ಶಿರಸಿ: ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆ ಇದೀಗ ಬಿಜೆಪಿಗೆ ಮುಳ್ಳಾಗುತ್ತಿದೆ ಎನ್ನಲಾಗಿದೆ. ಪಂಚಾಯತ್ ನಿಂದ ಕೇಂದ್ರದ ವರೆಗೂ ನಮ್ಮದೇ ಸರ್ಕಾರವಿದ್ದು ಹಿಂದೂ ಕಾರ್ಯಕರ್ತರ ಕೊಲೆ ನಿಂತಿಲ್ಲ ಎಂದು ಬಿಜೆಪಿಗರೇ ತಮ್ಮ ಪಕ್ಷದ ವಿರುದ್ಧ ವಿರೋಧ ವ್ಯಕ್ತಪಡಿಸುವುದಕ್ಕೆ ಮುಂದಾಗಿದ್ದಾರೆ.
ಸುಳ್ಯದ ಬೆಳ್ಳಾರೆ ಎಂಬಲ್ಲಿ ಪ್ರವೀಣ್ ನೆಟ್ಟಾರು ಎನ್ನುವ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತನನ್ನ ಮಂಗಳವಾರ ರಾತ್ರಿ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಕೋಳಿ ಅಂಗಡಿ ನಡೆಸುತ್ತಿದ್ದ ಪ್ರವೀಣ್ ಅಂಗಡಿ ಬಾಗಿಲು ಹಾಕಿ ಹೊರಡುವ ವೇಳೆ ಬೈಕ್ ನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದರು. ಮತಾಂದ ಶಕ್ತಿಗಳೇ ಕೊಲೆಯ ಹಿಂದಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದ್ದು ಈಗಾಗಲೇ ಪೊಲೀಸರು ಹಲವರನ್ನ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಇನ್ನು ಬುಧವಾರ ಘಟನೆ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದು ಹಲವು ಹಿಂದೂ ಕಾರ್ಯಕರ್ತರು ಗಾಯಗೊಂಡಿದ್ದಾರೆ. ಇನ್ನು ಈ ವಿಚಾರ ಇದೀಗ ಬಿಜೆಪಿಗೆ ಬಿಸಿ ತುಪ್ಪವಾಗಿದ್ದು, ಬಿಜೆಪಿ ಸರ್ಕಾರದ ವಿರುದ್ಧ ಬಿಜಿಪಿಗರೇ ವಿರೋಧ ವ್ಯಕ್ತಪಡಿಸಲು ಮುಂದಾಗಿದ್ದಾರೆ. ಈಗಾಗಲೇ ಬಾಗಲಕೋಟೆ, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಹಲವೆಡೆ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಸಾಮೂಹಿಕವಾಗಿ ರಾಜಿನಾಮೆಯನ್ನ ಸಲ್ಲಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲೂ ಹಲವು ಬಿಜೆಪಿ ಕಾರ್ಯಕರ್ತರು ಘಟನೆಯನ್ನ ಖಂಡಿಸುತ್ತಿದ್ದು ಬಿಜೆಪಿ ಸರ್ಕಾರದ ವಿರುದ್ಧವೇ ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿದ್ದಾರೆ. ಪಂಚಾಯತ್ ನಿಂದ ಹಿಡಿದು ಕೇಂದ್ರದ ವರೆಗೂ ನಮ್ಮದೇ ಸರ್ಕಾರವಿದೆ. ಆದರೂ ಹಿಂದೂ ಕಾರ್ಯಕರ್ತರ ಕೊಲೆ ಮಾತ್ರ ನಿಂತಿಲ್ಲ. ಹೀಗಾದರೆ ಹಿಂದೂ ಕಾರ್ಯಕರ್ತರನ್ನ ರಕ್ಷಣೆ ಮಾಡುವುದು ಯಾರು, ಮತಾಂದರ ಶಕ್ತಿಯನ್ನ ಮಟ್ಟ ಹಾಕುವುದು