ದಾಂಡೇಲಿ: ನಗರದ ವನ್ಯಜೀವಿ ಇಲಾಖೆಯು ತಮ್ಮ ಇಲಾಖಾ ಸಿಬ್ಬಂದಿ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗಲು ಇಲಾಖೆಗೆ ಕಳೆದ ಕೆಲವು ವರ್ಷಗಳ ಹಿಂದೆ ಎಸ್‌ಬಿಐ ಬ್ಯಾಂಕ್‌ನವರು ಕೊಡುಗೆಯಾಗಿ ನೀಡಿದ್ದ ಅಂಬ್ಯುಲೆನ್ಸ್ ಓಮ್ನಿಯನ್ನು ಇದೀಗ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವ ವಾಹನವನ್ನಾಗಿ ಮಾರ್ಪಡಿಸಿ, ಬಳಕೆ ಮಾಡುತ್ತಿರುವುದಕ್ಕೆ ನಗರದ ಆಟೋ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವನ್ಯಜೀವಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳ ಜನರಿಗೆ ಅನುಕೂಲವಾಗಲೆಂದು ನೀಡಲಾದ ಅಂಬ್ಯುಲೆನ್ಸ್ ಇದೀಗ ಶಾಲಾ ವಾಹನವಾಗಿ ಬಳಕೆಯಾಗುತ್ತಿದೆ. ಇದರಿಂದ ಮೂರ್ನಾಲ್ಕು ಆಟೋ ಚಾಲಕರಿಗೆ ಸಿಗುವ ನಿತ್ಯದ ಶಾಲಾ ಬಾಡಿಗೆಯೂ ತಪ್ಪಿದಂತಾಗಿದೆ. ಆಟೋ ಚಾಲಕರಾದ ನಾವು ಮೊದಲೇ ಸಂಕಷ್ಟದಲ್ಲಿ ಬದುಕು ನಡೆಸುತ್ತಿದ್ದೇವೆ. ವನ್ಯಜೀವಿ ಇಲಾಖೆಯವರು ಇಲಾಖೆಯ ಶಾಲಾ ವಾಹನವನ್ನು ಸ್ಥಗಿತಗೊಳಿಸದಿದ್ದಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಆಟೋ ಚಾಕಲಕರ ಸಂಘದ ಅಧ್ಯಕ್ಷ ಬಾಬಾಸಾಬ ಜಮಾದಾರ ಒತ್ತಾಯಿಸಿದ್ದಾರೆ.