ದಾಂಡೇಲಿ: ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಳಿಯಾಳ ಆಶ್ರಯದಡಿ ದಾಂಡೇಲಿ ಬ್ಯಾಡ್ಮಿಂಟನ್ ಅಸೋಶಿಯೇಶನ್ ಸಹಕಾರದಲ್ಲಿ ಹಳಿಯಾಳ, ದಾಂಡೇಲಿ ತಾಲ್ಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ನಗರದ ಸುಭಾಸನಗರದ ಒಳಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಸೋಮವಾರ ಚಾಲನೆ ನೀಡಲಾಯಿತು.
ಇಲ್ಲಿಯ ಶಟಲ್ ಬ್ಯಾಡ್ಮಿಂಟನ್ ಆಟಗಾರ ಕುಮಾರ್ ಕರಗಯ್ಯ ಅವರು ಪಂದ್ಯಾವಳಿಗೆ ಚಾಲನೆಯನ್ನು ನೀಡಿ ಮಾತನಾಡುತ್ತಾ, ಮಕ್ಕಳ ಮಾನಸಿಕ ಹಾಗೂ ದೈಹಿಕ ವಿಕಸನಕ್ಕೆ ಕ್ರೀಡೆ ಸಹಕಾರಿ. ಕ್ರೀಡೆಯಲ್ಲಿ ಸೋಲು, ಗೆಲುವು ಸಹಜ. ಗೆಲುವನ್ನು ಉಳಿಸಿಕೊಳ್ಳುವ ಮೂಲಕ ಹಾಗೂ ಸೋಲನ್ನು ಸವಾಲಾಗಿ ಸ್ವೀಕರಿಸುವ ಮೂಲಕ ಮುಂದಡಿಯಿಡಬೇಕು. ಆಗ ಮಾತ್ರ ಕ್ರೀಡಾ ಭವಿಷ್ಯ ಉಜ್ವಲಗೊಳ್ಳಲು ಸಾಧ್ಯ ಎಂದು ಪಂದ್ಯಾವಳಿಗೆ ಶುಭ ಕೋರಿದರು.
ಮುಖ್ಯ ಅತಿಥಿಗಳಾಗಿ ರಾಜ್ಯ ಸರಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸುರೇಶ ನಾಯಕ, ದಾಂಡೇಲಿ ಬ್ಯಾಡ್ಮಿಂಟನ್ ಅಸೋಶಿಯೇಶನಿನ ಪದಾಧಿಕಾರಿಗಳಾದ ನವೀನ್ ಕಾಮತ್, ಗುರು ಮಠಪತಿ, ವಿನೋದ್ ಬಾಂದೇಕರ, ಸುಧಾಕರ ಶೆಟ್ಟಿ, ಮಿಥುನ್ ನಾಯಕ, ಇನ್ನರ್ ವೀಲ್ ಕ್ಲಬಿನ ಅಧ್ಯಕ್ಷೆ ನೇಹಾ ಕಾಮತ್ ಭಾಗವಹಿಸಿದ್ದರು. ಪಂದ್ಯಾವಳಿಯ ಸಂದರ್ಭದಲ್ಲಿ ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ವಿವೇಕ್ ಕೌರಿಯವರು ಭೇಟಿ ನೀಡಿದ್ದರು.
ಪಂದ್ಯಾವಳಿಯ ತೀರ್ಪುಗಾರರಾಗಿ ಹಾಗೂ ಪಂದ್ಯಾವಳಿಯ ಯಶಸ್ಸಿಗಾಗಿ ದೈಹಿಕ ಶಿಕ್ಷಣ ಶಿಕ್ಷಕರುಗಳಾದ ಎಚ್.ಎಸ್.ಉದ್ದಂಡಿ, ಸೀತರಾಮ ನಾಯ್ಕ, ಡೇವಿಡ್ ದಾನಂ, ಸಮದ್ ಶೇಖ, ವೀಣಾ ಪ್ರಕಾಶ ಮೇಹ್ತಾ, ಮಮತಾ ಕಾಮತ್ ಮೊದಲಾದವರು ಸಹಕರಿಸಿದರು.