Slide
Slide
Slide
previous arrow
next arrow

ಅಗ್ನಿಶಾಮಕ ಠಾಣೆ ಪ್ರಾರಂಭಕ್ಕೆ ಜಾಗ ನೀಡಲು ತರಾತುರಿ ನಿರ್ಧಾರ ಬೇಡವೆಂದ ನಗರಸಭೆ ಸದಸ್ಯರು

300x250 AD

ದಾಂಡೇಲಿ: ಅಗ್ನಿಶಾಮಕ ಠಾಣೆ ಪ್ರಾರಂಭಿಸಲು ಜಾಗ ನೀಡಲು ತರಾತುರಿ ನಿರ್ಧಾರ ಕೈಗೊಳ್ಳದಂತೆ ಹಾಗೂ ಇದಕ್ಕಾಗಿ ಸಮರ್ಪಕ ಚರ್ಚೆ ನಡೆಸಿ ಕ್ರಮ ಕೈಗೊಳ್ಳಲು ನಗರಸಭೆಯ ಅಧ್ಯಕ್ಷೆ ಸರಸ್ವತಿ ರಜಪೂತ್ ಅವರ ಅಧ್ಯಕ್ಷತೆಯಲ್ಲಿ ನಗರಸಭೆಯ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಯಿತು.

ಸಭೆಯಲ್ಲಿ ನೂತನವಾಗಿ ಅಗ್ನಿಶಾಮಕ ಠಾಣೆ ಪ್ರಾರಂಭಿಸಲು ಕಾಯ್ದಿರಿಸಿದ ಜಾಗವನ್ನು ರದ್ದುಪಡಿಸಿ ಬೇರೆ ಸ್ಥಳದಲ್ಲಿ ಮಾಡುವ ಬಗ್ಗೆ ಅರ್ಜಿ ಬಂದಿರುವುದನ್ನು ಸರಸ್ವತಿ ರಪಜೂತ್ ಅವರು ಸಭೆಯ ಗಮನಕ್ಕೆ ತಂದರು. ಅಗ್ನಿಶಾಮಕ ಠಾಣೆಗೆ ಎರಡು ಎಕರೆ ಜಾಗ ನೀಡುವ ಬಗ್ಗೆ ತರಾತುರಿ ನಿರ್ಧಾರ ತೆಗೆದುಕೊಳ್ಳುವುದು ಬೇಡ. ಇದು ಹಣಕಾಸಿನ ವಿಚಾರವಲ್ಲ. ಜಾಗದ ವಿಚಾರ. ಹಾಗೆಂದು ಅಗ್ನಿಶಾಮಕ ಠಾಣೆಗೆ ನಮ್ಮ ವಿರೋಧವಿಲ್ಲ. ಆದರೆ ಅಗ್ನಿಶಾಮಕ ಠಾಣೆಗೆ ಜಾಗ ನೀಡಲು ಸೂಕ್ತ ರೀತಿಯಲ್ಲಿ ಚರ್ಚಿಸಿ, ಕ್ರಮ ಕೈಗೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ಈ ವಿಷಯವನ್ನು ಮುಂದಿನ ಸಭೆಗೆ ಮುಂದೂಡಬೇಕೆಂದು ನಗರ ಸಭಾ ಸದಸ್ಯರಾದ ರೋಶನಜಿತ್, ಮೋಹನ ಹಲವಾಯಿ, ನಂದೀಶ್ ಮುಂಗರವಾಡಿ, ಬುದ್ದಿವಂತಗೌಡ ಪಾಟೀಲ, ಆಸೀಪ್ ಮುಜಾವರ, ಅನಿಲ್ ನಾಯ್ಕರ್ ಮೊದಲಾದವರು ಆಗ್ರಹಿಸಿ, ಸಲಹೆ ನೀಡಿದರು.

ಅನುದಾನಕ್ಕೆ ಕ್ರಿಯಾಯೋಜನೆ ತಯಾರಿಸುವಾಗ ಎಲ್ಲ ಸದಸ್ಯರ ಗಮನಕ್ಕೆ ತರಬೇಕು ಹಾಗೂ ಸರಕಾರದಿಂದ ಬರುವ ವಿವಿಧ ಅನುದಾನಗಳ ಬಗ್ಗೆಯೂ ಮಾಹಿತಿ ನೀಡಿ, ಎಲ್ಲ ಸದಸ್ಯರೊಂದಿಗೆ ಚರ್ಚಿಸಿ, ಅನುದಾನವನ್ನು ಅಗತ್ಯತೆಗೆ ಅನುಸಾರವಾಗಿ ಆಯಾಯ ವಾರ್ಡ್ ವಾರು ಹಂಚಿಕೆ ಮಾಡಬೇಕೆಂದು ರೋಶನಜಿತ್, ಮೋಹನ ಹಲವಾಯಿ, ಬುದ್ದಿವಂತ ಗೌಡ ಪಾಟೀಲ ಮೊದಲಾದವರು ಒತ್ತಾಯಿಸಿದರು.

