ ಈಡಿಗ (ನಾಮಧಾರಿ) ಸಂಘದ ಕಾರ್ಯದರ್ಶಿ ನಾಗೇಶ ಎಸ್. ನಾಯ್ಕ, ಸುಗ್ಗಿ ಸಮಿತಿಯ ಅಧ್ಯಕ್ಷ ವೆಂಕಪ್ಪ ಟಿ. ನಾಯ್ಕ, ನಾಮಧಾರಿ ದಹಿಂಕಾಲ ಸಮಿತಿಯ ಅಧ್ಯಕ್ಷ ಜಟ್ಟಿ ಬಿ. ನಾಯ್ಕ, ಮಾರಿಹೊರಿ ಸಮಿತಿಯ ಅಧ್ಯಕ್ಷ ಉದಯ ಆರ್. ನಾಯ್ಕ, ಗಣೇಶೋತ್ಸವ ಸಮಿತಿಯ ಅಧ್ಯಕ್ಷ ರಮೇಶ ಎಸ್. ನಾಯ್ಕ, ಕರಿದೇವರ ಸಮಿತಿಯ ಅಧ್ಯಕ್ಷ ಏಕನಾಥ ಎಸ್. ನಾಯ್ಕ ಉಪಸ್ಥಿತರಿದ್ದರು.
ದೀಕ್ಷಾ ನಾಗರಾಜ ನಾಯ್ಕ ಪ್ರಾರ್ಥಿಸಿದರು, ಶ್ರೀಧರ ಎಸ್. ನಾಯ್ಕ ಸ್ವಾಗತಿಸಿದರು, ಕಟ್ಟಡ ಸಮಿತಿಯ ಅಧ್ಯಕ್ಷ ಗೋವಿಂದ್ರಾಯ ಕೆ. ನಾಯ್ಕ ಪ್ರಾಸ್ತಾವಿಕ ಮಾತನಾಡಿದರು, ವಾಸುದೇವ ನಾಯ್ಕ ಪ್ರತಿಭಾ ಪುರಸ್ಕಾರದ ಯಾದಿ ವಾಚಿಸಿದರು. ಕೃಷ್ಣಾ ನಾಯ್ಕ ಬೊಬ್ರುವಾಡ ನಿರ್ವಹಿಸಿದರು. ರಾಜೇಶ ಮಿತ್ರಾ ನಾಯ್ಕ ವಂದಿಸಿದರು. ಸಂಘದ ವಿವಿಧ ಪದಾಧಿಕರಗಳು. ಹಳ್ಳಿ ಮಟ್ಟದ ಸಮಿತಿಯವರು, ವಿದ್ಯಾರ್ಥಿ ಪಾಲಕರು ಉಪಸ್ಥಿತರಿದ್ದರು.