ಯಾವಾಗ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ಇನ್ನು ಬಿಜೆಪಿ ನಾಯಕರು ಕೇವಲ ಅಧಿಕಾರ ನಡಿಸುವುದಕ್ಕೆ ಮಾತ್ರ ಕಾರ್ಯಕರ್ತರ ಸಹಾಯವನ್ನ ಪಡೆಯುತ್ತಾರೆ. ಆದರೆ ಪಕ್ಷಕ್ಕಾಗಿ ಹೋರಾಟ ಮಾಡಿದವರ ರಕ್ಷಣೆ ಮಾಡುವುದಿಲ್ಲ. ಹಿಂದೂ ಕಾರ್ಯಕರ್ತರ ಮೇಲೆ ನಮ್ಮದೇ ಸರ್ಕಾರ ಲಾಠಿ ಚಾರ್ಜ್ ಮಾಡಿಸಿದ್ದು ಪಶ್ಚಿಮ ಬಂಗಾಳವನ್ನ ಇದು ನೆನಪಿಸುತ್ತದೇ ಎಂದು ಆಕ್ರೋಶ ಹೊರಹಾಕಿದ್ದಾರೆ. ಇಷ್ಟು ದಿನ ಹಿಂದೂ ಕಾರ್ಯಕರ್ತರ ಹತ್ಯೆ ಆದ ವೇಳೆಯಲ್ಲಿ ಬಿಜೆಪಿ ಕಾರ್ಯಕರ್ತರು ತಮ್ಮ ಪಕ್ಷವನ್ನ, ಸರ್ಕಾರವನ್ನ ಟೀಕಿಸುತ್ತಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಎಂಬAತೆ ತಮ್ಮದೇ ಸರ್ಕಾರದ ವಿರುದ್ಧ ದೊಡ್ಡ ಮಟ್ಟದಲ್ಲಿ ಆಕ್ರೋಶ ಹೊರಹಾಕುತ್ತಿದ್ದು ಇದು ಮುಂದಿನ ಚುನಾವಣೆ ವೇಳೆಗೆ ಪಕ್ಷಕ್ಕೆ ದೊಡ್ಡ ಹೊಡೆತ ಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಇನ್ನೂ ನ್ಯಾಯ ಸಿಗದ ಪರೇಶ್ ಮೆಸ್ತಾ ಪ್ರಕರಣ: ಕಳೆದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೊನೆಯ ಅವಧಿಯಲ್ಲಿ ನಡೆದಿದ್ದ ಹೊನ್ನಾವರದ ಪರೇಶ್ ಮೆಸ್ತಾ ಸಾವಿನ ಪ್ರಕರಣಕ್ಕೆ ಇನ್ನು ನ್ಯಾಯ ಸಿಗದಿರುವುದು ಸಹ ಜಿಲ್ಲೆಯ ಬಿಜೆಪಿ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಪರೇಶ್ ಮೆಸ್ತಾ ಸಾವಿನ ಪ್ರಕರಣದ ತನಿಖೆಯನ್ನ ಸಿಬಿಐ ನಡೆಸುತ್ತಿದ್ದು, ತಮ್ಮ ಸರ್ಕಾರ ಆಡಳಿತಕ್ಕೆ ಬಂದರೆ ಕೊಲೆ ಮಾಡಿದವರಿಗೆ ಶಿಕ್ಷೆ ನೀಡುತ್ತೇವೆ ಎಂದು ಬಿಜೆಪಿ ನಾಯಕರುಗಳು ಹೇಳಿದ್ದರು. ಆದರೆ ಸಿಬಿಐ ತನಿನೆ ಪ್ರಾರಂಭವಾಗಿ ಐದು ವರ್ಷ ಆಗುತ್ತಾ ಬಂದರು ಇಂದಿಗೂ ಪ್ರಕರಣ ಏನಾಗಿದೆ ಎನ್ನುವುದು ಮಾತ್ರ ಯಾರಿಗೂ ತಿಳಿದಿಲ್ಲ.
ಕೇಂದ್ರ, ರಾಜ್ಯದಲ್ಲಿ ಎರಡು ಕಡೆ ನಮ್ಮದೇ ಸರ್ಕಾರವಿದ್ದರು ಪರೇಶ್ ಮೆಸ್ತಾ ಸಾವಿನ ಪ್ರಕರಣ ಭೇದಿಸಲು ಆಗಿಲ್ಲ. ಇದು ಬಿಜೆಪಿ ನಾಯಕರ ನಿರ್ಲಕ್ಷಕ್ಕೆ ಉದಾಹರಣೆ ಎಂದು ಬಿಜೆಪಿ ಕಾರ್ಯಕರ್ತರೇ ಕಿಡಿಕಾರಲು ಮುಂದಾಗಿದ್ದಾರೆ. ಕಾಂಗ್ರೆಸ್ ಆಡಳಿತವಿದ್ದ ವೇಳೆಯಲ್ಲಿ ಕಾಂಗ್ರೆಸ್ ಪಕ್ಷವನ್ನ ದೂರಬಹುದು, ಆದರೆ ಬಿಜೆಪಿಯೇ ಆಡಳಿತದಲ್ಲಿ ಇದ್ದು ಯಾವಾಗ ನ್ಯಾಯ ಕೊಡಿಸುತ್ತೀರಿ ಎಂದು ಆಗ್ರಹಿಸಲು ಮುಂದಾಗಿದ್ದಾರೆ.