ಕೋರ್ಟ್ ಕೇಸಿನಿಂದ ಆದೇಶ ಪಡೆದ ನಗರದ ಜೆ.ಎನ್.ರಸ್ತೆ ಮತ್ತು ಲೆನಿನ್ ರಸ್ತೆಯಲ್ಲಿರುವ ಮಳಿಗೆಗಳ ಬಗ್ಗೆಯೂ ಚರ್ಚೆ ನಡೆದು, ನಿಯಾಮವಳಿಯಂತೆ ಹರಾಜು ಮಾಡುವುದಾದರೂ ಮಳಿಗೆಯನ್ನು ಹೊಂದಿದವರಿಗೆ ಮೊದಲ ಆಧ್ಯತೆಯನ್ನು ನೀಡುವಂತೆ ಚರ್ಚಿಸಲಾಯ್ತು. ಒಳಚರಂಡಿ ವ್ಯವಸ್ಥೆಯನ್ನು ಒದಗಿಸುವ ಯೋಜನೆಯ ನಿರ್ವಹಣಾ ವೆಚ್ಚವನ್ನು ಮೀಸಲಿಡುವ ಬಗ್ಗೆ ಪ್ರಸ್ತಾಪ ಬಂದಾಗ ಈ ಬಗ್ಗೆ ಕೂಲಂಕುಷವಾಗಿ ವರದಿ ತರಿಸಿಕೊಂಡು ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಬೇಕೆಂದು ತೀರ್ಮಾನಿಸಲಾಯಿತು.

300x250 AD

47 ನಿವೇಶನಗಳನ್ನು ಲೀಸ್‌ದಾರರಿಗೆ ಮಂಜೂರು ನೀಡುವ ವಿಷಯ ಚರ್ಚೆಗೆ ಬಂದಾಗ ನರೇಂದ್ರ ಚೌವ್ಹಾಣ್, ನಂದೀಶ್ ಮುಂಗರವಾಡಿ, ರೋಶನಜಿತ್, ಮೋಹನ ಹಲವಾಯಿ, ಆಷ್ಪಾಕ್ ಶೇಖ, ಬುದ್ದಿವಂತಗೌಡ ಪಾಟೀಲ, ಸೇರಿದಂತೆ ಹಲವು ಸದಸ್ಯರು 99 ವರ್ಷ ಮತ್ತು 5 ವರ್ಷ ಲೀಸ್ ನಿವೇಶನದ ಜೊತೆಗೆ ಇದನ್ನು ಸೇರಿಸಿ ಸರಕಾರಕ್ಕೆ ಪ್ರಸ್ತಾವಣೆಯನ್ನು ಕಳುಹಿಸಿಕೊಡುವಂತೆ ಅಭಿಪ್ರಾಯ ನೀಡಿದರು. ಅಕ್ರಮ ಪಟ್ಟ ನಿವೇಶನಗಳ ಬಗ್ಗೆ ಆಡಳಿತ ಪಕ್ಷದ ಸದಸ್ಯ ನಂದೀಶ ಮುಂಗರವಾಡಿಯವರು ಪ್ರಶ್ನಿಸಿ ಗಮನ ಸೆಳೆದರು. ಹೀಗೆ ವಿವಿಧ ವಿಚಾರಗಳ ಬಗ್ಗೆ ನಗರ ಸಭೆಯಲ್ಲಿ ಚರ್ಚೆ ನಡೆಯಿತು. ನಗರ ಸಭೆಯ ಸಾಮಾನ್ಯ ಸಭೆಯಲ್ಲಿ ಆಡಳಿತ ಪಕ್ಷ, ವಿರೋಧ ಪಕ್ಷ ಎನ್ನದೇ ಚರ್ಚೆ ನಡೆದಿದ್ದು ವಿಶೇಷವಾಗಿತ್ತು. ತಿಂಗಳಿಗೊಮ್ಮೆ ನಡೆಯಬೇಕಾಗಿದ್ದ ಸಾಮಾನ್ಯ ಸಭೆ ಈ ಬಾರಿ ಮರ‍್ನಾಲ್ಕು ತಿಂಗಳ ಬಳಿಕ ನಡೆಯುಯತ್ತಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿ ತಿಂಗಳಿಗೊಮ್ಮೆ ಸಭೆ ನಡೆಸುವಂತೆ ಸದಸ್ಯರು ಒತ್ತಾಯಿಸಿದರು.

ಸಭೆಯಲ್ಲಿ ನಗರಸಭೆಯ ಉಪಾಧ್ಯಕ್ಷ ಸಂಜಯ್ ನಂದ್ಯಾಳ್ಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಮೌಲಾಲಿ ಮುಲ್ಲಾ, ಪೌರಾಯುಕ್ತ ಆರ್.ಎಸ್.ಪವಾರ್ ಹಾಗೂ ಸದಸ್ಯರು ಇದ್ದರು.

Share This
300x250 AD
300x250 AD
300x250 AD
Back to top